ADVERTISEMENT

ಕೊನಾರ್ಕ್: ಮೇಘ ಸಪ್ತಮಿ, 5ಲಕ್ಷ ಭಕ್ತರಿಂದ ಪುಣ್ಯಸ್ನಾನ

​ಪ್ರಜಾವಾಣಿ ವಾರ್ತೆ
Published 30 ಜನವರಿ 2012, 5:45 IST
Last Updated 30 ಜನವರಿ 2012, 5:45 IST

ಭುವನೇಶ್ವರ, ಒಡಿಶಾ (ಐಎಎನ್ಎಸ್): ಕೊರೆಯುವ ಚಳಿಯ ನಡುವೆಯೂ ಸೋಮವಾರ ಮೇಘ ಸಪ್ತಮಿಯ ಅಂಗವಾಗಿ ಒಡಿಶಾದ ದೇವಾಲಯ ನಗರಿ ಎಂದೇ ಹೆಸರಾಗಿರುವ ಇಲ್ಲಿನ ಕೊನಾರ್ಕ್ ದೇವಾಲಯದ ಬಳಿಯ ನದಿಯಲ್ಲಿ ಸುಮಾರು 5 ಲಕ್ಷಕ್ಕೂ ಅಧಿಕ ಭಕ್ತರು ಸಾಂಪ್ರದಾಯಿಕವಾಗಿ ಸ್ನಾನ ಮಾಡುವುದರ ಮೂಲಕ ಸೂರ್ಯ ದೇವರಿಗೆ ಪ್ರಾರ್ಥನೆ ಸಲ್ಲಿಸಿದರು.

ಮಕ್ಕಳು ಹಾಗೂ ವಯಸ್ಸಾದ ಪುರುಷರು ಮತ್ತು ಮಹಿಳೆಯರು ಸೇರಿದಂತೆ ಲಕ್ಷಾಂತರ ಭಕ್ತರು ಇಲ್ಲಿನ ಚಂದ್ರಭಾಗ ನದಿಯ ಸಂಗಮದಲ್ಲಿ ಸೂರ್ಯ ಸ್ನಾನ ಮಾಡಿ, ಸೂರ್ಯ ದೇವರಿಗೆ ನಮಿಸಿದರು.

~ಮೇಘ ಸಪ್ತಮಿಯ ಸಂದರ್ಭದಲ್ಲಿ ಇಲ್ಲಿನ ನದಿಯಲ್ಲಿ ಸ್ನಾನ ಮಾಡಿ, ಸೂರ್ಯದೇವನನ್ನು ಪ್ರಾರ್ಥಿಸಿದರೆ, ರೋಗಗಳು ಗುಣವಾಗುವುದರೊಂದಿಗೆ ಮನಸ್ಸು ಉಲ್ಲಾಸವಾಗುತ್ತದೆ. ಇದರೊಂದಿಗೆ ಪಾಪ- ಕರ್ಮಗಳು ಈ ನದಿಯ ಮೂಲಕ ಬಂಗಾಳ ಕೊಲ್ಲಿಗೆ ಕೊಚ್ಚಿಕೊಂಡು ಹೋಗುತ್ತವೆ~ ಎಂಬ ನಂಬಿಕೆಯಿಂದ ಈ ದಿನದಂದು ಲಕ್ಷಾಂತರ ಭಕ್ತರು ನದಿಯಲ್ಲಿ ಮಿಂದೆದ್ದು, ಸ್ವಾಮಿಗೆ ನಮಿಸುವುದು ವಾಡಿಕೆಯಾಗಿದೆ.

~ಸೂಕ್ತ ಭದ್ರತೆಯಲ್ಲಿ ಸುಮಾರು 5ಲಕ್ಷಕ್ಕೂ ಅಧಿಕ ಭಕ್ತರು ನದಿಯಲ್ಲಿ ಪುಣ್ಯಸ್ನಾನ ಮಾಡಿದರು~ ಎಂದು ಇಲ್ಲಿನ ಹಿರಿಯ ಪೊಲೀಸ್ ಅಧಿಕಾರಿ ಪ್ರಕಾಶ್ ರಾಥ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT