ADVERTISEMENT

ಕಿಂಗ್‌ಫಿಷರ್‌: ವಿಮಾನ ಹಾರಾಟ ಪುನರಾರಂಭಕ್ಕೆ ವರದಿ ಅಗತ್ಯ- ಸಚಿವ ಅಜಿತ್

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2012, 19:30 IST
Last Updated 6 ಅಕ್ಟೋಬರ್ 2012, 19:30 IST

ನವದೆಹಲಿ (ಪಿಟಿಐ): ಮತ್ತೆ ವಿಮಾನ ಹಾರಾಟ ಪುನರಾರಂಭಿಸಲು ಕಿಂಗ್‌ಫಿಷರ್‌ಗೆ ಅವಕಾಶ ಕಲ್ಪಿಸುವುದಕ್ಕೂ ಮುನ್ನ ಅದು ವಿಮಾನಯಾನ ನಿರ್ದೇಶನಾಲಯಕ್ಕೆ (ಡಿಜಿಸಿಎ) ವಿಸ್ತೃತ ಯೋಜನಾ ವರದಿ ಸಲ್ಲಿಸಬೇಕಾಗುತ್ತದೆ ಎಂದು ನಾಗರಿಕ ವಿಮಾನಯಾನ ಖಾತೆ ಸಚಿವ ಅಜಿತ್ ಸಿಂಗ್ ತಿಳಿಸಿದರು.

`ಕಾರಣ ಕೇಳಿ ನೀಡಿರುವ ನೋಟಿಸ್‌ಗೆ ಕಿಂಗ್‌ಫಿಷರ್ ಉತ್ತರಿಸಿದ ಬಳಿಕವಷ್ಟೇ ಡಿಜಿಸಿಎ ಸೂಕ್ತ ತೀರ್ಮಾನ ಕೈಗೊಳ್ಳಲಿದೆ~ ಎಂದು ಪ್ರಶ್ನೆಯೊಂದಕ್ಕೆ ಸಚಿವರು ಶನಿವಾರ ಇಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಪ್ರಯಾಣಿಕರಿಗೆ ಸರಿಯಾದ ರೀತಿಯಲ್ಲಿ ಸೇವೆ ಒದಗಿಸುವಲ್ಲಿ ವಿಫಲರಾಗಿರುವುದು ಮತ್ತು ತನ್ನ ಎಲ್ಲ ವಿಮಾನಗಳ ಹಾರಾಟ ರದ್ದುಪಡಿಸಿರುವ ಕಿಂಗ್‌ಫಿಷರ್‌ಗೆ ಏಕೆ ನಿಮ್ಮ ಪರವಾನಗಿಯನ್ನು ರದ್ದುಪಡಿಸಬಾರದು ಎಂದು ಡಿಜಿಸಿಎ ಶುಕ್ರವಾರ ಕಾರಣ ಕೇಳಿ ನೋಟಿಸ್ ನೀಡಿದ್ದು, ನೋಟಿಸ್‌ಗೆ 15 ದಿನಗಳೊಳಗೆ ಉತ್ತರಿಸುವಂತೆ ಸೂಚಿಸಿದೆ.

`ಕಿಂಗ್‌ಫಿಷರ್ ವಿಮಾನ ಹಾರಾಟ ಮತ್ತೆ ಆರಂಭಿಸಲು ಯಾವ ಯೋಜನೆ ಹೊಂದಿದೆ. ಸಿಬ್ಬಂದಿ ಬಾಕಿ ವೇತನ ಮತ್ತು ಸುರಕ್ಷತೆಗೆ ಸಂಬಂಧಿಸಿದಂತೆ ಯಾವ ಕ್ರಮ ತೆಗೆದುಕೊಳ್ಳಲಿದೆ. ಕಾರಣ ಕೇಳಿ ನೀಡಿರುವ ನೋಟಿಸ್‌ಗೆ ಯಾವ ರೀತಿಯ ಉತ್ತರ ನೀಡಲಿದೆ ಎನ್ನುವುದನ್ನು ಪರಿಶೀಲಿಸಿದ ಬಳಿಕ ಡಿಜಿಸಿಎ ಪರವಾನಗಿ ರದ್ದುಪಡಿಸುವ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ~ ಎಂದು ಸಚಿವರು ಹೇಳಿದರು.

