ADVERTISEMENT

ಕುತೂಹಲ ಕೆರಳಿಸಿದ ಉಪಚುನಾವಣೆ

ಪಿಟಿಐ
Published 27 ಮೇ 2018, 19:30 IST
Last Updated 27 ಮೇ 2018, 19:30 IST
ಸಿಲಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗಾಗಿ ಜಾರ್ಖಂಡ್‌ನ ರಾಂಚಿಯಿಂದ ಸಿಬ್ಬಂದಿ ಮತಯಂತ್ರಗಳ ಜತೆಗೆ ಭಾನುವಾರ ಮತಗಟ್ಟೆಗಳಿಗೆ ತೆರಳಿದರು –ಪಿಟಿಐ ಚಿತ್ರ
ಸಿಲಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗಾಗಿ ಜಾರ್ಖಂಡ್‌ನ ರಾಂಚಿಯಿಂದ ಸಿಬ್ಬಂದಿ ಮತಯಂತ್ರಗಳ ಜತೆಗೆ ಭಾನುವಾರ ಮತಗಟ್ಟೆಗಳಿಗೆ ತೆರಳಿದರು –ಪಿಟಿಐ ಚಿತ್ರ   

ನವದೆಹಲಿ/ಕೋಲ್ಕತ್ತ: ಕೇಂದ್ರದ ಎನ್‌ಡಿಎ ಸರ್ಕಾರವು ನಾಲ್ಕು ವರ್ಷಗಳನ್ನು ಪೂರ್ತಿಗೊಳಿಸಿದ ಬೆನ್ನಿಗೇ ಲೋಕಸಭೆಯ ನಾಲ್ಕು ಮತ್ತು ವಿವಿಧ ವಿಧಾನಸಭೆಗಳ ಹತ್ತು ಕ್ಷೇತ್ರಗಳ ಉಪಚುನಾವಣೆಗೆ ಸೋಮವಾರ ಮತದಾನ ನಡೆಯಲಿದೆ.

ಸಂಖ್ಯೆಯ ದೃಷ್ಟಿಯಿಂದ ನೋಡಿದರೆ, ಇತ್ತೀಚಿನ ವರ್ಷಗಳಲ್ಲಿ ನಡೆಯುತ್ತಿರುವ ಅತ್ಯಂತ ದೊಡ್ಡ ಉಪಚುನಾವಣೆ ಇದಾಗಿದೆ. ಲೋಕಸಭೆ ಚುನಾವಣೆಗೆ ಇನ್ನು ಒಂದು ವರ್ಷವಷ್ಟೇ ಇದೆ. ಹಾಗಾಗಿ ಈ ಚುನಾವಣೆಗಳ ಫಲಿತಾಂಶದ ಬಗ್ಗೆ ಹೆಚ್ಚಿನ ಕುತೂಹಲ ಮೂಡಿದೆ.

ಲೋಕಸಭೆಗೆ ಕರ್ನಾಟಕದ ಶಿವಮೊಗ್ಗದಿಂದ ಆಯ್ಕೆಯಾಗಿದ್ದ ಬಿ.ಎಸ್‌. ಯಡಿಯೂರಪ್ಪ ಮತ್ತು ಬಳ್ಳಾರಿ ಯಿಂದ ಆಯ್ಕೆಯಾಗಿದ್ದ ಶ್ರೀರಾಮುಲು ಅವರ ರಾಜೀನಾಮೆಯಿಂದಾಗಿ ಬಿಜೆಪಿಯ ಸದಸ್ಯ ಬಲ ಸರಳ ಬಹುಮತದ 272ರಿಂದ ಕೆಳಕ್ಕೆ ಇಳಿದಿದೆ. ಭಂಡಾರಾ–ಗೋಂದಿಯಾ ಮತ್ತು ಕೈರಾನಾ ಲೋಕಸಭಾ ಕ್ಷೇತ್ರ ಗಳಲ್ಲಿ ವಿರೋಧ ಪಕ್ಷಗಳು ಬಿಜೆಪಿ ವಿರುದ್ಧ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸಿವೆ. ಉಳಿದ ಎರಡು ಲೋಕಸಭಾ ಕ್ಷೇತ್ರಗಳಲ್ಲಿಯೂ ವಿರೋಧ ಪಕ್ಷಗಳ ನಡುವೆ ‘ಒಪ್ಪಂದ’ ಆಗಿದೆ. ಹಾಗಾಗಿ ಫಲಿತಾಂಶ ಆಸಕ್ತಿ ಕೆರಳಿಸಿದೆ.

