ADVERTISEMENT

ಖಾಸಗಿ ಸಹಭಾಗಿತ್ವ ಚಿಂತನೆ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2011, 17:25 IST
Last Updated 25 ಫೆಬ್ರುವರಿ 2011, 17:25 IST

ನವದೆಹಲಿ (ಪಿಟಿಐ): ಸರ್ಕಾರಿ- ಖಾಸಗಿ ಸಹಭಾಗಿತ್ವದ 85 ಪ್ರಸ್ತಾವಗಳು ರೈಲ್ವೆ ಇಲಾಖೆಯ ಪರಿಶೀಲನೆಯಲ್ಲಿವೆ ಎಂದು ಸಚಿವೆ ಮಮತಾ ಬ್ಯಾನರ್ಜಿ ಶುಕ್ರವಾರ ಹೇಳಿದರು.

ಇಲಾಖೆಯಲ್ಲಿ ಗುಣಮಟ್ಟ ವೃದ್ಧಿ ಮತ್ತು ವಿಸ್ತರಣೆಗೆ ಅವಕಾಶವಾಗುವಂತೆ ಖಾಸಗಿ ವಲಯದ ಆರ್ಥಿಕ ಸಹಭಾಗಿತ್ವದ ಬಗ್ಗೆ ಚಿಂತಿಸಲಾಗುತ್ತಿದೆ. ಎನ್‌ಟಿಸಿ, ಸೇಲ್, ಆರ್‌ಐಸಿ ಮತ್ತಿತರ ಸಂಸ್ಥೆಗಳು ಸಹಭಾಗಿಗಳಾಗಲಿವೆ ಎಂದು ಬಜೆಟ್ ನಂತರ ನಡೆದ ಸಾಂಪ್ರದಾಯಿಕ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಕಳೆದ ಬಜೆಟ್‌ನಲ್ಲಿ ಘೋಷಣೆಯಾದ ಯೋಜನೆಗಳ ಸಕಾಲಿಕ ಜಾರಿ ಕುರಿತ ಪ್ರಶ್ನೆಗೆ, ಯಾವುದೇ ಒಂದು ನಿರ್ದಿಷ್ಟ ಯೋಜನೆಗೆ ಹಣ ಬಳಕೆಯಾಗದಿದ್ದರೆ ಅದನ್ನು ಇತರ ಕಾರ್ಯಕ್ಕೆ ಬಳಸಿಕೊಳ್ಳದೆ ಅದೇ ಕಾರ್ಯಕ್ಕೆ ಮೀಸಲಿಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಸೂಪರ್ ಎ.ಸಿ ರೈಲುಗಳನ್ನು ಓಡಿಸುವ ಪ್ರಸ್ತಾವದ ಬಗ್ಗೆ ಗಮನ ಸೆಳೆದಾಗ ‘ಹಣ ಸಂಗ್ರಹಕ್ಕೆ ಇಂತಹ ಕ್ರಮಗಳು ಅನಿವಾರ್ಯ’ ಎಂದರು.ಪಶ್ಚಿಮ ಬಂಗಾಳದ ಮುಂದಿನ ಮುಖ್ಯಮಂತ್ರಿ ಎಂದು ಅವರನ್ನು ಬಿಂಬಿಸಲಾಗುತ್ತಿರುವ ಹಿನ್ನೆಲೆಯಲ್ಲಿ ‘ಇದು ನಿಮ್ಮ ಕಡೆಯ ಬಜೆಟ್ಟೇ’ ಎಂದು ಸುದ್ದಿಗಾರರು ಕೇಳಿದಾಗ ‘ನಾನೇನೂ ರಾಜಕೀಯ ಜ್ಯೋತಿಷಿಯಲ್ಲ’ ಎಂದು ಅವರು ಉತ್ತರಿಸಿದರು.