7 ತಿಂಗಳ ಬಾಕಿ ವೇತನ ನೀಡುವಂತೆ ಒತ್ತಾಯಿಸಿ ಕಿಂಗ್‌ಫಿಷರ್ ಎಂಜಿನಿಯರ್‌ಗಳು ಮತ್ತು ಪೈಲಟ್‌ಗಳು ಪ್ರತಿಭಟನೆ ನಡೆಸುತ್ತಿದ್ದರೂ ಆಡಳಿತ ಮಂಡಳಿ ಸಮಸ್ಯೆ ಬಗೆಹರಿಸುವಲ್ಲಿ ವಿಫಲವಾಗಿದೆ. ಅಕ್ಟೋಬರ್ 12ರವರೆಗೆ ತನ್ನ ಎಲ್ಲ ವಿಮಾನಗಳ ಹಾರಾಟ ರದ್ದುಪಡಿಸಿದೆ.

`ಪ್ರತಿಭಟನಾ ನಿರತ ಸಂಸ್ಥೆಯ ಸಿಬ್ಬಂದಿಯೊಂದಿಗೆ ಮಾತುಕತೆ ನಡೆಸಿದ ಬಳಿಕ ವಿಮಾನ ಹಾರಾಟ ಪುನರಾರಂಭಿಸಲು ಸೂಕ್ತ ಯೋಜನೆ ಸಿದ್ಧಪಡಿಸಿ ಸಲ್ಲಿಸುತ್ತೇವೆ. ಡಿಜಿಸಿಎ ನೀಡಿರುವ ನೋಟಿಸ್‌ಗೆ ನೀಡಿರುವ ಗಡುವಿನೊಳಗೆ ವಿಸ್ತೃತವಾಗಿ ಉತ್ತರಿಸುತ್ತೇವೆ~ ಎಂದು ಕಿಂಗ್ ಫಿಷರ್ ವಕ್ತಾರರು ತಿಳಿಸಿದ್ದಾರೆ.

ಏರ್ ಇಂಡಿಯಾ ತೆಕ್ಕೆಗೆ ಇನ್ನೊಂದು ಡ್ರೀಮ್‌ಲೈನರ್
ಏರ್ ಇಂಡಿಯಾ ತೆಕ್ಕೆಗೆ ಶನಿವಾರ ಇನ್ನೊಂದು ಬೋಯಿಂಗ್ 787 ಡ್ರೀಮ್ ಲೈನರ್ ಬಂದಿದೆ. ಈ ಮೂಲಕ ಏರ್ ಇಂಡಿಯಾ ಪಡೆದ ಮೂರನೇ ಬೋಯಿಂಗ್ ವಿಮಾನ ಇದಾಗಿದೆ. ಅಮೆರಿಕದ ದಕ್ಷಿಣ ಕರೊಲಿನಾ ಘಟಕದಲ್ಲಿ ತಯಾರಾದ ಮೊದಲ ವಿಮಾನ ಇದು.
`ಮುಂದಿನ ದಿನಗಳಲ್ಲಿ ಇನ್ನಷ್ಟು ವಿಮಾನ ಪಡೆಯಲು ಎದುರು ನೋಡುತ್ತಿದ್ದೇವೆ~ ಎಂದು ಏರ್ ಇಂಡಿಯಾ ಆಡಳಿತ ಮಂಡಳಿ ಸದಸ್ಯ ಕೆ.ಎಂ. ಉನ್ನಿ     ನುಡಿದರು.
`ಈಗಾಗಲೇ ಪ್ರಯಾಣಿಕರ ಸೇವೆಗೆ ಎರಡೂ 787 ವಿಮಾನ ಸೇವೆ ಆರಂಭಿಸಿದೆ. ಇದರಲ್ಲಿ ಪ್ರಯಾಣಿಸುವುದರಿಂದ ವಿಶೇಷ ಅನುಭವ ನೀಡುತ್ತದೆ~ ಎಂದು ಮಾರುಕಟ್ಟೆ ವಿಭಾಗದ ಹಿರಿಯ ಉಪಾಧ್ಯಕ್ಷ ದಿನೇಶ್ ಕೆಸಕರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.