ADVERTISEMENT

ಲೋಕಸಭಾ ಕ್ಷೇತ್ರಗಳು: ಮಹಾರಾಷ್ಟ್ರದ ಪಾಲ್ಘರ್‌ ಮತ್ತು ಭಂಡಾರಾ–ಗೋಂದಿಯಾ, ಉತ್ತರ ಪ್ರದೇಶದ ಕೈರಾನಾ ಮತ್ತು ನಾಗಾಲ್ಯಾಂಡ್‌ನ ಏಕೈಕ ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.

ಪಾಲ್ಘರ್‌: ಇದು ಪರಿಶಿಷ್ಟ ಪಂಗಡದ ಮೀಸಲು ಕ್ಷೇತ್ರ. 2014ರಲ್ಲಿ ಇಲ್ಲಿಂದ ಚಿಂತಾಮನ್‌ ವನಗಾ ಗೆದ್ದಿದ್ದರು. ಇದಕ್ಕೆ ಹಿಂದಿನ ಎರಡು ಚುನಾವಣೆಗಳಲ್ಲಿಯೂ ಅವರೇ ಗೆಲುವು ಸಾಧಿಸಿದ್ದರು. ಅವರ ನಿಧನದಿಂದಾಗಿ ಇಲ್ಲಿ ಉಪಚುನಾವಣೆ ನಡೆಯುತ್ತಿದೆ. ಚಿಂತಾಮನ್‌ ಅವರ ಮಗ ಶ್ರೀನಿವಾಸ್‌ ವನಗಾ ಈ ಬಾರಿ ಶಿವಸೇನಾದಿಂದ ಸ್ಪರ್ಧಿಸುತ್ತಿದ್ದಾರೆ. ಬಿಜೆಪಿಯ ರಾಜೇಂದ್ರ ಗವಿತ್‌ ಮತ್ತು ಕಾಂಗ್ರೆಸ್‌ನ ದಾಮು ಶಿಂಗ್ಡಾ ನಡುವೆ ಇಲ್ಲಿ ತ್ರಿಕೋನ ಸ್ಪರ್ಧೆ ಇದೆ.

ಭಂಡಾರಾ–ಗೋಂದಿಯಾ: 2014ರ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಬಿಜೆಪಿಯಿಂದ ನಾನಾ ಪಟೋಲೆ ಗೆದ್ದಿದ್ದರು. ಕಾಂಗ್ರೆಸ್‌ಗೆ ಹಿಂದಿರುಗುವ  ಮೊದಲು ಕಳೆದ ಡಿಸೆಂಬರ್‌ನಲ್ಲಿ ಅವರು ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಕಾಂಗ್ರೆಸ್‌ ಮತ್ತು ಶಿವಸೇನಾ ಇಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿಲ್ಲ. ಹಾಗಾಗಿ, ಬಿಜೆಪಿಯ ಹೇಮಂತ್‌ ಪಟಲೆ ಮತ್ತು ಎನ್‌ಸಿಪಿಯ ಮಧುಕರ್‌ ಕುಕಡೆ ನಡುವೆ ನೇರ ಸ್ಪರ್ಧೆ ಇದೆ. ಎನ್‌ಸಿಪಿ ಮುಖಂಡ ಪ್ರಫುಲ್‌ ಪಟೇಲ್‌ ಅವರ ಪ್ರಾಬಲ್ಯದ ಕ್ಷೇತ್ರ ಇದು.

