ADVERTISEMENT

ಕೊಲಿಜಿಯಂ ಶಿಫಾರಸು ವಾಪಸ್‌ ನಿದರ್ಶನವೇ ಇಲ್ಲ

ಪಿಟಿಐ
Published 6 ಮೇ 2018, 19:30 IST
Last Updated 6 ಮೇ 2018, 19:30 IST
ಕೊಲಿಜಿಯಂ ಶಿಫಾರಸು ವಾಪಸ್‌ ನಿದರ್ಶನವೇ ಇಲ್ಲ
ಕೊಲಿಜಿಯಂ ಶಿಫಾರಸು ವಾಪಸ್‌ ನಿದರ್ಶನವೇ ಇಲ್ಲ   

ಕೊಚ್ಚಿ: ಸುಪ್ರೀಂ ಕೋರ್ಟ್‌ ಕೊಲಿಜಿಯಂನ ಶಿಫಾರಸನ್ನು ಸರ್ಕಾರ ವಾಪಸ್‌ ಕಳುಹಿಸಿದ ನಿದರ್ಶನವೇ ಇಲ್ಲ. ಹಾಗಾಗಿ, ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಹುದ್ದೆಗೆ ಉತ್ತರಾಖಂಡ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಕೆ.ಎಂ. ಜೋಸೆಫ್‌ ಅವರನ್ನು ನೇಮಿಸುವಂತೆ ಮಾಡಿರುವ ಶಿಫಾರಸನ್ನು ವಾಪಸ್‌ ಕಳುಹಿಸಿರುವ ಬಗ್ಗೆ ವಿಸ್ತೃತವಾದ ಚರ್ಚೆ ಆಗಬೇಕು ಎಂದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಜೋಸೆಫ್‌ ಕುರಿಯನ್‌ ಹೇಳಿದ್ದಾರೆ.

‘ಏನು ನಡೆಯಬಾರದಿತ್ತೋ ಅದು ನಡೆದಿದೆ ಎಂಬ ಭಾವನೆ ಎಲ್ಲರಲ್ಲಿ ಇದೆ’ ಎಂದು ಕುರಿಯನ್‌ ಹೇಳಿದ್ದಾರೆ.

ಕೆ.ಎಂ. ಜೋಸೆಫ್‌ ಅವರಿಗೆ ಬಡ್ತಿ ನೀಡುವ ಶಿಫಾರಸನ್ನು ಹಿಂದಕ್ಕೆ ಕಳುಹಿಸಿದ ಕೇಂದ್ರದ ಕ್ರಮದ ಬಗ್ಗೆ, ಕೊಲಿಜಿಯಂ ಕಳೆದ ಬುಧವಾರ (ಮೇ 2) ಸಭೆ ಸೇರಿ ಚರ್ಚಿಸಿತ್ತು. ಆದರೆ ಅದೇ ಶಿಫಾರಸನ್ನು ಮರಳಿ ಕಳುಹಿಸುವ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ.

ADVERTISEMENT

ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ, ಹಿರಿಯ ನ್ಯಾಯಮೂರ್ತಿಗಳಾದ ಜೆ. ಚೆಲಮೇಶ್ವರ್‌, ರಂಜನ್‌ ಗೊಗೊಯ್‌, ಮದನ್‌ ಬಿ. ಲೋಕೂರ್‌ ಮತ್ತು ಕುರಿಯನ್‌ ಜೋಸೆಫ್‌ ಕೊಲಿಜಿಯಂ ಸದಸ್ಯರಾಗಿದ್ದಾರೆ. ಕೊಲಿಜಿಯಂ ಸದಸ್ಯರ ನಡುವೆ ಭಿನ್ನಾಭಿಪ್ರಾಯದಿಂದಾಗಿ ಬುಧವಾರದ ಸಭೆಯಲ್ಲಿ ಯಾವುದೇ ನಿರ್ಧಾರ ಕೈಗೊಳ್ಳಲಾಗಲಿಲ್ಲ.

ಹಿರಿಯ ವಕೀಲೆ ಇಂದೂ ಮಲ್ಹೋತ್ರಾ ಮತ್ತು ನ್ಯಾಯಮೂರ್ತಿ ಕೆ.ಎಂ. ಜೋಸೆಫ್‌ ಅವರನ್ನು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾಗಿ ನೇಮಿಸುವಂತೆ ಶಿಫಾರಸು ಮಾಡಲಾಗಿತ್ತು. ಇಂದೂ ಅವರ ನೇಮಕಕ್ಕೆ ಕೇಂದ್ರ ಅನುಮೋದನೆ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.