ADVERTISEMENT

ಕೋಮುಗಲಭೆ - ಮೋದಿಗೆ ಸಮನ್ಸ್: ಹೈಕೋರ್ಟ್ ನಕಾರ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2012, 9:25 IST
Last Updated 1 ಫೆಬ್ರುವರಿ 2012, 9:25 IST

ಅಹಮದಾಬಾದ್ (ಪಿಟಿಐ/ ಐಎಎನ್ಎಸ್): ರಾಜ್ಯದಲ್ಲಿ ಸಂಭವಿಸಿದ 2002ರ ಕೋಮು ಗಲಭೆಗಳಿಗೆ ಸಂಬಂಧಿಸಿದಂತೆ ಪ್ರಶ್ನಿಸುವ ಸಲುವಾಗಿ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ಸಮನ್ಸ್ ಕಳುಹಿಸುವಂತೆ ನಾನಾವತಿ ಆಯೋಗಕ್ಕೆ ನಿರ್ದೇಶನ ಕೋರಿದ ಅರ್ಜಿಯನ್ನು ಗುಜರಾತ್ ಹೈಕೋರ್ಟ್ ಬುಧವಾರ ತಿರಸ್ಕರಿಸಿತು. ಇದರೊಂದಿಗೆ ಮೋದಿ ಅವರು ಕೋಮು ಗಲಭೆಗಳಿಗೆ ಸಂಬಂಧಿಸಿದ ವಿಚಾರಣೆ ವಿಚಾರದಲ್ಲಿ ನಿರುಮ್ಮಳರಾದರು.

ನ್ಯಾಯಮೂರ್ತಿ ಅಖಿಲ್ ಖುರೇಷಿ ಮತ್ತು ಸೋನಿಯಾ ಗೋಕಾನಿ ಅವರನ್ನು ಒಳಗೊಂಡ ವಿಭಾಗೀಯ ಪೀಠವು ಸರ್ಕಾರೇತರ ಸಂಸ್ಥೆ ಜನ ಸಂಘರ್ಷ ಮಂಚ್ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸುತ್ತಾ ~ಸಾಕ್ಷಿಗಳನ್ನು ಕರೆಸಲು ಆಯೋಗಕ್ಕೆ ಹೆಚ್ಚಿನ ವಿವೇಚನಾ ಅಧಿಕಾರಗಳಿವೆ~ ಎಂದು ಹೇಳಿತು.

ಮೋದಿ ಅವರಿಗೆ ಸಮನ್ಸ್ ಕಳುಹಿಸಬೇಕೆಂದು ಕೋರಿರುವ ಜೆ ಎಸ್ ಎಂ ಮನವಿಯಲ್ಲಿ ಯಾವುದೇ ಹೆಚ್ಚಿನ ತಿರುಳು ಕಾಣಿಸುತ್ತಿಲ್ಲ ಎಂದೂ ನ್ಯಾಯಾಲಯ ಅಭಿಪ್ರಾಯಪಟ್ಟಿತು.

 ಮೋದಿ ಅವರಿಗೆ ಸಮನ್ಸ್ ಕಳುಹಿಸಲು ನ್ಯಾಯಮೂರ್ತಿ ಜಿ.ಟಿ. ನಾನಾವತಿ ಮತ್ತು ನ್ಯಾಯಮೂರ್ತಿ ಅಕ್ಷಯ ಮೆಹ್ತಾ ಅವರನ್ನು ಒಳಗೊಂಡ ತನಿಖಾ ಆಯೋಗವು ನಿರಾಕರಿಸಿದ್ದನ್ನು ಅನುಸರಿಸಿ ಹೈಕೋರ್ಟ್ ಮೆಟ್ಟಿಲು ಏರಿದ ಜಿ ಎಸ್ ಎಂ ಸಂಘಟನೆಯು ಮೋದಿ ಅವರಿಗೆ ಸಮನ್ಸ್ ಕಳುಹಿಸುವಂತೆ ಆಯೋಗಕ್ಕೆ ನಿರ್ದೇಶಿಸಬೇಕು ಎಂದು ಕೋರಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.