ADVERTISEMENT

ಕೃಷ್ಣಾ ನ್ಯಾಯಮಂಡಳಿ-2: ತೀರ್ಪು:ಶೀಘ್ರ ಅಧಿಸೂಚನೆಗೆ ಕೇಂದ್ರ ಚಿಂತನೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2011, 17:55 IST
Last Updated 2 ಫೆಬ್ರುವರಿ 2011, 17:55 IST

ನವದೆಹಲಿ: ಯಾವುದೇ ಗೊಂದಲಕ್ಕೆ ಅವಕಾಶವಿಲ್ಲದಂತೆ ಕೃಷ್ಣಾ ನ್ಯಾಯಮಂಡಳಿ-2ರ ತೀರ್ಪು ಕುರಿತು ಶೀಘ್ರ ಅಧಿಸೂಚನೆ ಹೊರಡಿಸಲು ಕೇಂದ್ರ ಸರ್ಕಾರ ಉದ್ದೇಶಿಸಿದೆ.

ಈ ಸಂಬಂಧದ ಅಧಿಸೂಚನೆ ಕರಡು ಪ್ರತಿಯನ್ನು ಜಲ ಸಂಪನ್ಮೂಲ ಸಚಿವಾಲಯ ಕಾನೂನು ಸಚಿವಾಲಯಕ್ಕೆ ಕಳುಹಿಸಿದೆ. ಕಾನೂನು ಸಚಿವಾಲಯ ಪರಿಶೀಲಿಸಿ ಒಪ್ಪಿಗೆ ನೀಡಿದ ಬಳಿಕ ಅಧಿಸೂಚನೆ ಅಂತಿಮವಾಗಿ ಪ್ರಕಟವಾಗಲಿದೆ.

ಡಿಸೆಂಬರ್ 30 ರಂದು ಅಂತಿಮ ತೀರ್ಪು ಪ್ರಕಟಿಸಿರುವ ನ್ಯಾಯಮಂಡಳಿ ಸಂಬಂಧಿಸಿದ ರಾಜ್ಯಗಳು ಸ್ಪಷ್ಟನೆಗಳಿದ್ದರೆ ಪಡೆಯಲು 30ದಿನ ಕಾಲಾವಕಾಶ ನೀಡಿರುವ ನಡುವೆಯೇ ಕೇಂದ್ರ ಅನಗತ್ಯ ವಿಳಂಬ ತಡೆಯಲು ಅಧಿಸೂಚನೆಗೆ ಮುಂದಾಗಿದೆ ಎಂದು ಜಲ ಸಂಪನ್ಮೂಲ ಸಚಿವಾಲಯದ ಮೂಲಗಳು ಹೇಳಿವೆ. ಅಂತರರಾಜ್ಯ ನದಿ ನೀರು ವಿವಾದ ಕಾಯ್ದೆ 1956ರ ಸೆಕ್ಷನ್ 6(2)ರ ಅನ್ವಯ ಒಮ್ಮೆ ಕೇಂದ್ರದ ಅಧಿಸೂಚನೆ ಪ್ರಕಟವಾದರೆ ಸುಪ್ರೀಂ ಕೋರ್ಟ್ ತೀರ್ಪಿನಷ್ಟೇ ಮಹತ್ವ ಬರುತ್ತದೆ. ಅಡೆತಡೆ ಇಲ್ಲದೆ ತೀರ್ಪು ಜಾರಿ ಮಾಡಬಹುದಾಗಿದೆ.

2007ರ ಕಾವೇರಿ ನ್ಯಾಯ ಮಂಡಳಿ ತೀರ್ಪು ಕುರಿತು ಅಧಿಸೂಚನೆ ಹೊರಡದಿರುವುದರಿಂದ ಅದರ ಅನುಷ್ಠಾನ ಸಾಧ್ಯವಾಗಿಲ್ಲ.

ತೀರ್ಪು ಕುರಿತು ಸ್ಪಷ್ಟನೆಗಳಿದ್ದರೆ ಕೇಳಲಿ ಎಂದು ಕಾದಿದ್ದರಿಂದ ಸಂಬಂಧಪಟ್ಟ ರಾಜ್ಯಗಳು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿವೆ.  ಇದರಿಂದ ಕೇಂದ್ರ ಅಸಹಾಯಕವಾಗಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.ಈಚೆಗೆ ಕಾವೇರಿ ನದಿ ನೀರು ವಿವಾದಕ್ಕೆ ಸಂಬಂಧಿಸಿದಂತೆ ಕಾಯಂ ‘ಸಂಕಷ್ಟ ಸೂತ್ರ’ ರೂಪಿಸಲು ಕೇಂದ್ರ ಸರ್ಕಾರ ನಡೆಸಿದ ಪ್ರಯತ್ನ ಕರ್ನಾಟಕದ ವಿರೋಧದಿಂದ ಸಫಲವಾಗಲಿಲ್ಲ. ಕಾವೇರಿ ನ್ಯಾಯ ಮಂಡಳಿ ಅಂತಿಮ ತೀರ್ಪು ಕುರಿತು ಅಧಿಸೂಚನೆ ಹೊರಡದಿರುವುದರಿಂದ ಅದರ ಜಾರಿ ಸಾಧ್ಯವಿಲ್ಲ ಎಂದು ಕರ್ನಾಟಕ ಪ್ರತಿಪಾದಿಸಿದೆ.

ಕಾವೇರಿಯಲ್ಲಿ ಆಗಿರುವ ತಪ್ಪು ಕೃಷ್ಣಾದಲ್ಲಿ ಪುನರಾವರ್ತನೆ ಆಗದಿರಲು ಕೇಂದ್ರ ಬಯಸಿದ್ದು, ವಿಳಂಬ ಮಾಡದೆ ಅಧಿಸೂಚನೆ ಹೊರಡಿಸಲು ಮುಂದಾಗಿದೆ. ಈಗಾಗಲೇ ಕರ್ನಾಟಕ ಮತ್ತು ಆಂಧ್ರ ಸುಪ್ರೀಂ ಕೋರ್ಟ್‌ನಲ್ಲಿ ತೀರ್ಪು ಪ್ರಶ್ನಿಸುವುದಾಗಿ ಹೇಳಿವೆ. ಹೀಗೇನಾದರೂ ಆದರೆ ಕೋರ್ಟ್ ತೀರ್ಪಿಗೆ ಅಥವಾ ನ್ಯಾಯಮಂಡಳಿ ಸ್ಪಷ್ಟನೆಗೆ ವರ್ಷಗಟ್ಟಲೆ ಕಾಯಬೇಕಾಗುತ್ತದೆ ಎಂಬ ಸತ್ಯ ಕೇಂದ್ರಕ್ಕೆ ಗೊತ್ತಿದೆ.

ಕೃಷ್ಣಾ ನ್ಯಾಯಮಂಡಳಿ ಆಲಮಟ್ಟಿ ಅಣೆಕಟ್ಟೆ ಎತ್ತರವನ್ನು 524.24 ಮೀಟರ್‌ಗೆ ಎತ್ತರಿಸಲು ಅವಕಾಶ ನೀಡಿದೆ. ಅಲ್ಲದೆ, ಕೃಷ್ಣಾ ನೀರಿನಲ್ಲಿ 911 ಟಿಂಸಿಯನ್ನು ರಾಜ್ಯಕ್ಕೆ ನಿಗದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.