ADVERTISEMENT

ಕ್ಯಾನ್ಸರ್ ರೋಗಿಗಳಿಗೆ ಆರ್ಥಿಕ ನೆರವು

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2011, 19:30 IST
Last Updated 12 ಆಗಸ್ಟ್ 2011, 19:30 IST
ಕ್ಯಾನ್ಸರ್ ರೋಗಿಗಳಿಗೆ ಆರ್ಥಿಕ ನೆರವು
ಕ್ಯಾನ್ಸರ್ ರೋಗಿಗಳಿಗೆ ಆರ್ಥಿಕ ನೆರವು   

ನವದೆಹಲಿ (ಪಿಟಿಐ): ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಕೇಂದ್ರ ಸರ್ಕಾರ, ರೋಗಿಗಳಿಗೆ ಆರ್ಥಿಕ ನೆರವು ನೀಡಲು ಯೋಜನೆಯೊಂದನ್ನು ರೂಪಿಸಿದೆ. ಈ ಉದ್ದೇಶಿತ ಯೋಜನೆ ಅಡಿ ಪ್ರತಿ ಜಿಲ್ಲೆಯಲ್ಲಿಯೂ ನೂರು ರೋಗಿಗಳಿಗೆ ಚಿಕಿತ್ಸೆಗಾಗಿ ಒಂದು ಲಕ್ಷ ರೂಪಾಯಿ ನೀಡಲಾಗುವುದು ಎಂದು ಶುಕ್ರವಾರ ಲೋಕಸಭೆಗೆ ತಿಳಿಸಿದೆ.

ಪ್ರಸ್ತುತ ಈ ಸಂಬಂಧ 21 ರಾಜ್ಯಗಳ 100 ಜಿಲ್ಲೆಗಳಲ್ಲಿ ಪೈಲಟ್ ಯೋಜನೆ ಜಾರಿಯಲ್ಲಿದ್ದು, ಒಂದು ಅಥವಾ ಎರಡು ವರ್ಷಗಳಲ್ಲಿ ಇದನ್ನು ಉಳಿದ ಜಿಲ್ಲೆಗಳಿಗೂ ವಿಸ್ತರಿಸಲಾಗುತ್ತದೆ ಎಂದು ಆರೋಗ್ಯ ಸಚಿವ ಗುಲಾಂ ನಬಿ ಆಜಾದ್ ತಿಳಿಸಿದರು.

ಸಂಸದರ ಪ್ರದೇಶಾಭಿವೃದ್ಧಿ ನಿಧಿ ಅಡಿ ಲಭ್ಯವಿರುವ ಹಣವು ಕ್ಯಾನ್ಸರ್ ರೋಗಿಗಳ ಚಿಕಿತ್ಸೆಗೆಂದು ಏಮ್ಸ ಹಾಗೂ ಟಾಟಾ ಆಸ್ಪತ್ರೆಗಳಿಗೆ ದೊರಕುವಂತಾಗಬೇಕು ಎಂದು ಶೂನ್ಯವೇಳೆಯಲ್ಲಿ ಕಾಂಗ್ರೆಸ್‌ನ ಜೈಪ್ರಕಾಶ್ ಅಗರ್‌ವಾಲ್ ಹೇಳಿದರು.

ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಕ್ಯಾನ್ಸರ್ ರೋಗಿಯ ಚಿಕಿತ್ಸಾ ವೆಚ್ಚವನ್ನು ಸಂಪೂರ್ಣವಾಗಿ ಸರ್ಕಾರ ಭರಿಸಲಿದೆ ಎಂದು ಸಚಿವರು ಆಶ್ವಾಸನೆ ನೀಡಿದರು.

ತಿದ್ದುಪಡಿ ಮಸೂದೆಗೆ ಅಸ್ತು
: ಅಕ್ರಮವಾಗಿ ಮಾನವ ಅಂಗಾಂಗ ಮಾರಾಟ ಹಾಗೂ ಕಸಿ ಮಾಡುವವರನ್ನು ಕಠಿಣ ಶಿಕ್ಷೆಗೊಳಪಡಿಸುವ ತಿದ್ದುಪಡಿ ಮಸೂದೆಗೆ ಲೋಕಸಭೆ ಅನುಮೋದನೆ ನೀಡಿದೆ.

ಇಂಥ ಕೃತ್ಯ ಎಸಗಿದವರಿಗೆ 10 ವರ್ಷಗಳ ಜೈಲು ಶಿಕ್ಷೆ ಹಾಗೂ ಒಂದು ಕೋಟಿ ರೂಪಾಯಿವರೆಗೆ ದಂಡ ವಿಧಿಸುವ ಅವಕಾಶ ಉದ್ದೇಶಿತ ಮಸೂದೆಯಲ್ಲಿ ಇದೆ.

