ADVERTISEMENT

ಕೋರ್ಟ್‌ಗೆ ಶರಣಾಗದ ಮಾಜಿ ಸಚಿವ ಸುಖ್‌ರಾಂ

​ಪ್ರಜಾವಾಣಿ ವಾರ್ತೆ
Published 5 ಜನವರಿ 2012, 19:30 IST
Last Updated 5 ಜನವರಿ 2012, 19:30 IST

ನವದೆಹಲಿ (ಪಿಟಿಐ): ಸುಮಾರು 18 ವರ್ಷಗಳ ಹಿಂದಿನ ಟೆಲಿಕಾಂ ಹಗರಣಕ್ಕೆ ಸಂಬಂಧಿಸಿದಂತೆ ಸಂಜೆಯ ಒಳಗೆ ನ್ಯಾಯಾಲಯದ ಎದುರು ಶರಣಾಗಲು ಸುಪ್ರೀಂಕೋರ್ಟ್ ಗುರುವಾರ ನೀಡಿದ ಆದೇಶದ ಹೊರತಾಗಿಯೂ, ಕೇಂದ್ರದ ಮಾಜಿ ದೂರಸಂಪರ್ಕ ಸಚಿವ ಸುಖ್‌ರಾಂ ಅವರು ಶರಣಾಗಲಿಲ್ಲ.
 
ಅನಾರೋಗ್ಯದ ಕಾರಣ ನೀಡಿ ಅವರು ಶರಣಾಗುವುದರಿಂದ ತಪ್ಪಿಸಿಕೊಂಡರು. ಮಾಜಿ ಅಧಿಕಾರಿಗಳಾದ ಪಿ.ರಾಮರಾವ್ ಮತ್ತು ರುನು ಘೋಷ್  ಅವರು ಮಾತ್ರ ನ್ಯಾಯಾಲಯದ ಆದೇಶಕ್ಕೆ ತಲೆಬಾಗಿದರು.

ದೆಹಲಿ ಹೈಕೋರ್ಟ್ ಸುಖ್‌ರಾಂ ಮತ್ತು ರಾಮರಾವ್ ಅವರಿಗೆ ತಲಾ ಮೂರು ವರ್ಷ, ರುನು ಘೋಷ್ ಅವರಿಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಅದನ್ನು ಪ್ರಶ್ನಿಸಿ ಆರೋಪಿಗಳು ಸಲ್ಲಿಸಿದ್ದ ಅರ್ಜಿಯನ್ನು ಕೈಗೆತ್ತಿಕೊಂಡ ನ್ಯಾಯಮೂರ್ತಿಗಳಾದ ಪಿ.ಸದಾಶಿವಂ ಮತ್ತು ಜೆ.ಚಲಮೇಶ್ವರ್ ಅವರು, ಹೈಕೋರ್ಟ್ ಆದೇಶದಲ್ಲಿ ಮಧ್ಯ ಪ್ರವೇಶಿಸಲು ನಿರಾಕರಿಸಿದರು.

`ಹೃದಯ ಕಾಯಿಲೆಯಿಂದ ಬಳಲುತ್ತಿರುವ 86 ವರ್ಷದ ಸುಖ್‌ರಾಂ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಅವರು ಆ್ಯಂಜಿಯೊಗ್ರಫಿ  ಚಿಕಿತ್ಸೆಗೆ ಒಳಗಾಗುತ್ತಿರುವ ಕಾರಣ ನ್ಯಾಯಾಲಯಕ್ಕೆ ಶರಣಾಗುವುದರಿಂದ ವಿನಾಯಿತಿ ನೀಡಬೇಕು~ ಎಂದು ಕೋರಿ ಅವರ ವಕೀಲರು ಸಿಬಿಐ ನ್ಯಾಯಾಲಯದಲ್ಲಿ ಮತ್ತೊಂದು ಅರ್ಜಿಯನ್ನು ಸಲ್ಲಿಸಿದರು.

ಅರ್ಜಿಯ ವಿಚಾರಣೆ ನಡೆಸಲು ನಿರಾಕರಿಸಿದ ನ್ಯಾಯಮೂರ್ತಿ ಧರ್ಮೇಶ್ ಶರ್ಮ, ಆಸ್ಪತ್ರೆಯಲ್ಲಿಯೇ ಅವರನ್ನು ನ್ಯಾಯಾಂಗ ಬಂಧನಕ್ಕೆ ತೆಗೆದುಕೊಳ್ಳುವಂತೆ ಆದೇಶಿಸಿದರು.

 ಈ ಪ್ರಕರಣದ ವಿಚಾರಣೆ ನಡೆಸುತ್ತಿರುವ ಮತ್ತೊಬ್ಬ ನ್ಯಾಯಮೂರ್ತಿ ರಜೆಯಲ್ಲಿರುವ ಕಾರಣ ತಾವು ಈ ಕುರಿತು ಯಾವುದೇ ಹೊಸ ಆದೇಶ ನೀಡಲು ನ್ಯಾಯಾಂಗದಲ್ಲಿ ಅವಕಾಶ ಇಲ್ಲ, ಹೀಗಾಗಿ ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಸುಖ್‌ರಾಂ ಅವರ ಅರ್ಜಿ ವಿಚಾರಣೆಗೆ ಬರಲಿದೆ ಎಂದು ತಿಳಿಸಿದರು.

ಮಧ್ಯಾಹ್ನ ನ್ಯಾಯಾಲಯದ ಎದುರು ಶರಣಾದ ಹೈದರಾಬಾದ್ ಮೂಲದ ಖಾಸಗಿ ಟೆಲಿಕಾಂ ಸಂಸ್ಥೆ ಎಆರ್‌ಎಂನ ಮಾಜಿ ವ್ಯವಸ್ಥಾಪಕ ನಿರ್ದೇಶಕರಾದ ಪಿ.ರಾಮರಾವ್ ಮತ್ತು ದೂರಸಂಪರ್ಕ ಇಲಾಖೆಯ ಮಾಜಿ ಮಹಾ ನಿರ್ದೇಶಕರಾದ ರುನು ಘೋಷ್ ಅವರನ್ನು ಜೈಲಿಗೆ ಕಳುಹಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.