ADVERTISEMENT

ಕೇಂದ್ರ ಸರ್ಕಾರಕ್ಕೆ `ಸುಪ್ರೀಂ' ನೋಟಿಸ್

ಪಾಕ್ ಸೈನಿಕರಿಂದ ಸೌರಭ್ ಕಾಲಿಯಾ ಅಮಾನುಷ ಹತ್ಯೆ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2012, 19:59 IST
Last Updated 14 ಡಿಸೆಂಬರ್ 2012, 19:59 IST

ನವದೆಹಲಿ (ಪಿಟಿಐ): ಕಾರ್ಗಿಲ್ ಕಾರ್ಯಾಚರಣೆ ಹುತಾತ್ಮ ಕ್ಯಾಪ್ಟನ್ ಸೌರಭ್ ಕಾಲಿಯಾಗೆ ಪಾಕಿಸ್ತಾನ ಸೇನೆಯು ಹಿಂಸೆ ನೀಡಿ ಹತ್ಯೆ ಮಾಡಿದ ವಿಚಾರವನ್ನು ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ಪ್ರಶ್ನಿಸಬೇಕು ಎಂದು ಸಲ್ಲಿಸಲಾಗಿರುವ ಅರ್ಜಿಯ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ಸಲ್ಲಿಸುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದೆ.

ಸೌರಭ್ ಕಾಲಿಯಾ ಅವರ ತಂದೆ ಎನ್. ಕೆ. ಕಾಲಿಯಾ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ  ನ್ಯಾಯಮೂರ್ತಿ ಆರ್. ಎಂ. ಲೋಧಾ ನೇತೃತ್ವದ ನ್ಯಾಯಪೀಠವು 10 ವಾರಗಳಲ್ಲಿ ಪ್ರತಿಕ್ರಿಯೆ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದೆ.

`ಯಾವುದೇ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಈ ವಿಚಾರವನ್ನು ಕೇಂದ್ರ ಸರ್ಕಾರ ತಾನಾಗಿಯೇ ಪ್ರಸ್ತಾಪ ಮಾಡಬಹುದಾಗಿದೆ.  ಇಲ್ಲಿ  ಸುಪ್ರೀಂಕೋರ್ಟ್‌ನ ಪಾತ್ರವೇನು? ನಿಮ್ಮ ನೋವು ಅರ್ಥವಾಗುತ್ತದೆ' ಎಂದು ನ್ಯಾಯಪೀಠ ತಿಳಿಸಿತು.

ಕಳೆದ 13 ವರ್ಷಗಳಲ್ಲಿ ಕೇಂದ್ರ ಸರ್ಕಾರ ಈ ಬಗ್ಗೆ ಏನು ಕ್ರಮ ತೆಗೆದುಕೊಂಡಿದೆ ಎಂದು ಕೇಳಿ ನೋಟಿಸ್ ನೀಡಬೇಕು ಎಂದು ಕಾಲಿಯಾ ಪರ ವಕೀಲರಾದ ಅರವಿಂದ್ ಶರ್ಮಾ ಅವರು ಕೋರಿದ್ದರಿಂದ ನ್ಯಾಯಪೀಠವು ರಕ್ಷಣಾ ಇಲಾಖೆ, ಗೃಹ ಇಲಾಖೆ ಮತ್ತು ವಿದೇಶಾಂಗ ಇಲಾಖೆಗೆ ನೋಟಿಸ್ ನೀಡಿದೆ.

ಜಾಟ್ ರೆಜಿಮೆಂಟ್‌ನಲ್ಲಿ ಕಾರ್ಯ ನಿರ್ವಹಹಿಸುತ್ತಿದ್ದ ಸೌರಭ್ ಕಾಲಿಯಾ ಮತ್ತು ಇತರ ಐವರು ಸೈನಿಕರನ್ನು ಕಾರ್ಗಿಲ್ ಗಡಿಯಲ್ಲಿ ಬಂಧಿಸಿದ್ದ ಪಾಕಿಸ್ತಾನ ಸೇನೆಯು ಹಿಂಸಾಚಾರ ನೀಡಿ ಅಂಗಾಂಗಗಳನ್ನು ಕತ್ತರಿಸಿ ಶವವನ್ನು ಬಿಸಾಡಿ ಜಿನೀವಾ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ಅರ್ಜಿದಾರರು ಆಪಾದಿಸಿದ್ದಾರೆ.

ಖಚಿತ ಮಾಹಿತಿ ಇಲ್ಲ- ಮಲಿಕ್
ಕ್ಯಾಪ್ಟನ್ ಸೌರಭ್ ಕಾಲಿಯಾ ಅವರು 1999ರಲ್ಲಿ ಕಾರ್ಗಿಲ್ ಯುದ್ಧದ ವೇಳೆ ಪಾಕಿಸ್ತಾನ ಸೈನಿಕರು ಹಾರಿಸಿದ ಗುಂಡಿನಿಂದ ಸತ್ತರೋ ಅಥವಾ ಹವಾಮಾನ ಕಾರಣದಿಂದಾಗಿ ಅಸುನೀಗಿದರೋ ಎಂಬುದರ ಬಗ್ಗೆ ತಮಗೆ ಖಚಿತ ಮಾಹಿತಿ ಇಲ್ಲ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ರೆಹಮಾನ್ ಮಲಿಕ್ ಹೇಳಿದ್ದಾರೆ.

ಭಾರತಕ್ಕೆ ಮೂರು ದಿನಗಳ ಭೇಟಿಗಾಗಿ  ಆಗಮಿಸಿರುವ ಅವರು ಸುದ್ದಿಗಾರರ ಜತೆ ಮಾತನಾಡಿದರು. `ಈ ಪ್ರಕರಣವನ್ನು ನಾನು ಪರಿಶೀಲಿಸಿಲ್ಲ. ಇತ್ತೀಚೆಗಷ್ಟೇ ಇದು ನನ್ನ ಗಮನಕ್ಕೆ ಬಂದಿತು. ಸೈನಿಕನ ತಂದೆಯನ್ನು ಭೇಟಿಯಾಗಲು ನನಗೆ ಸಂತೋಷವಾಗುತ್ತದೆ ಮತ್ತು ವಾಸ್ತವವಾಗಿ ಏನಾಯಿತು ಎಂಬುದನ್ನು ತಿಳಿಯ ಬಯಸುತ್ತೇನೆ' ಎಂದು ಅವರು ಹೇಳಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.