ಕೈರಾನಾ: ಈ ಕ್ಷೇತ್ರದಲ್ಲಿ 2014ರ ಚುನಾವಣೆಯಲ್ಲಿ ಬಿಜೆಪಿಯ ಹುಕುಮ್‌ ಸಿಂಗ್‌ ಗೆದ್ದಿದ್ದರು. ಫೆಬ್ರುವರಿಯಲ್ಲಿ ಅವರು ಮೃತಪಟ್ಟಿದ್ದರಿಂದಾಗಿ ಕ್ಷೇತ್ರ ತೆರವಾಗಿದೆ. ಹುಕುಮ್‌ ಸಿಂಗ್‌ ಅವರ ಮಗಳು ಮೃಗಾಂಕಾ ಸಿಂಗ್‌ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ಮಾಜಿ ಸಂಸದೆ ತಬಸ್ಸುಮ್‌ ಹಸನ್‌ ಅವರು ರಾಷ್ಟ್ರೀಯ ಲೋಕದಳ ಟಿಕೆಟ್‌ನಿಂದ ಸ್ಪರ್ಧಿಸುತ್ತಿದ್ದಾರೆ. 2009ರಲ್ಲಿ ಬಿಎಸ್‌ಪಿ ಟಿಕೆಟ್‌ನಲ್ಲಿ ಅವರು ಇಲ್ಲಿ ಗೆದ್ದಿದ್ದರು. ಈ ಬಾರಿ, ಸಮಾಜವಾದಿ ಪಕ್ಷ, ಕಾಂಗ್ರೆಸ್‌, ಬಿಎಸ್‌ಪಿ ಸೇರಿ ಎಲ್ಲ ಪ್ರಮುಖ ವಿರೋಧ ಪಕ್ಷಗಳು ತಬಸ್ಸುಮ್‌ ಅವರನ್ನು ಬೆಂಬಲಿಸುತ್ತಿವೆ. 

ನಾಗಾಲ್ಯಾಂಡ್‌: ನಾಗಾಲ್ಯಾಂಡ್‌ನ ಏಕೈಕ ಲೋಕಸಭಾ ಕ್ಷೇತ್ರದಲ್ಲಿ 2014ರಲ್ಲಿ ನ್ಯಾಷನಲಿಷ್ಟ್‌ ಡೆಮಾಕ್ರಟಿಕ್‌ ಪ್ರೋಗ್ರೆಸ್ಸಿವ್‌ ಪಾರ್ಟಿಯ (ಎನ್‌ಡಿಪಿಪಿ) ನೆಫಿಯೂ ರಿಯೊ ಗೆಲುವು ಸಾಧಿಸಿದ್ದರು. ಫೆಬ್ರುವರಿಯಲ್ಲಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಮುನ್ನ ಅವರು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಈ ಕ್ಷೇತ್ರ ತೆರವಾಗಿದೆ. ರಿಯೊ ಈಗ ನಾಗಾಲ್ಯಾಂಡ್‌ನ ಮುಖ್ಯಮಂತ್ರಿ.  ಆಡಳಿತಾರೂಢ ಪೀಪಲ್ಸ್‌ ಡೆಮಾಕ್ರಟಿಕ್‌ ಅಲಯನ್ಸ್‌ (ಪಿಡಿಎ) ಇಲ್ಲಿ ತೊಖಿಯೊ ಯೆಪ್ತೊಮಿ ಅವರನ್ನು ಕಣಕ್ಕಿಳಿಸಿದೆ. ಎನ್‌ಡಿಪಿಪಿ ಮತ್ತು ಬಿಜೆಪಿ ಆಡಳಿತಾರೂಢ ಮೈತ್ರಿಕೂಟದ ಭಾಗವಾಗಿವೆ. ವಿರೋಧ ಪಕ್ಷ ನಾಗಾ ಪೀಪಲ್ಸ್‌ ಫ್ರಂಟ್‌ನ (ಎನ್‌ಪಿಎಫ್‌) ಸಿ. ಅಪೊಕ್‌ ಜಮೀರ್‌ ಅವರು ಕಣದಲ್ಲಿದ್ದಾರೆ. ಅವರಿಗೆ ಕಾಂಗ್ರೆಸ್‌ ಬೆಂಬಲವೂ ಇದೆ.

ಹತ್ತು ವಿಧಾನಸಭಾ ಕ್ಷೇತ್ರಗಳು

ಮಹೇಸ್ತಲಾ (‍ಪಶ್ಚಿಮ ಬಂಗಾಳ)

ಗೋಮಿಯಾ (ಜಾರ್ಖಂಡ್‌)

ಸಿಲಿ (ಜಾರ್ಖಂಡ್‌ )

ಜೋಕಿಹಾತ್‌ (ಬಿಹಾರ)

ಅಂಪತಿ (ಮೇಘಾಲಯ)

ಶಾಹ್‌ಕೋಟ್‌ (ಪಂಜಾಬ್‌)

ಪಲೂಸ್‌ ಕಡೆಗಾವ್‌ (ಮಹಾರಾಷ್ಟ್ರ)

ಚೆಂಗನ್ನೂರು (ಕೇರಳ)

ಥರಾಲಿ (ಉತ್ತರಾಖಂಡ)

ನೂರ್‌ಪುರ (ಉತ್ತರ ಪ್ರದೇಶ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.