ಮಾನವ ಅಂಗಾಂಗ ಕಸಿ ತಿದ್ದುಪಡಿ ಮಸೂದೆಯನ್ನು 2010ರಲ್ಲಿ ಲೋಕಸಭೆಯಲ್ಲಿ ಮಂಡಿಸಲಾಗಿತ್ತು.

ರೈಲ್ವೆ ಯೋಜನೆಗೆ 1.25 ಲಕ್ಷ ಕೋಟಿ: ದೇಶದಾದ್ಯಂತ ಪ್ರಸ್ತುತ ಜಾರಿಯಲ್ಲಿರುವ ರೈಲ್ವೆ ಯೋಜನೆಗಳನ್ನು ಪೂರ್ಣಗೊಳಿಸಲು 1.25 ಲಕ್ಷ ಕೋಟಿ ರೂಪಾಯಿಯ ಅಗತ್ಯವಿದೆ ಎಂದು ಸರ್ಕಾರ ಹೇಳಿದೆ.

 ಹಣಕಾಸು ಕೊರತೆ, ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ವಿಳಂಬ, ನ್ಯಾಯಾಲಯದಲ್ಲಿರುವ ಪ್ರಕರಣಗಳು, ಅರಣ್ಯ ಇಲಾಖೆ ಅನುಮತಿ ಇತ್ಯಾದಿ ಕಾರಣಗಳಿಂದ ಯೋಜನೆಗಳು ಆಮೆ ಗತಿಯಲ್ಲಿ ಸಾಗುತ್ತಿವೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಭರತ್ ಸಿನ್ಹ ಸೋಳಂಕಿ ಲಿಖಿತ ಉತ್ತರದಲ್ಲಿ ತಿಳಿಸಿದರು.

ಕಾರ್ಯಕರ್ತೆಯರ ಶೋಷಣೆ: ಅಂಗನವಾಡಿ, ಶಿಶುಪಾಲನಾ ಕೇಂದ್ರಗಳ ಕಾರ್ಯಕರ್ತೆಯರ ಮೇಲೆ ಶೋಷಣೆ ನಡೆಯುತ್ತಿರುವ ಬಗ್ಗೆ ವಿವಿಧ ರಾಜ್ಯಗಳಿಂದ ದೂರುಗಳು ಬಂದಿವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಕೃಷ್ಣಾ ತೀರತ್ ಲೋಕಸಭೆಗೆ ತಿಳಿಸಿದರು.

2011ರಲ್ಲಿ ಈ ಸಂಬಂಧ ಛತ್ತೀಸ್‌ಗಡ, ಮಧ್ಯಪ್ರದೇಶ, ಒಡಿಶಾ, ಪಂಜಾಬ್ ಹಾಗೂ ಉತ್ತರ ಪ್ರದೇಶಗಳಿಂದ ಐದು ದೂರುಗಳು ಬಂದಿವೆ. ಸೂಕ್ತ ಕ್ರಮಕ್ಕಾಗಿ ಇವುಗಳನ್ನು ಸಂಬಂಧಪಟ್ಟ ರಾಜ್ಯ ಸರ್ಕಾರಗಳಿಗೆ ಕಳುಹಿಸಲಾಗಿದೆ ಎಂದು ಅವರು ಹೇಳಿದರು.

ಕೃಷಿಗೆ ತೊಂದರೆಯಾಗಿಲ್ಲ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ಎಂಜಿಎನ್‌ಆರ್‌ಇಜಿಎಸ್) ಯೋಜನೆಯಿಂದ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗಿಲ್ಲ ಎಂದು ಕೃಷಿ ಸಚಿವ ಶರದ್ ಪವಾರ್ ತಿಳಿಸಿದರು.

ಬ್ಯಾಂಕ್ ಶಾಖೆಗಳು: ದೇಶದಾದ್ಯಂತ ಪ್ರತಿ ವರ್ಷವೂ ಸುಮಾರು 5,000 ಬ್ಯಾಂಕ್ ಶಾಖೆಗಳು ಆರಂಭವಾಗುತ್ತವೆ ಎಂದು ಸರ್ಕಾರ ಮಾಹಿತಿ ನೀಡಿದೆ.

ಭದ್ರತಾ ವ್ಯವಸ್ಥೆ: ಅಪಾಯಕ್ಕೆ ಈಡಾಗುವಂಥ ಸೂಕ್ಷ್ಮ ರೈಲು ನಿಲ್ದಾಣಗಳಲ್ಲಿ ಶೀಘ್ರವೇ ಎಲೆಕ್ಟ್ರಾನಿಕ್ ಭದ್ರತಾ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ರೈಲ್ವೆ ಸಚಿವ ದಿನೇಶ್ ತ್ರಿವೇದಿ ರಾಜ್ಯಸಭೆಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.