ADVERTISEMENT

ಕಾಲೇಜುಗಳ ವಿರುದ್ಧ ಸಿಬಲ್ ಕಿಡಿ

​ಪ್ರಜಾವಾಣಿ ವಾರ್ತೆ
Published 15 ಜೂನ್ 2011, 19:30 IST
Last Updated 15 ಜೂನ್ 2011, 19:30 IST

ನವದೆಹಲಿ (ಪಿಟಿಐ): ನೂರಕ್ಕೆ ನೂರು ಅಂಕಗಳಿಸಿದವರಿಗೆ ಮಾತ್ರ ವಾಣಿಜ್ಯ ಪದವಿ ಕೋರ್ಸ್‌ಗೆ  ಪ್ರವೇಶ ಎಂಬ ನಿಲುವು ತಳೆದಿರುವ ಇಲ್ಲಿನ ಶ್ರೀರಾಮ್ ವಾಣಿಜ್ಯ ಕಾಲೇಜಿನ ವಿರುದ್ಧ ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವ ಕಪಿಲ್ ಸಿಬಲ್ ಕಿಡಿಕಾರಿದ್ದಾರೆ.

ಅತ್ಯಧಿಕ ಅಂಕ ಗಳಿಸಿದವರಿಗೆ ಮಾತ್ರ ವಿವಿಧ ವಿಷಯಗಳ ಪದವಿ ಕೋರ್ಸ್‌ಗಳಿಗೆ ಪ್ರವೇಶ ಎಂಬ ಧೋರಣೆ ಹೊಂದಿರುವ ದೆಹಲಿ ವಿಶ್ವವಿದ್ಯಾಲಯದ ಅನೇಕ ಪ್ರತಿಷ್ಠಿತ ಕಾಲೇಜುಗಳ ವಿರುದ್ಧವೂ ಅವರು  ಆಕ್ರೋಶ ವ್ಯಕ್ತಪಡಿಸಿದ್ದಾರೆ.

`ಇಂತಹ ಧೋರಣೆ ನಿಜಕ್ಕೂ ವಿಷಾದಕರ. ಸರ್ಕಾರ ಈ ವಿಚಾರದಲ್ಲಿ ಖಂಡಿತವಾಗಿ ಮಧ್ಯ ಪ್ರವೇಶಿಸಿ ಪೋಷಕರ ಮತ್ತು ವಿದ್ಯಾರ್ಥಿಗಳ ಹಿತ ಕಾಯಲಿದೆ~ ಎಂದು ಅವರು ಬುಧವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.

`ತಾವು ಬಯಸಿದ ವಿಷಯದಲ್ಲಿ ವ್ಯಾಸಂಗ ಮಾಡಲು ವಿದ್ಯಾರ್ಥಿಗಳಿಗೆ ಅವಕಾಶ ಇರಬೇಕು. ಯಾವುದೇ ವಿದ್ಯಾರ್ಥಿ ಇದರಿಂದ ವಂಚಿತನಾಗಬಾರದು. ಈ ನಿಟ್ಟಿನಲ್ಲಿ ಶಿಕ್ಷಣ ನೀತಿಯಲ್ಲಿ ಸುಧಾರಣೆ ತರಲು ತಮ್ಮ ಸಚಿವಾಲಯವು ತ್ವರಿತಗತಿಯಲ್ಲಿ ಶ್ರಮಿಸುತ್ತಿದೆ~ ಎಂದು ಸಿಬಲ್ ಹೇಳಿದ್ದಾರೆ.

ಈ ಮಧ್ಯೆ ಶ್ರೀರಾಮ್ ವಾಣಿಜ್ಯ ಕಾಲೇಜಿನ ಆಡಳಿತ ಮಂಡಳಿ `ಕಳೆದ 20 ವರ್ಷಗಳಿಂದ ನಾವು ನೂರಕ್ಕೆ ನೂರು ಅಂಕ ಪಡೆದವರನ್ನು ಮಾತ್ರ ದಾಖಲು ಮಾಡಿಕೊಳ್ಳುತ್ತಿದ್ದೇವೆ. ಇದರಲ್ಲಿ ತಪ್ಪೇನಿದೆ~ ಎಂದು ತನ್ನ ಧೋರಣೆಯನ್ನು ಸಮರ್ಥಿಸಿಕೊಂಡಿದೆ.

`ಇನ್ನು ನಾಲ್ಕು ಪ್ರವೇಶಾತಿ ಪಟ್ಟಿ ಪ್ರಕಟವಾಗಲಿದ್ದು, ಅದರಲ್ಲಿ ಕಡಿಮೆ ಅಂಕ ಗಳಿಸಿದವರಿಗೂ ಪ್ರವೇಶಕ್ಕೆ ಅವಕಾಶ ಸಿಗಲಿದೆ~ ಎಂದು ದೆಹಲಿ ವಿಶ್ವವಿದ್ಯಾಲಯದ ಉಪಕುಲಪತಿ ದಿನೇಶ್ ಸಿಂಗ್ ಹೇಳಿದ್ದಾರೆ.

`ಈ ಬಾರಿ 12ನೇ ತರಗತಿ ಫಲಿತಾಂಶ ಉತ್ತಮವಾಗಿದೆ. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಅಧಿಕ ಅಂಕಗಳಿಸಿದ್ದಾರೆ. ಆದ್ದರಿಂದ ಪದವಿ ತರಗತಿ ಪ್ರವೇಶಾತಿಯಲ್ಲಿ ಈ ರೀತಿ ಆಗಿದೆ~ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.