ADVERTISEMENT

ಕೆಂಪುಕೋಟೆ ನಿರ್ವಹಣೆ ಖಾಸಗಿ ಕಂಪನಿಗೆ: ಟೀಕೆ

ಪಿಟಿಐ
Published 28 ಏಪ್ರಿಲ್ 2018, 19:30 IST
Last Updated 28 ಏಪ್ರಿಲ್ 2018, 19:30 IST
ಕೆಂಪುಕೋಟೆ
ಕೆಂಪುಕೋಟೆ   

ನವದೆಹಲಿ: ‘ಸ್ಮಾರಕ ದತ್ತು’ ಯೋಜನೆ ಅಡಿ ದೆಹಲಿ ಕೆಂಪುಕೋಟೆ ನಿರ್ವಹಣೆಯನ್ನು ದಾಲ್ಮಿಯಾ ಭಾರತ್ ಗ್ರೂಪ್‌ಗೆ ವಹಿಸಿರುವ ಕೇಂದ್ರ ಸರ್ಕಾರದ ಕ್ರಮ ಭಾರಿ ಟೀಕೆಗೆ ಗುರಿಯಾಗಿದೆ.

ಸ್ಮಾರಕಗಳನ್ನು ಖಾಸಗಿಯವರಿಗೆ ಹಸ್ತಾಂತರಿಸುವುದರಿಂದ ‘ದೇಶದ ಶ್ರೀಮಂತ ಪರಂಪರೆ ನಾಶವಾಗುತ್ತದೆ’ ಎಂದು ಇತಿಹಾಸ ತಜ್ಞರು, ವಿರೋಧ ಪಕ್ಷಗಳಾದ ಕಾಂಗ್ರೆಸ್‌ ಮತ್ತು ಸಿಪಿಎಂನಿಂದ ಟೀಕೆ ವ್ಯಕ್ತವಾಗಿದೆ.

‘ಸ್ಮಾರಕದ ನಿರ್ವಹಣೆಗೆ ವರ್ಷಕ್ಕೆ ಐದು ಕೋಟಿ ವೆಚ್ಚಮಾಡಲಾಗದ ಈ ಸರ್ಕಾರಕ್ಕೆ ಒಂದು ದಿನವೂ ಅಧಿಕಾರದಲ್ಲಿ ಹಕ್ಕಿಲ್ಲ’ ಎಂದು ಕಾಂಗ್ರೆಸ್‌ ಟೀಕಿಸಿದೆ.

ADVERTISEMENT

ದಾಲ್ಮಿಯಾ ಭಾರತ್ ಗ್ರೂಪ್‌ 5 ವರ್ಷದ ಅವಧಿಗೆ ₹25 ಕೋಟಿಗೆ ಕೆಂಪುಕೋಟೆಯನ್ನು ಹೊರಗುತ್ತಿಗೆ ಪಡೆದಿದ್ದು, ಈ ಮೂಲಕ ದೇಶದ ಐತಿಹಾಸಿಕ ಸ್ಮಾರಕ ಹೊರಗುತ್ತಿಗೆ ಪಡೆದ ಮೊದಲ ಕಾರ್ಪೊರೇಟ್ ಕಂಪನಿಯಾಗಿದೆ.

ಯೋಜನೆ ಅಡಿಯಲ್ಲಿ, ದೇಶದ ಪ್ರಸಿದ್ಧ ತಾಣಗಳ ಕಾರ್ಯನಿರ್ವಹಣೆ ಹಾಗೂ ಪ್ರವಾಸಿಗರಿಗೆ ಮೂಲಸೌಕರ್ಯ ಕಲ್ಪಿಸುವ ಕೆಲಸವನ್ನು ಹೊರಗುತ್ತಿಗೆ ನೀಡಲಾಗುತ್ತದೆ.

ಆದರೆ, ಕಾರ್ಪೊರೇಟ್ ಕಂಪನಿಗಳು ಇದರಿಂದ ಲಾಭ ಮಾಡಿಕೊಳ್ಳಲು ಅವಕಾಶ ನೀಡುವುದಿಲ್ಲ ಎಂದು ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವಾಲಯ ಹೇಳಿದೆ.

ದೇಶದ ವಿವಿಧೆಡೆಯಲ್ಲಿನ 22 ಸ್ಮಾರಕಗಳ ಕಾರ್ಯನಿರ್ವಹಣೆಯನ್ನು 9 ಖಾಸಗಿ ಕಂಪನಿಗಳಿಗೆ ವಹಿಸಲಾಗಿರುವುದನ್ನು ಕೇಂದ್ರ ಸರ್ಕಾರ ಈಚೆಗಷ್ಟೆ ಘೋಷಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.