ADVERTISEMENT

ಕಾಸಿಗಾಗಿ ಸುದ್ದಿ: ಖುರೇಷಿ ಆತಂಕ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2011, 17:00 IST
Last Updated 4 ಫೆಬ್ರುವರಿ 2011, 17:00 IST

ನವದೆಹಲಿ (ಐಎಎನ್‌ಎಸ್):   ಮೇ ಒಳಗೆ ಐದು ರಾಜ್ಯಗಳು ವಿಧಾನಸಭಾ ಚುನಾವಣೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ, ‘ಕಾಸಿಗಾಗಿ ಸುದ್ದಿ’ಯ ಬಗ್ಗೆ ಮುಖ್ಯ ಚುನಾವಣಾ ಆಯುಕ್ತ ಎಸ್.ವೈ.ಖುರೇಷಿ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಚುನಾವಣಾ ಪೂರ್ವ ಸಮೀಕ್ಷೆಗಳನ್ನು ನಿಷೇಧಿಸಬೇಕಾದ ಅಗತ್ಯವಿದೆ ಎಂದು ಹೇಳಿದ್ದಾರೆ.

‘ಕಾಸಿಗಾಗಿ ಸುದ್ದಿ’ಯಿಂದ ಮತದಾರರನ್ನು ತಪ್ಪುದಾರಿಗೆ ಎಳೆದಂತಾಗುತ್ತದೆ. ಈ ಬೆಳವಣಿಗೆಯಿಂದ ಎಲ್ಲ ರಾಜಕೀಯ ಪಕ್ಷಗಳೂ ಒಂದಲ್ಲ ಒಂದು ರೀತಿ ತೊಂದರೆ ಅನುಭವಿಸಿರುವುದನ್ನು ಏಕಪಕ್ಷೀಯವಾಗಿ ಒಪ್ಪಿಕೊಂಡಿವೆ. ಈ ಪಿಡುಗಿಗೆ ಕಾನೂನಿನ ನಿರ್ಬಂಧ ವಿಧಿಸಬೇಕಾಗಿದೆ ಎಂದಿದ್ದಾರೆ.

ಬಿಹಾರದಲ್ಲಿ ಆಯೋಗವು ಮಾಧ್ಯಮ ಮೇಲ್ವಿಚಾರಣಾ ಘಟಕ ಹೊಂದಿರುವುದನ್ನು ಆಯುಕ್ತರು ಉದಾಹರಿಸಿದ್ದಾರೆ. ಕಾಸು ಪಡೆದಂತೆ ಕಂಡುಬರುವ ಯಾವುದೇ ಸುದ್ದಿ ಇದ್ದರೂ ಈ ಘಟಕ ಅದನ್ನು ಪರಿಶೀಲಿಸುತ್ತದೆ. ಈವರೆಗೆ ಅಂತಹ 86 ಸುದ್ದಿಗಳಿಗೆ ನೋಟಿಸ್ ನೀಡಲಾಗಿದ್ದು, ಅಭ್ಯರ್ಥಿಗಳನ್ನು ಕರೆಸಿ ಕೇಳಿದಾಗ ಅವರು ಆ ಸುದ್ದಿಗೆ ಹಣ ನೀಡಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಅವರು ಶುಕ್ರವಾರ ಸುದ್ದಿಗಾರರಿಗೆ ವಿವರಿಸಿದರು.

ಚುನಾವಣಾ ಸುಧಾರಣೆಗೆ ಸಂಬಂಧಿಸಿದಂತೆ ಆಯೋಗ ಮತ್ತು ಕಾನೂನು ಸಚಿವಾಲಯವು 7 ಪ್ರಾದೇಶಿಕ ಸಲಹಾ ಸಂಪರ್ಕ ಕಾರ್ಯಕ್ರಮಗಳನ್ನು ನಡೆಸುತ್ತಿವೆ. ಭೋಪಾಲ್, ಮುಂಬೈ, ಕೋಲ್ಕತ್ತ, ಲಖನೌಗಳಲ್ಲಿ ಈಗಾಗಲೇ ಈ ಕಾರ್ಯಕ್ರಮಗಳು ಜರುಗಿದ್ದು, ಬೆಂಗಳೂರು, ಚಂಡೀಗಡ, ಗುವಾಹಟಿಗಳಲ್ಲಿ ಮುಂದೆ ನಡೆಯಲಿವೆ. ಅಪರಾಧಿಗಳು ಚುನಾವಣೆಯಲ್ಲಿ ಸ್ಪರ್ಧಿಸದಂತೆ ತಡೆಯಬೇಕಾಗಿದೆ. ವಿರೋಧಿಗಳು ಸುಳ್ಳು ಪ್ರಕರಣ ದಾಖಲಿಸುವುದಾಗಿ ರಾಜಕೀಯ ಪಕ್ಷಗಳು ಸಮರ್ಥಿಸಿಕೊಳ್ಳುತ್ತವಾದರೂ ಹೇಗಾದರೂ ಮಾಡಿ ಈ ಬೆಳವಣಿಗೆಯನ್ನು ತಡೆಯಬೇಕಾಗಿದೆ ಎಂದ ಅವರು, ಪಕ್ಷಗಳು ಅಂತಹ ಅಭ್ಯರ್ಥಿಗಳಿಗೆ ಟಿಕೆಟ್ ನೀಡಬಾರದು ಎಂದು ಕೋರಿದರು.

