ADVERTISEMENT

ಕೊಲ್ಹಾಪುರ: ರಸ್ತೆ ಸುಂಕ ವಸೂಲಾತಿ ಕೇಂದ್ರಗಳ ಧ್ವಂಸ

​ಪ್ರಜಾವಾಣಿ ವಾರ್ತೆ
Published 12 ಜನವರಿ 2014, 19:29 IST
Last Updated 12 ಜನವರಿ 2014, 19:29 IST

ಕೊಲ್ಹಾಪುರ (ಪಿಟಿಐ): ಪಶ್ಚಿಮ ಮಹಾ­ರಾಷ್ಟ್ರದ ಕೊಲ್ಹಾಪುರ­ದಲ್ಲಿ­ರುವ ಒಂಬತ್ತು ರಸ್ತೆಗಳಲ್ಲಿ ಸುಂಕ (ಟೋಲ್‌) ವಸೂಲಾತಿ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ  ಭಾನು­ವಾರ ಹಿಂಸಾರೂಪ ಪಡೆಯಿತು. ಶಿವಸೇನೆಯ ಶಂಕಿತ ಕಾರ್ಯ­ಕರ್ತರು ನಾಲ್ಕು ಸುಂಕ ವಸೂಲಾತಿ ಕೇಂದ್ರಗಳನ್ನು ಧ್ವಂಸ­ಗೊಳಿಸಿದ್ದಾರೆ. ಈ ನಡುವೆ, ಸುಂಕ ವಸೂಲಾತಿ ಖಂಡಿಸಿ ಶಿವಸೇನೆಯು ಸೋಮವಾರ ಕೊಲ್ಹಾಪುರ ಬಂದ್‌ಗೆ ಕರೆ ನೀಡಿದೆ.

ಕೆಲವರು ವಶಕ್ಕೆ: ಸುಂಕ ವಸೂಲಾತಿ ಕೇಂದ್ರ­-ಗಳನ್ನು ಧ್ವಂಸಗೊಳಿಸಿರುವ ಕೆಲವರನ್ನು ಪೊಲೀಸರು ವಶಕ್ಕೆ ತೆಗೆದು­ಕೊಂಡಿದ್ದಾರೆ. ಶಿವಸೇನೆಯ ಕಾರ್ಯಕರ್ತರು ಈ ಕೃತ್ಯ ಎಸಗಿದ್ದಾರೆ ಎಂದು ಹೇಳ­ಲಾ­ಗಿದೆ. ಘಟನೆಯಲ್ಲಿ ಯಾರೊಬ್ಬರೂ ಗಾಯ­ಗೊಂಡ ಬಗ್ಗೆ ವರದಿಯಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಸುಂಕ ವಸೂಲಾತಿ ಕೇಂದ್ರಗಳನ್ನು ನಿರ್ವಹಿ­ಸುವ  ‘ಐಆರ್‌ಬಿ ಇನ್‌­ಫ್ರಾ­ಸ್ಟ್ರಕ್ಚರ್‌ ಡೆವಲ­ಪರ್ಸ್‌’ ಕಂಪೆನಿ ಕಚೇರಿ ಮೇಲೂ  ದಾಳಿ ನಡೆದಿದೆ
ಶಾಂತಿಗೆ ಮನವಿ: ಈ ಮಧ್ಯೆ, ಶಾಂತಿ ಕಾಪಾಡುವಂತೆ ಮುಖ್ಯಮಂತ್ರಿ ಪೃಥ್ವಿ­ರಾಜ್‌ ಚವಾಣ್‌  ಅವರು ಪ್ರತಿಭಟನಾ­ಕಾರರಿಗೆ ಮನವಿ ­ಮಾಡಿದ್ದಾರೆ.
ಸುಂಕ ವಸೂಲಾತಿಯನ್ನು ಸ್ಥಗಿತ­ಗೊಳಿ­ಸುವಂತೆ ಆಗ್ರಹಿಸಿ ನಗರದ ನಿವಾಸಿಗಳು ಮೂರು ವರ್ಷಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಸುಂಕ ವಸೂಲಾತಿ ವಿರೋಧಿ ಸಮಿತಿಯ ಹತ್ತಕ್ಕೂ ಅಧಿಕ ಸದಸ್ಯರು ಕಳೆದ ಆರು ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.

ಮಹಾರಾಷ್ಟ್ರ ಗೃಹ ಸಚಿವ ಸಟೇಜ್‌ ಪಾಟೀಲ್‌ ಮತ್ತು ಕಾರ್ಮಿಕ ಸಚಿವ ಹಸನ್‌ ಮುಷ್ರಿಫ್‌ ಶನಿವಾರ ನಿರಶನ ನಡೆಸುತ್ತಿರುವವರನ್ನು ಭೇಟಿಯಾಗಿ ಸುಂಕ ವಸೂಲಾತಿ ನಿಲ್ಲಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂಬ ಭರವಸೆ ನೀಡಿದ್ದರು ಎಂದು ಹೇಳಲಾಗಿದೆ. ಆದರೆ, ಭರವಸೆಯ ಹೊರ­ತಾ­ಗಿಯೂ ಭಾನುವಾರ ಸುಂಕ ವಸೂ­ಲಾತಿ ಮುಂದುವರಿದಿದ್ದರಿಂದ ಹಿಂಸಾ­ಚಾರ ಉಂಟಾಯಿತು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.