ಬಾಲಸೋರ್ (ಒಡಿಶಾ) (ಪಿಟಿಐ): ವೈರಿ ರಾಷ್ಟ್ರಗಳ ಕ್ಷಿಪಣಿಗಳಿಂದ ದೇಶವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿ ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಕ್ಷಿಪಣಿ ನಿಗ್ರಹ ವ್ಯವಸ್ಥೆಯನ್ನು ಭಾನುವಾರ ಇಲ್ಲಿ ಯಶಸ್ವಿಯಾಗಿ ಪರೀಕ್ಷೆಗೆ ಒಳಪಡಿಸಲಾಯಿತು.
ಇಲ್ಲಿಂದ 15 ಕಿ.ಮೀ. ದೂರದ ಚಂಡೀಪುರದಿಂದ ಬೆಳಿಗ್ಗೆ 9.33ರ ಸುಮಾರಿಗೆ ನೆಲದಿಂದ ನೆಲಕ್ಕೆ ನೆಗೆಯುವ ಸುಧಾರಿತ ‘ಪೃಥ್ವಿ’ ಕ್ಷಿಪಣಿಯನ್ನು ಉಡಾಯಿಸಲಾಯಿತು. ಇದಾದ ಮೂರು ನಿಮಿಷಗಳಲ್ಲಿ ಇಲ್ಲಿಂದ ಸುಮಾರು 70 ಕಿ.ಮೀ. ದೂರದಲ್ಲಿರುವ ವೀಲರ್ ದ್ವೀಪದಲ್ಲಿ ನೆಲೆಗೊಳಿಸಲಾಗಿದ್ದ ಸುಧಾರಿತ ವಾಯು ರಕ್ಷಣೆ (ಎಎಡಿ) ಕ್ಷಿಪಣಿ ರಾಡಾರ್‌ಗಳ ಸಹಾಯದಿಂದ ಸಂಕೇತಗಳನ್ನು ಸ್ವೀಕರಿಸಿ ‘ಪೃಥ್ವಿ’ ಕ್ಷಿಪಣಿಯನ್ನು ಹೊಡೆದುರುಳಿಸಲು ಆಗಸಕ್ಕೆ ಚಿಮ್ಮಿತು.
ಬಂಗಾಳ ಕೊಲ್ಲಿ ಸಮುದ್ರದ ಮೇಲ್ಭಾಗ 16 ಕಿ.ಮೀ. ಎತ್ತರದಲ್ಲಿ ಎಎಡಿ ಕ್ಷಿಪಣಿಯು ಪೃಥ್ವಿ ಕ್ಪಿಪಣಿಯನ್ನು ಹೊಡೆದು ಉರುಳಿಸಿತು ಎಂದು ಐಟಿಆರ್ ನಿರ್ದೇಶಕ ಎಸ್. ಪಿ. ದಾಸ್ ತಿಳಿಸಿದರು.
‘ಇದೊಂದು ಅತ್ಯಂತ ಯಶಸ್ವಿ ಪರೀಕ್ಷೆಯಾಗಿತ್ತು. ಬಹು ಆಯಾಮದ ಖಂಡಾಂತರ ಕ್ಷಿಪಣಿ ರಕ್ಷಣೆ (ಬಿಎಂಡಿ) ವ್ಯವಸ್ಥೆ ಅಭಿವೃದ್ಧಿಪಡಿಸುವಲ್ಲಿ ಇದೊಂದು ಮಹತ್ವದ ಪರೀಕ್ಷೆ. ಇದು ಅತ್ಯಂತ ಪರಿಪೂರ್ಣವಾಗಿ ನಡೆದಿದೆ’ ಎಂದರು.
ಕ್ಷಿಪಣಿಗಳು ಸಾಗಿದ ಹಾದಿಯನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಿದ ನಂತರ ಹಲವು ಮಾಹಿತಿಗಳನ್ನು ಕಲೆಹಾಕಿ ಕ್ಷಿಪಣಿ ಹೊಡೆದು ಉರುಳಿಸಿದ ಬಗೆಯನ್ನು ಇನ್ನು ಮುಂದೆ ಅಧ್ಯಯನ ಮಾಡಲಾಗುತ್ತದೆ. 7 ಮೀ. ಎತ್ತರದ ಎಎಡಿಯನ್ನು ಯಾವುದೇ ಹವಾಮಾನ ಪರಿಸ್ಥಿತಿಯಲ್ಲೂ ಗರಿಷ್ಠ 30 ಕಿ.ಮೀ. ತನಕ ಆಗಸದಲ್ಲಿ ಚಲಿಸುವಂತೆ ಮಾಡಿ ವೈರಿ ಕ್ಷಿಪಣಿಯನ್ನು ಹೊಡೆದು ಉರುಳಿಸುವ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ.
ಡಿಆರ್‌ಡಿಒ ವಿಜ್ಞಾನಿಗಳು ಇದೀಗ ಆರನೇ ಬಾರಿಗೆ ಈ ಕ್ಷಿಪಣಿ ನಿಗ್ರಹ ವ್ಯವಸ್ಥೆಯನ್ನು ಪರೀಕ್ಷೆಗೆ ಒಳಪಡಿಸಿದ್ದಾರೆ. ಕಳೆದ ಜುಲೈ 26ರಂದು ನಡೆದ ಐದನೇ ಪರೀಕ್ಷೆ ಸಹ ಯಶಸ್ವಿಯಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.