ನವದೆಹಲಿ: ಕರ್ನಾಟಕ ರಾಜ್ಯವು ಕಾವೇರಿ ನದಿ ಪಾತ್ರದ ಅಣೆಕಟ್ಟುಗಳಿಂದ ಅಧಿಕ ನೀರು ಹರಿಸಿಕೊಳ್ಳುತ್ತಿದೆ ಎಂದು ದೂರಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಳ್ಳಲು ಸುಪ್ರೀಂಕೋರ್ಟ್ ಶುಕ್ರವಾರ ನಿರಾಕರಿಸಿತು. ಆದರೆ ಈ ಕುರಿತು ಏ.23ರಂದು ತನ್ನ ಗಮನಕ್ಕೆ ತರುವಂತೆ ತಮಿಳುನಾಡು ಪರ ವಕೀಲರಿಗೆ ಇದೇ ವೇಳೆ ಸೂಚಿಸಿತು.
ಅರ್ಜಿಯ ವಿಚಾರಣೆ ನಡೆಸಲು ತಮಿಳುನಾಡು ಪರ ವಕೀಲ ಸಿ.ಎಸ್.ವೈದ್ಯನಾಥನ್ ಮಾಡಿದ ಮನವಿಯನ್ನು ನ್ಯಾಯಮೂರ್ತಿಗಳಾದ ಡಿ.ಕೆ.ಜೈನ್ ಮತ್ತು ಎ.ಆರ್.ದವೆ ಅವರನ್ನು ಒಳಗೊಂಡ ಪೀಠ ಮಾನ್ಯ ಮಾಡಲಿಲ್ಲ.
ಕೆಆರ್‌ಎಸ್, ಕಬಿನಿ, ಹೇಮಾವತಿ ಮತ್ತು ಹಾರಂಗಿ ಜಲಾಶಯಗಳಿಂದ ಬೇಸಿಗೆ ಬೆಳೆಗೆ ನೀರು ಬಳಸದಂತೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಬೇಕು. ಈಗಾಗಲೇ ಕರ್ನಾಟಕ 29 ಟಿಎಂಸಿ ಅಡಿ ನೀರು ಬಳಸಿಕೊಂಡಿದ್ದು, ಆ ರಾಜ್ಯವು ಹೀಗೆಯೇ ನೀರು ಬಳಸುತ್ತಾ ಹೋದರೆ ತನಗೆ ನೀಡಬೇಕಿರುವ ಬಾಕಿ ನೀರನ್ನು ಹರಿಸಲು ಅದರ ಬಳಿ ನೀರಿನ ಸಂಗ್ರಹವೇ ಇರುವುದಿಲ್ಲ ಎಂದು ವೈದ್ಯನಾಥನ್ ವಾದಿಸಿದರು.
ಆದರೆ ಕರ್ನಾಟಕ ಪರ ವಕೀಲ ಎಫ್.ಎಸ್.ನಾರಿಮನ್ ಇದನ್ನು ಅಲ್ಲಗಳೆದರು. ಕಾವೇರಿ ನೀರು ಹಂಚಿಕೆ ನ್ಯಾಯಮಂಡಲಿಯ ಅಂತಿಮ ತೀರ್ಪಿನ ಅನುಸಾರ, ಬಿಳಿಗುಂಡ್ಲುವಿನಲ್ಲಿರುವ ಮಾಪನ ಸ್ಥಳದ ಮೂಲಕ ವರ್ಷಕ್ಕೆ 192 ಟಿಎಂಸಿ ನೀರನ್ನು ಕರ್ನಾಟಕವು ತಮಿಳುನಾಡಿಗೆ ಹರಿಸಬೇಕು. ಇದನ್ನು ಹೊರತುಪಡಿಸಿ, ಕರ್ನಾಟಕವು ನೀರಾವರಿಗೆ ಒಳಪಡಿಸಬಹುದಾದ ಪ್ರದೇಶದ ಮೇಲಾಗಲೀ ಅಥವಾ ಬೇಸಿಗೆ ಬೆಳೆ ಕುರಿತಾಗಲೀ ಯಾವುದೇ ನಿರ್ಬಂಧವೂ ಇಲ್ಲ ಎಂದು ತಿಳಿಸಿದರು.
ತಮಿಳುನಾಡುವಿಗೆ ಬಿಳಿಗುಂಡ್ಲು ಮೂಲಕ 192 ಟಿಎಂಸಿ ನೀರು ಹರಿಸಿದ್ದೇ ಆದರೆ ಮಿಕ್ಕೆಲ್ಲಾ ನೀರನ್ನು ಬಳಸಿಕೊಳ್ಳಲು ಕರ್ನಾಟಕಕ್ಕೆ ಎಲ್ಲ ಹಕ್ಕೂ ಇದೆ ಎಂದು ಪ್ರತಿಪಾದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.