ADVERTISEMENT

ಕಿರಣ್‌ ಖೇರ್‌ಗೆ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 4 ಮೇ 2019, 20:15 IST
Last Updated 4 ಮೇ 2019, 20:15 IST
ಕಿರಣ್‌ ಖೇರ್‌
ಕಿರಣ್‌ ಖೇರ್‌   

ಚಂಡಿಗಡ: ತಮ್ಮ ಪರವಾಗಿ ಮಕ್ಕಳು ಚುನಾವಣಾ ಪ್ರಚಾರ ನಡೆಸುತ್ತಿರುವ ವಿಡಿಯೊ ಒಂದನ್ನು ಟ್ವಿಟರ್‌ನಲ್ಲಿ ಹರಿಬಿಟ್ಟಿದ್ದ ನಟಿ, ಬಿಜೆಪಿ ಅಭ್ಯರ್ಥಿ ಕಿರಣ್‌ ಖೇರ್‌ ಅವರಿಗೆ ಚುನಾವಣಾ ಆಯೋಗ ನೋಟಿಸ್‌ ನೀಡಿದೆ.

‘ಚುನಾವಣೆಗೆ ಸಂಬಂಧಿಸಿದ ಚಟುವಟಿಕೆಗಳಿಗೆ ಮಕ್ಕಳನ್ನು ಬಳಸುವುದನ್ನು ತಡೆಯಬೇಕು ಎಂದು ಮಕ್ಕಳ ಹಕ್ಕುಗಳ ರಕ್ಷಣೆ ಕುರಿತ ರಾಷ್ಟ್ರೀಯ ಆಯೋಗವು 2017ರಲ್ಲಿ ಚುನಾವಣಾ ಆಯೋಗವನ್ನು ಮನವಿ ಮಾಡಿಕೊಂಡಿತ್ತು. ಮಕ್ಕಳನ್ನು ಇಂಥ ಚಟುವಟಿಕೆಗಳಿಗೆ ಬಳಸುವುದಿಲ್ಲ ಎಂಬುದನ್ನು ಎಲ್ಲ ರಾಜಕೀಯ ಪಕ್ಷಗಳೂ ಖಾತರಿಪಡಿಸಬೇಕು. ನೀವು ಟ್ವಿಟರ್‌ನಲ್ಲಿ ಬಿಡುಗಡೆ ಮಾಡಿರುವ ವಿಡಿಯೊದಲ್ಲಿ ಮಕ್ಕಳು ನಿಮ್ಮ ಮತ್ತು ಮೋದಿ ಪರವಾಗಿ ಘೋಷಣೆ ಕೂಗುತ್ತಿರುವುದು ಕಾಣಿಸುತ್ತಿದೆ. ಈ ಬಗ್ಗೆ 24 ಗಂಟೆಗಳೊಳಗೆ ಸ್ಪಷ್ಟನೆ ನೀಡಬೇಕು’ ಎಂದು ಆಯೋಗವು ಕಿರಣ್‌ ಅವರಿಗೆ ಸೂಚಿಸಿದೆ.

ನೋಟಿಸ್‌ ಬಂದ ಕೂಡಲೇ ಮಾಧ್ಯಮ ಸಂಸ್ಥೆಗೆ ಹೇಳಿಕೆ ನೀಡಿರುವ ಕಿರಣ್‌, ‘ಇಂಥ ಘಟನೆ ನಡೆಯಬಾರದಾಗಿತ್ತು, ನಮ್ಮ ಪಕ್ಷದವರು ಯಾರೋ ಆ ವಿಡಿಯೊವನ್ನು ಕಳುಹಿಸಿದ್ದರು, ನಮ್ಮ ತಂಡದವರು ಅದನ್ನು ಶೇರ್‌ ಮಾಡಿ, ಆ ನಂತರ ತೆಗೆದುಹಾಕಿದ್ದಾರೆ. ಈ ಘಟನೆಗೆ ನಾನು ಕ್ಷಮೆ ಯಾಚಿಸುತ್ತೇನೆ’ ಎಂದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.