ADVERTISEMENT

ಕೋಲಿಗೆ ಗಲ್ಲು: ಸುಪ್ರೀಂ ಅಸ್ತು

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2011, 18:00 IST
Last Updated 15 ಫೆಬ್ರುವರಿ 2011, 18:00 IST

ನವದೆಹಲಿ (ಐಎಎನ್‌ಎಸ್):  ಸುಪ್ರೀಂಕೋರ್ಟ್ ಮಂಗಳವಾರ ನಿತಾರಿ ಸರಣಿ ಹಂ ತಕ ಸುರೇಂದ್ರ ಕೋಲಿಯ ಗಲ್ಲು ಶಿಕ್ಷೆಯನ್ನು ಎತ್ತಿಹಿಡಿದಿದ್ದು, ಈತನ ಅಪರಾಧವನ್ನು ‘ಅತ್ಯಂತ ಭೀಕರ, ಭಯಾನಕ’ ಎಂದು ಬಣ್ಣಿಸಿದೆ.

ಅಪರಾಧಿಯು ನೊಯಿಡಾದಲ್ಲಿನ ತನ್ನ ಮಾಲೀಕ ಮಣಿಂದರ್ ಸಿಂಗ್ ಪಂಧೇರ್‌ನ ಮನೆಗೆ ಮಹಿಳೆಯರನ್ನು ಸೆಳೆದು, ನಂತರ ಅವರನ್ನು ಉಸಿರುಗಟ್ಟಿ ಸಾಯಿಸಿ, ಶವಗಳೊಡನೆ ಲೈಂಗಿಕ ಕ್ರಿಯೆ ನಡೆಸಲು ಪ್ರಯತ್ನಿಸಿರುವುದಾಗಿ ನ್ಯಾಯಮೂರ್ತಿಗಳಾದ ಮಾರ್ಕಂಡೇಯ ಕಟ್ಜು ಮತ್ತು ಗ್ಯಾನ್ ಸುಧಾ ಮಿಶ್ರಾ ಅವರನ್ನೊಳಗೊಂಡ ನ್ಯಾಯಪೀಠ ತಿಳಿಸಿದೆ. ಅಲ್ಲದೆ, ಮೃತದೇಹಗಳನ್ನು ತುಂಡುತುಂಡಾಗಿ ಕತ್ತರಿಸಿ, ಕೆಲವನ್ನು ಬೇಯಿಸಿ, ತಿಂದಿರುವುದಾಗಿಯೂ ಅದು ಹೇಳಿದೆ.

‘ಕೋಲಿ ಮಾಡಿರುವ ಅಪರಾಧವು ಅಪರೂಪದಲ್ಲಿ ಅಪರೂಪವಾಗಿದ್ದು, ಮರಣದಂಡನೆಗಿಂತ ಕಡಿಮೆ ಶಿಕ್ಷೆ ವಿಧಿಸುವಂತಹದ್ದಲ್ಲ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ರಿಂಪಾ ಹಲ್ದಾರ್ ಪ್ರಕರಣದಲ್ಲಿ ಕೋಲಿಗೆ ಗಲ್ಲುಶಿಕ್ಷೆ ವಿಧಿಸಿದ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದಿರುವ ಅಲಹಾಬಾದ್ ಹೈಕೋರ್ಟ್‌ನ ತೀರ್ಪಿಗೆ ಸುಪ್ರೀಂಕೋರ್ಟ್ ಸಹಮತ ಸೂಚಿಸಿದೆ.

ಕೋಲಿಗೆ ಗಲ್ಲುಶಿಕ್ಷೆ ದೃಢಪಡಿಸಿದ ಸುಪ್ರೀಂಕೋರ್ಟ್, ವಿಚಾರಣಾ ನ್ಯಾಯಾಲಯ ಮರಣದಂಡನೆ ವಿಧಿಸಿ, ನಂತರ ಹೈಕೋರ್ಟ್ ಆರೋಪಮುಕ್ತಗೊಳಿಸಿದ ಇನ್ನೊಬ್ಬ ಆರೋಪಿ ಪಂಧೇರ್ ಬಗ್ಗೆ ಏನನ್ನೂ ಹೇಳಿಲ್ಲ. ಇತರ 16 ಪ್ರಕರಣಗಳಲ್ಲೂ ಕೋಲಿ ವಿಚಾರಣೆ ಎದುರಿಸುತ್ತಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.