ADVERTISEMENT

ಕಾವೇರಿಗೆ ತಾತ್ಕಾಲಿಕ `ಉಸ್ತುವಾರಿ'

ನ್ಯಾಯಮಂಡಳಿ ತೀರ್ಪು ಅನುಷ್ಠಾನಕ್ಕೆ ಸುಪ್ರೀಂ ಸೂತ್ರ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2013, 19:20 IST
Last Updated 22 ಏಪ್ರಿಲ್ 2013, 19:20 IST

ನವದೆಹಲಿ: ಕಾವೇರಿ ನ್ಯಾಯಮಂಡಳಿ ಅಂತಿಮ ತೀರ್ಪು ಅನುಷ್ಠಾನದ ಉಸ್ತುವಾರಿಗೆ `ತಾತ್ಕಾಲಿಕ ವ್ಯವಸ್ಥೆ' ರೂಪಿಸುವ ಕುರಿತು ಸುಪ್ರೀಂ ಕೋರ್ಟ್ ಸೋಮವಾರ ಒಲವು ತೋರಿತು.

ಕರ್ನಾಟಕ-  ತಮಿಳುನಾಡು ಮತ್ತಿತರ ರಾಜ್ಯಗಳ ನಡುವೆ ನೀರು ಹಂಚಿಕೆ ಉಸ್ತುವಾರಿಗೆ ಯಾವುದಾದರೊಂದು ತಾತ್ಕಾಲಿಕ ವ್ಯವಸ್ಥೆ ರೂಪಿಸುವ ಅಗತ್ಯವಿದೆ. ಆದರೆ, ಇದು ಕಾವೇರಿ ನ್ಯಾಯಮಂಡಳಿ ಅಂತಿಮ ತೀರ್ಪು ಪ್ರಶ್ನಿಸಿ ವಿಶೇಷ ಮೇಲ್ಮನವಿ ಸಲ್ಲಿಸಿರುವ ರಾಜ್ಯಗಳ ಹಕ್ಕಿಗೆ ಚ್ಯುತಿ ತರುವಂತಿರಬಾರದು ಎಂದು ಕೋರ್ಟ್ ಅಭಿಪ್ರಾಯಪಟ್ಟಿತು.

ಕಾವೇರಿ ನೀರು ಹಂಚಿಕೆಗೆ `ನಿರ್ವಹಣಾ ಮಂಡಳಿ' ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೇಳಿ ತಮಿಳುನಾಡು ಸಲ್ಲಿಸಿರುವ ಮಧ್ಯಂತರ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಆರ್.ಎಂ. ಲೋಧಾ ಮತ್ತು ಕುರಿಯನ್ ಜೋಸೆಫ್ ಅವರನ್ನೊಳಗೊಂಡ ನ್ಯಾಯಪೀಠ `ತಾತ್ಕಾಲಿಕ' ವ್ಯವಸ್ಥೆ' ರೂಪಿಸುವ ಸಲಹೆ ಮುಂದಿಟ್ಟಿತು.

ತಮಿಳುನಾಡು ಅರ್ಜಿ ಸಂಬಂಧ ನ್ಯಾಯಪೀಠವು ಕೇಂದ್ರ, ಕರ್ನಾಟಕ, ಕೇರಳ ಹಾಗೂ ಪುದುಚೇರಿ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿತು. ಕಾವೇರಿ ನೀರು ಹಂಚಿಕೆ ಉಸ್ತುವಾರಿಗೆ ನಿರ್ವಹಣಾ ಮಂಡಳಿ ಹಾಗೂ ನಿಯಂತ್ರಣ ಸಮಿತಿ ರಚಿಸಬೇಕು ಎನ್ನುವ ತಮಿಳುನಾಡು ಮನವಿ ಕುರಿತು ಎರಡು ವಾರದಲ್ಲಿ ಉತ್ತರ ನೀಡುವಂತೆ ಹೇಳಲಾಗಿದೆ.

