ADVERTISEMENT

ಕಾಶ್ಮೀರ ಬಂದ್ ಯಶಸ್ವಿ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2011, 19:30 IST
Last Updated 27 ಅಕ್ಟೋಬರ್ 2011, 19:30 IST

ಶ್ರೀನಗರ (ಐಎಎನ್‌ಎಸ್): ಜಮ್ಮು ಮತ್ತು ಕಾಶ್ಮೀರದ ಪ್ರತ್ಯೇಕತಾವಾದಿಗಳು ಗುರುವಾರ ಕರೆ ನೀಡಿದ್ದ ಕಾಶ್ಮೀರ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. 1947ರಲ್ಲಿ ಪಾಕ್ ಬುಡಕಟ್ಟು ಜನಾಂಗದವರನ್ನು ಹಿಮ್ಮೆಟ್ಟಿಸಿ ಭಾರತೀಯ ಸೇನೆ ಇಲ್ಲಿ ಕಾಲಿಟ್ಟ ದಿನವನ್ನು `ಕಾಶ್ಮೀರ ಆಕ್ರಮಿಸಿಕೊಳ್ಳಲು ಆರಂಭಿಸಿದ ದಿನ~ ಎಂದು ಹರಿಯತ್ ಕಾನ್ಫರೆನ್ಸ್ ಕರೆದಿದೆ. ಈ ದಿನದ ಸ್ಮರಣೆಯಲ್ಲಿ ಬಂದ್‌ಗೆ ಕರೆ ನೀಡಲಾಗಿತ್ತು.

ಗುರುವಾರ ಶ್ರೀನಗರದ ಎಲ್ಲ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಹರಿಯತ್ ಕಾನ್ಫರೆನ್ಸ್ ಹಾಗೂ ಇತರ ಪ್ರತ್ಯೇಕತಾವಾದಿ ಸಮೂಹ ಈ ಬಂದ್ ಕರೆ ನೀಡಿದ್ದವು.

ಅವಳಿ ಗ್ರೆನೆಡ್ ದಾಳಿ: ಐವರ ಬಂಧನ
ಶ್ರೀನಗರ (ಪಿಟಿಐ):
ಈ ವರ್ಷ ಆಗಸ್ಟ್ ತಿಂಗಳಿನಲ್ಲಿ ಬಾರಾಮುಲ್ಲಾ ಹಾಗೂ ಬಾಟಾಮುಲ್‌ಗಳಲ್ಲಿ ನಡೆದಿದ್ದ ಅವಳಿ ಗ್ರೆನೆಡ್ ದಾಳಿ ಪ್ರಕರಣವನ್ನು ಬೇಧಿಸಿರುವ ಪೊಲೀಸರು ಲಷ್ಕರ್-ಎ- ತೊಯ್ಬಾ ಸಂಘಟನೆಯಿಂದ ಪ್ರೇರಿತರಾದ ಐವರನ್ನು ಬಂಧಿಸಿದ್ದಾರೆ.

ಭದ್ರತಾ ಪಡೆಯ ಯೋಧರ ಮೇಲೆ ತಾವೇ ದಾಳಿ ನಡೆಸಿರುವುದನ್ನು ವಿಚಾರಣೆಯ ಸಮಯದಲ್ಲಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಲಷ್ಕರ್‌ನ ಉಗ್ರ ಮುಜಾ ಮೋಲ್ವಿ ಎಂಬಾತ ಇವರಿಗೆ ಅಗತ್ಯದ ಗ್ರೆನೆಡ್ ಹಾಗೂ ಸ್ಪೋಟಕ ಸಾಮಗ್ರಿಗಳನ್ನು ನೀಡಿ, ಜನ ನಿಬಿಡ ಪ್ರದೇಶದಲ್ಲಿ ಸ್ಪೋಟಿಸಲು ಸೂಚಿಸಿದ್ದ ಎಂದೂ ವಿಚಾರಣೆಯ ಸಂದರ್ಭದಲ್ಲಿ ಒಪ್ಪಿಕೊಂಡಿದ್ದಾರೆ. ಇವರೆಲ್ಲ ಅಂತರ್ಜಾಲದ ಮೂಲಕ  ಲಷ್ಕರ್- ಎ- ತೊಯ್ಬಾ ಸಂಘಟನೆಯಿಂದ ಪ್ರೇರಣೆ ಪಡೆದು, ನಂತರ ಸಂಪರ್ಕ ಸಾಧಿಸಿದ್ದರು.

ಅಂತರ್ಜಾಲದಿಂದ ಸಂಪರ್ಕ: ಭಯೋತ್ಪಾದನೆಯು ಅಂತರ್ಜಾಲದ ಮೂಲಕ ವ್ಯಾಪಕವವಾಗಿ ಪ್ರಚಾರ ಪಡೆಯುತ್ತಿದೆ. ಅಂತರ್ಜಾಲದಲ್ಲಿ ಯುವಜನಾಂಗವನ್ನು ಉತ್ತೇಜಿಸುವ ಹಾಗೂ ಉದ್ವೇಗಕ್ಕೆ ಒಳಗಾಗುವಂಥ ಹಲವಾರು ವಿಡಿಯೋಗಳಿವೆ. ಯುಟ್ಯೂಬ್‌ನಲ್ಲಿ ಉಗ್ರರ ಉತ್ತೇಜನಕಾರಿ ಭಾಷಣಗಳ ತುಣುಕುಗಳಿವೆ. ಇವುಗಳಿಂದ ಯುವಜನಾಂಗು ಬಲುಬೇಗ ಅವರ ಆಕರ್ಷಣೆಗೆ ಒಳಗಾಗುತ್ತಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಸಾಮಾಜಿಕ ಸಂಪರ್ಕ ತಾಣಗಳನ್ನು ಈ ರೀತಿಯ ಕೃತ್ಯಗಳಿಗೆ ಬಳಸುತ್ತಿರುವುದು ಕಳವಳಕಾರಿಯಾಗಿದೆ. ಈ ಹಿಂದೆ ಎನ್‌ಐಎ ಸಹ ನವದೆಹಲಿ ಹೈಕೋರ್ಟ್ ಸ್ಫೋಟದ ಘಟನೆಯಲ್ಲಿ ಬಂಧಿಸಿರುವ ಯುವಕ ಸಹ ಸ್ವಯಂ ಪ್ರೇರಣೆಯಿಂದ ದುಷ್ಕೃತ್ಯ ಎಸಗಿರುವುದಾಗಿ ಹೇಳಿದ್ದನ್ನು ಸ್ಮರಿಸಬಹುದಾಗಿದೆ. ಹೀಗೆ ಸ್ವಯಂಪ್ರೇರಣೆಗೆ ಒಳಗಾಗಿ ಭಯೋತ್ಪಾದನೆಗೆ ಇಳಿಯುವಂತೆ ಮಾಡುವುದು ಲಷ್ಕರ್‌ನ  ಹೊಸ ತಂತ್ರವಾಗಿದೆ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.