ADVERTISEMENT

ಕೇಂದ್ರ ಮಾಜಿಸಚಿವ ಅನ್ಬುಮಣಿ ರಾಮದಾಸ್ ವಿರುದ್ಧ ವಾರೆಂಟ್

​ಪ್ರಜಾವಾಣಿ ವಾರ್ತೆ
Published 7 ಜುಲೈ 2012, 10:00 IST
Last Updated 7 ಜುಲೈ 2012, 10:00 IST

ನವದೆಹಲಿ (ಪಿಟಿಐ): ವೈದ್ಯಕೀಯ ಕಾಲೇಜು ಹಗರಣಕ್ಕೆ ಸಂಬಂಧಿಸಿದಂತೆ ಯುಪಿಎ 1 ರ ಅವಧಿಯಲ್ಲಿ  ಕೇಂದ್ರ ಆರೋಗ್ಯ ಸಚಿವರಾಗಿದ್ದ  ಅನ್ಬುಮಣಿ ರಾಮದಾಸ್ ಅವರ ವಿರುದ್ಧ ದೆಹಲಿ ನ್ಯಾಯಾಲಯವೊಂದು ಶನಿವಾರ ಜಾಮೀನು ಸಹಿತ ವಾರೆಂಟ್‌  ಹೊರಡಿಸಿದೆ.

ವಿಚಾರಣೆಗೆ ಹಾಜರಾಗಲು ವಿಫಲರಾದ ರಾಮದಾಸ್ ಅವರು ವೈದ್ಯಕೀಯ ಚಿಕಿತ್ಸೆಗಾಗಿ ಚೆನ್ನೈನಿಂದ ಬೆಂಗಳೂರಿಗೆ ತೆರಳಿರುವುದರಿಂದ ಅವರಿಗೆ ಸಮನ್ಸ್ ನೀಡಲು ಸಾಧ್ಯವಾಗಲಿಲ್ಲ ಎಂದು ತನಿಖಾ ಸಂಸ್ಥೆ ನ್ಯಾಯಾಲಯಕ್ಕೆ ಮಾಹಿತಿ ನೀಡಿತು.

ಇದಕ್ಕೆ ಅತೃಪ್ತಿ ವ್ಯಕ್ತಪಡಿಸಿದ  ವಿಶೇಷ ಸಿಬಿಐ ನ್ಯಾಯಾಧೀಶ ತಲವಂತ್ ಸಿಂಗ್ ಅವರು ವಿಚಾರಣೆ ಸಮಯದಲ್ಲಿ ರಾಮದಾಸ್ ಅವರು ನ್ಯಾಯಾಲಯದಲ್ಲಿ ಹಾಜರಿರಬೇಕೆಂದು ಹೇಳುತ್ತಾ ಜಾಮೀನು ಸಹಿತ ವಾರೆಂಟ್‌ನ್ನು ಹೊರಡಿಸಿದರು.

ಅನ್ಬುಮಣಿ ರಾಮದಾಸ್ ಅವರು 2004 ರಿಂದ 2009ರ ಯುಪಿಎ 1 ರ ಆಡಳಿತಾವಧಿಯಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿದ್ದರು.

ನಿಗದಿತ ಸಂಖ್ಯೆಯ ಬೋಧಕ ಸಿಬ್ಬಂದಿ ಹಾಗೂ ಚಿಕಿತ್ಸಾ ಪರಿಕರಗಳು ಇಲ್ಲದಿದ್ದರೂ ಇಂದೋರ್‌ನ ವೈದ್ಯಕೀಯ ಕಾಲೇಜೊಂದಕ್ಕೆ, ವಿದ್ಯಾರ್ಥಿಗಳ ದಾಖಲಾತಿಗೆ ಅನುಮತಿ ನೀಡಿದ್ದ ಪ್ರಕರಣದಲ್ಲಿ ಕೇಂದ್ರದ ಮಾಜಿ ಆರೋಗ್ಯ ಸಚಿವ ಅನ್ಬುಮಣಿ ರಾಮದಾಸ್ ಅವರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿ ಏಪ್ರಿಲ್ ನಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.