ಕಾವೇರಿ ನ್ಯಾಯಮಂಡಳಿ 2007ರ ಫೆಬ್ರುವರಿ 5ರಂದು ನೀಡಿರುವ ಅಂತಿಮ ತೀರ್ಪು ಅಧಿಸೂಚನೆ ಕಳೆದ ಫೆಬ್ರುವರಿ 19ರಂದು ಪ್ರಕಟಿಸಲಾಗಿದೆ. ನದಿ ನೀರು ಹಂಚಿಕೆ ಕುರಿತು ಕಾವೇರಿ ನ್ಯಾಯಮಂಡಳಿ ನೀಡಿರುವ ತೀರ್ಪಿನ ಅನುಷ್ಠಾನಕ್ಕೆ ನಿರ್ವಹಣಾ ಮಂಡಳಿ ಮಾದರಿಯಲ್ಲಿ `ಸಂಪೂರ್ಣ ಸ್ವತಂತ್ರ ಸಂಸ್ಥೆ' ಸ್ಥಾಪಿಸುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಬೇಕೆಂದು ತಮಿಳುನಾಡು ಪರವಾಗಿ ಹಾಜರಾದ ಹಿರಿಯ ವಕೀಲ ಸಿ.ಎಸ್. ವೈದ್ಯನಾಥನ್ ಹೇಳಿದರು.

ಕೇಂದ್ರ ಸರ್ಕಾರ ನ್ಯಾಯಮಂಡಳಿ ಅಂತಿಮ ತೀರ್ಪು ಅಧಿಸೂಚನೆ ಹೊರಡಿಸಿದ ಬಳಿಕ `ಕಾವೇರಿ ನದಿ ಪ್ರಾಧಿಕಾರ' ಹಾಗೂ `ಕಾವೇರಿ ಉಸ್ತುವಾರಿ ಸಮಿತಿ' ರದ್ದಾಗಿದ್ದು, ಮತ್ತೊಂದು ಹೊಸ ಮಂಡಳಿ ರಚಿಸುವ ಅಗತ್ಯವಿದೆ ಎಂದು ಅವರು ತಿಳಿಸಿದರು.

ಕರ್ನಾಟಕದ ಪರ ವಾದಿಸಿದ ಹಿರಿಯ ವಕೀಲ ಅನಿಲ್ ದಿವಾನ್, `ನಿರ್ವಹಣಾ ಮಂಡಳಿ ರಚಿಸಬೇಕು ಎನ್ನುವುದು ಕೇವಲ ಶಿಫಾರಸು. ನ್ಯಾಯಮಂಡಳಿ ತೀರ್ಪು ಪ್ರಶ್ನಿಸಿ ಸಲ್ಲಿಸಿರುವ ವಿಶೇಷ ಮೇಲ್ಮನವಿ ಇತ್ಯರ್ಥವಾಗುವವರೆಗೂ ಮಧ್ಯಂತರ ತೀರ್ಪು ಮುಂದುವರಿಯಲಿದೆ' ಎಂದರು. ಅನಂತರ ನ್ಯಾಯಪೀಠ ತಮಿಳುನಾಡು ಅರ್ಜಿ ಕುರಿತು ಉತ್ತರಿಸುವಂತೆ ಉಳಿದ ರಾಜ್ಯಗಳಿಗೆ ಕೇಳಿತು. ಕರ್ನಾಟಕದ ನಿಲುವಿಗೆ ಪ್ರತಿಕ್ರಿಯಿಸಲು ತಮಿಳುನಾಡಿಗೆ ಹತ್ತು ದಿನ ಕಾಲಾವಕಾಶ ನೀಡಿತು.

ನ್ಯಾಯಮಂಡಳಿ ಅಂತಿಮ ತೀರ್ಪಿನ ಅನ್ವಯ ಕಾವೇರಿ ನೀರಿನಲ್ಲಿ ಕರ್ನಾಟಕ 270, ತಮಿಳುನಾಡು 419, ಕೇರಳ 30 ಹಾಗೂ ಪುದುಚೇರಿ 7 ಟಿಎಂಸಿ ಅಡಿ ನೀರು ಪಡೆದಿವೆ.

ತಮಿಳುನಾಡು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಮಧ್ಯಂತರ ಅರ್ಜಿಯಲ್ಲಿ, `ನ್ಯಾಯಮಂಡಳಿ ಅಂತಿಮ ತೀರ್ಪು ಅಧಿಸೂಚನೆ  ಪ್ರಕಟಿಸಿದ ನಂತರವೂ ಕೇಂದ್ರ ಸರ್ಕಾರ ನಿರ್ವಹಣಾ ಮಂಡಳಿ ರಚಿಸಿಲ್ಲ. ಈ ಸಂಬಂಧ ಮುಖ್ಯಮಂತ್ರಿ ಜಯಲಲಿತಾ, ಪ್ರಧಾನಿ ಸಿಂಗ್ ಮತ್ತು ಜಲ ಸಂಪನ್ಮೂಲ ಸಚಿವಾಲಯಕ್ಕೆ ಎರಡು ಪತ್ರ ಬರೆದರೂ ಪ್ರಯೋಜನವಾಗಿಲ್ಲ' ಎಂದು ಆರೋಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.