ADVERTISEMENT

ಕೇಂದ್ರ, ಆಂಧ್ರಕ್ಕೆ ನೋಟಿಸ್

​ಪ್ರಜಾವಾಣಿ ವಾರ್ತೆ
Published 15 ಜನವರಿ 2011, 6:15 IST
Last Updated 15 ಜನವರಿ 2011, 6:15 IST

ನವದೆಹಲಿ (ಪಿಟಿಐ): ಪ್ರಮುಖ ಮಾವೊವಾದಿ ನಾಯಕ ಚೆರುಕುರಿ ರಾಜ್‌ಕುಮಾರ್ ಅಲಿಯಾಸ್ ಆಜಾದ್ ಮತ್ತು ಅವರ ಸಹಚರ ಎಂದು ಹೇಳಲಾದ ಪತ್ರಕರ್ತ ಹೇಮಚಂದ್ರ ಪಾಂಡೆ ಅವರ ‘ನಕಲಿ ಎನ್‌ಕೌಂಟರ್’ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕೆಂಬ ಅರ್ಜಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ಕೇಳಿ ಸುಪ್ರೀಂಕೋರ್ಟ್ ಶುಕ್ರವಾರ ಕೇಂದ್ರ ಹಾಗೂ ಆಂಧ್ರ ಪ್ರದೇಶ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.

‘ಗಣರಾಜ್ಯವು ತನ್ನದೇ ಸ್ವಂತ ಮಕ್ಕಳನ್ನು ಕೊಲ್ಲಲು ನಾವು ಅವಕಾಶ ಮಾಡಿಕೊಡುವುದಿಲ್ಲ’ ಎಂದು ನ್ಯಾಯಮೂರ್ತಿಗಳಾದ ಅಫ್ತಾಬ್ ಆಲಂ ಹಾಗೂ ಆರ್.ಎಂ.ಲೋಧ ಅವರನ್ನು ಒಳಗೊಂಡ ಪೀಠ ಈ ಸಂದರ್ಭದಲ್ಲಿ ಹೇಳಿದೆ.

ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್ ಮತ್ತು ಪಾಂಡೆ ಅವರ 30 ವರ್ಷದ ಪತ್ನಿ ಬಬಿತಾ ಈ ಅರ್ಜಿ ಸಲ್ಲಿಸಿದ್ದಾರೆ. ಆರು ವಾರಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ಸರ್ಕಾರಗಳಿಗೆ ತಿಳಿಸಿರುವ ಪೀಠ, ಉತ್ತಮ ಹಾಗೂ ವಿಶ್ವಾಸಪೂರ್ವಕ ಪ್ರತಿಕ್ರಿಯೆ ಬರುವ ಭರವಸೆ ಇದೆ ಎಂದು ಹೇಳಿದೆ.

ನಿಷೇಧಿತ ಸಿಪಿಐ (ಮಾವೊವಾದಿ) ಸಂಘಟನೆಯ ಸದಸ್ಯ ಹಾಗೂ ತಲೆಗೆ 12 ಲಕ್ಷ ರೂಪಾಯಿ ಬಹುಮಾನ ಘೋಷಣೆಯಾಗಿದ್ದ 58 ವರ್ಷದ ಆಜಾದ್, 32 ವರ್ಷದ ಪಾಂಡೆ ಅವರನ್ನು ಮಹಾರಾಷ್ಟ್ರ ಗಡಿಯಲ್ಲಿರುವ ಆಂಧ್ರಪ್ರದೇಶದ ಆದಿಲಾಬಾದ್ ಜಿಲ್ಲೆಯಲ್ಲಿ ಜುಲೈ 1ರ ರಾತ್ರಿ ಪೊಲೀಸರು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದ್ದರು.

ಈ ಇಬ್ಬರ ಮರಣೋತ್ತರ ವರದಿ ಮತ್ತು ಮಾನವ ಹಕ್ಕು ಕಾರ್ಯಕರ್ತರ ಸ್ಥಳ ಪರಿಶೀಲನೆಯಿಂದ ಎನ್‌ಕೌಂಟರ್ ನಕಲಿ ಎಂಬುದು ದೃಢಪಡುತ್ತದೆ, ಇಬ್ಬರಿಗೂ ಅತ್ಯಂತ ಸಮೀಪದಿಂದ ಗುಂಡು ಹಾರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.