ADVERTISEMENT

ಕೂಡಗಿ ಶಾಖೋತ್ಪನ್ನ ಯೋಜನೆಗೆ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 26 ಜನವರಿ 2012, 19:30 IST
Last Updated 26 ಜನವರಿ 2012, 19:30 IST

ನವದೆಹಲಿ:  ರಾಜ್ಯದ ವಿದ್ಯುತ್ ಕೊರತೆ ನೀಗಿಸಲು ಸರ್ಕಾರಿ ಒಡೆತನದ ರಾಷ್ಟ್ರೀಯ ಶಾಖೋತ್ಪನ್ನ ವಿದ್ಯುತ್ ನಿಗಮ (ಎನ್‌ಟಿಪಿಸಿ) ರೂಪಿಸಿದ್ದ ಉದ್ದೇಶಿತ ಕೂಡಗಿ ಶಾಖೋತ್ಪನ್ನ ವಿದ್ಯುತ್ ಉತ್ಪಾದನಾ ಯೋಜನೆಗೆ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ಹಸಿರು ನಿಶಾನೆ ತೋರಿದೆ.

ವಿಜಾಪುರ ಜಿಲ್ಲೆಯ ಕೂಡಗಿಯಲ್ಲಿ ನಿರ್ಮಿಸಲು ಉದ್ದೇಶಿಸಿದ್ದ 2,400 ಮೆಗಾವಾಟ್ ಸಾಮರ್ಥ್ಯದ ಮೊದಲ ಹಂತದ ಶಾಖೋತ್ಪನ್ನ ವಿದ್ಯುತ್ ಉತ್ಪಾದನಾ ಘಟಕದ ಮೊದಲ ಹಂತದ ನಿರ್ಮಾಣ ಕಾರ್ಯ ಶೀಘ್ರ ಆರಂಭವಾಗಲಿದೆ. ಒಟ್ಟು ನಾಲ್ಕು ಸಾವಿರ ಮೆಗಾವಾಟ್ ವಿದ್ಯುತ್ ಉತ್ಪಾದಿಸುವ ಎರಡು ಹಂತದ ಯೋಜನೆಗೆ ಸುಮಾರು 15,166 ಕೋಟಿ ರೂಪಾಯಿ ಹೂಡಿಕೆಗೆ ಎನ್‌ಟಿಪಿಸಿ ನಿರ್ದೇಶಕರ ಮಂಡಳಿ ಇತ್ತೀಚೆಗೆ ಒಪ್ಪಿಗೆ ನೀಡಿದೆ.

ಯೋಜನೆ ಪೂರ್ಣಗೊಂಡ ನಂತರ ಶಾಖೋತ್ಪನ್ನ ಘಟಕಗಳು ಪ್ರತಿದಿನ 80 ದಶಲಕ್ಷ ಯುನಿಟ್ ವಿದ್ಯುತ್ ಉತ್ಪಾದಿಸಲಿವೆ. ಆ ಪೈಕಿ ಶೇ 50ರಷ್ಟು ವಿದ್ಯುತ್ ಅನ್ನು ಕರ್ನಾಟಕಕ್ಕೆ ಹಾಗೂ ಉಳಿದ ವಿದ್ಯುತ್ ಅನ್ನು ಕೇಂದ್ರೀಯ ವಿದ್ಯುತ್ ಜಾಲದ (ಸೆಂಟ್ರಲ್ ಗ್ರಿಡ್) ಮೂಲಕ ಉಳಿದ ರಾಜ್ಯಗಳಿಗೆ ವಿತರಿಸಲಾಗುವುದು. ಆಂಧ್ರ ಪ್ರದೇಶ, ತಮಿಳುನಾಡು, ಪುದುಚೇರಿ ಸೇರಿದಂತೆ ಅನೇಕ ರಾಜ್ಯಗಳು ಈ ವಿದ್ಯುತ್ ಪಡೆಯಲಿವೆ. ರಾಜ್ಯ ಸರ್ಕಾರ, ಎನ್‌ಟಿಪಿಸಿ ಮತ್ತು ಸರ್ಕಾರಿ ವಿದ್ಯುತ್ ಕಂಪೆನಿಗಳು ಯೋಜನೆಗೆ ಸಂಬಂಧಿಸಿದಂತೆ 2009ರಲ್ಲಿ ಒಪ್ಪಂದಕ್ಕೆ ಸಹಿ ಹಾಕಿದ್ದವು. ಕಳೆದ ವರ್ಷವೇ ವಿದ್ಯುತ್ ಉತ್ಪಾದನಾ ಘಟಕ ನಿರ್ಮಾಣಕ್ಕೆ ಎನ್‌ಟಿಪಿಸಿ ಉತ್ಸುಕವಾಗಿತ್ತು. ಆದರೆ, ಕೇಂದ್ರ ಸರ್ಕಾರದ ಪರಿಸರ ಮತ್ತು ಅರಣ್ಯ ಸಚಿವಾಲಯದ ಅನುಮತಿ ದೊರೆತಿರಲಿಲ್ಲ.

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಈಗಾಗಲೇ ಯೋಜನೆಗೆ ಅಗತ್ಯವಿರುವ ಸುಮಾರು 1923 ಎಕರೆ ಭೂಮಿಯನ್ನು ಇತ್ತೀಚೆಗೆ ಹಸ್ತಾಂತರಿಸಿದೆ. ಉಳಿದ 1,600 ಎಕರೆ ಭೂ ಸ್ವಾಧೀನ ಪ್ರಕ್ರಿಯೆ ಪ್ರಗತಿಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.