ಸರ್ಕಾರಗಳು ಚುನಾವಣೆಗೆ ಹಣ ಒದಗಿಸುತ್ತಿರುವುದು ದುರದೃಷ್ಟಕರ. ಚುನಾವಣೆಗೆ 6 ತಿಂಗಳು ಮೊದಲೇ ಸರ್ಕಾರಿ ಜಾಹೀರಾತುಗಳು ನಿಲ್ಲಬೇಕು. ಇಲ್ಲದಿದ್ದರೆ ಸಾರ್ವಜನಿಕರ ಹಣ ದುರ್ಬಳಕೆ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದರು. ರಾಜಕೀಯ ಪಕ್ಷಗಳನ್ನು ನೋಂದಣಿ ಮಾಡಿಕೊಳ್ಳುವ ಅಧಿಕಾರ ಮಾತ್ರ ಆಯೋಗಕ್ಕಿದೆ. ನೋಂದಣಿಯಾಗಿದ್ದರೂ ಅಸ್ತಿತ್ವದಲ್ಲೇ ಇಲ್ಲದ ಪಕ್ಷಗಳನ್ನು ಕೈಬಿಡುವ ಅಧಿಕಾರವೂ ಅದಕ್ಕೆ ಇರಬೇಕಾಗುತ್ತದೆ ಎಂದರು. ಪಶ್ಚಿಮ ಬಂಗಾಳ, ಕೇರಳ, ಅಸ್ಸಾಂ, ತಮಿಳುನಾಡು ಮತ್ತು ಪುದುಚೇರಿ ಸದ್ಯದಲ್ಲೇ ಚುನಾವಣೆ ಎದುರಿಸಲಿರುವ ರಾಜ್ಯಗಳು.

 ಮತದ ಪುರಾವೆಗೆ ಹೊಸ ವ್ಯವಸ್ಥೆ!
ನವದೆಹಲಿ (ಐಎಎನ್‌ಎಸ್):  ವಿದ್ಯುನ್ಮಾನ ಮತಯಂತ್ರದ ಮೂಲಕ ನಿಮ್ಮ ನೆಚ್ಚಿನ ಅಭ್ಯರ್ಥಿಗೆ ಮತ ಚಲಾಯಿಸುವುದೇನೋ ಸರಿ. ಆದರೆ ನಿಮ್ಮ ಅಮೂಲ್ಯ ಮತ ಅವರ ಬುಟ್ಟಿಗೇ ಹೋಗಿ ಸೇರಿತು ಎಂಬುದಕ್ಕೆ ಖಾತ್ರಿಯಾದರೂ ಏನು?- ಜನರ ಇಂತಹ ಕುತೂಹಲವೊಂದನ್ನು ತಣಿಸುವ ನಿಟ್ಟಿನಲ್ಲಿ ಇದೀಗ ಚುನಾವಣಾ ಆಯೋಗ ಕೆಲಸ ಮಾಡುತ್ತಿದ್ದು, ವಿಶೇಷ ಮುದ್ರಣ ವ್ಯವಸ್ಥೆಯೊಂದನ್ನು ಜಾರಿಗೆ ತರಲಿದೆ.

ಮತಯಂತ್ರದ ಮೂಲಕ ಮತ ಚಲಾಯಿಸಿದ ಕೂಡಲೇ ಎದುರಿಗಿರುವ ಪ್ರಿಂಟರ್ ನಿಮ್ಮ ಆಯ್ಕೆಯನ್ನು ಮುದ್ರಿಸಿ ಪಕ್ಕದಲ್ಲಿರುವ ಪೆಟ್ಟಿಗೆಗೆ ಅದನ್ನು ರವಾನಿಸುತ್ತದೆ. ಆದರೆ ಈ ಪ್ರಿಂಟರ್ ಗಾಜಿನ ಪರದೆಯ ಹಿಂದೆ ಇರುತ್ತದಾದ್ದರಿಂದ ಅದನ್ನು ನೀವು ನೋಡಲು ಮಾತ್ರ ಸಾಧ್ಯ. ‘ಮತದಾನ ಮುಗಿಸಿ ಹೊರ ಬಂದ ಬಳಿಕ ಮತದಾರರಿಗೆ ಬೆದರಿಕೆ ಎದುರಾಗಬಹುದಾದ ಸಾಧ್ಯತೆಯಿಂದ ಮುದ್ರಿತ ರಸೀದಿಯನ್ನು ನೀಡುವುದಿಲ್ಲ’ ಎಂದು ಮುಖ್ಯ ಚುನಾವಣಾ ಆಯುಕ್ತ ಎಸ್.ವೈ.ಖುರೇಷಿ ಸ್ಪಷ್ಟಪಡಿಸಿದ್ದಾರೆ.

ಸ್ಪರ್ಧೆಗೆ ಉತ್ತೇಜನ: ಭಾರತೀಯ ಪಾಸ್‌ಪೋರ್ಟ್ ಹೊಂದಿದ್ದು, ಅನ್ಯ ದೇಶದ ಪೌರತ್ವ ಪಡೆಯದ ಅನಿವಾಸಿ ಭಾರತೀಯರಿಗೆ ಮತ ಹಾಕಲು ಅವಕಾಶ ನೀಡುವ ಸರ್ಕಾರದ ನಿಯಮ, ಅವರು ಚುನಾವಣೆಯಲ್ಲಿ ಸ್ಪರ್ಧಿುವಂತೆಯೂ ಉತ್ತೇಜಿಸಬಹುದು ಎಂದು ಖುರೇಷಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.