‘ದೇಶದ ಪ್ರಗತಿಗೆ ಪೂರಕವಾಗಿರುವ, ಎಲ್ಲಾ ಪ್ರದೇಶಗಳಿಗೆ ಯೋಜನೆ-ಅನುದಾನಗಳನ್ನು ಸಮನಾಗಿ ಹಂಚಿರುವ ರೈಲ್ವೆ ಬಜೆಟ್ ನೀಡಿದ್ದೇನೆ’ ಎಂದು ಕೇಂದ್ರ ಸಚಿವೆ ಮಮತಾ ಬ್ಯಾನರ್ಜಿ ತಿಳಿಸಿದರು.ಪ್ರಸಕ್ತ ರೈಲ್ವೆ ಬಜೆಟ್ ‘ಪಶ್ಚಿಮ ಬಂಗಾಳ ಕೇಂದ್ರವಾಗಿರಿಸಿದೆ. ಮತಗಳಿಕೆಯ ಉದ್ದೇಶ ಹೊಂದಿದೆ’ ಎಂಬ ಪ್ರತಿಪಕ್ಷಗಳ ಟೀಕೆಯನ್ನು ತಳ್ಳಿಹಾಕಿದರು.

ಮಮತಾ ರೈಲ್ವೆಯನ್ನು ದಿವಾಳಿ ಮಾಡಲು ಹೊರಟಿದ್ದಾರೆ ಎಂದು ಸಿಪಿಎಂ ಮಾಡಿದ ಆರೋಪಕ್ಕೆ ತೀವ್ರವಾಗಿ ಪ್ರತಿಕ್ರಿಯಿಸಿದ ಅವರು, ಪಶ್ಚಿಮ ಬಂಗಾಳದಲ್ಲಿ ಸಿಪಿಎಂ ಸರ್ಕಾರವೇ ಬೊಕ್ಕಸವನ್ನು ದಿವಾಳಿ ಮಾಡಿದೆ. ಎರಡು ಲಕ್ಷ ಕೋಟಿ  ರೂಪಾಯಿ ಮೊತ್ತದ ಸಾಲ ಇದೆ. ಇತರರಿಗೆ ಹೇಳುವ ಮೊದಲು ಸಿಪಿಎಂ ತಾನೇ ತಿದ್ದಿಕೊಳ್ಳಲಿ ಎಂದರು.

‘ಪಶ್ಚಿಮ ಬಂಗಾಳ ಭಾರತದ ಹೊರಗಿನ ಪ್ರದೇಶ ಅಲ್ಲ. ಜಮ್ಮು-ಕಾಶ್ಮೀರ, ಮಣಿಪುರ, ಅಸ್ಸಾಂ ಎಲ್ಲ ರಾಜ್ಯಗಳ ಜನರಿಗೂ ಸೌಲಭ್ಯ ನೀಡಲಾಗಿದೆ. ಸಿಪಿಎಂ ಸಮಯಸಾಧಕ ಧೋರಣೆ ಹೊಂದಿದೆ. ಆ ಪಕ್ಷದ ನಾಯಕರು ಸ್ಪರ್ಧಿಸಿ ಗೆಲ್ಲಲಾಗದೆ ಅಸಹಾಯಕತೆಯಿಂದ ಇಂತಹ ಮಿಥ್ಯಾರೋಪ ಮಾಡುತ್ತಿದ್ದಾರೆ’ ಎಂದು ಮಮತಾ ಎದುರೇಟು ನೀಡಿದರು.

‘ಪ್ರಯಾಣ ದರ ಏರಿಸದೆ ಆದಾಯ ಹೇಗೆ ಹೆಚ್ಚಿಸುವಿರಿ’ ಎಂಬ ಪ್ರಶ್ನೆಗೆ, ‘ಪ್ರಯಾಣಿಕರನ್ನು ಹಿಂಡಿ ಇಲಾಖೆಹಣಗಳಿಸಬಹುದು. ಆದರೆ ನಮ್ಮ ನೌಕರರು ಶ್ರಮಪಟ್ಟು ಆಂತರಿಕವಾಗಿ ಆದಾಯ ಹೆಚ್ಚಳ, ಮಿತವ್ಯಯ ಇತ್ಯಾದಿಗಳ ಮೂಲಕ ವರಮಾನ ಹೆಚ್ಚಿಸುವರು’ ಎಂದು ಮಮತಾ ಉತ್ತರಿಸಿದರು.

ಹೊಸ ‘ಸೂಪರ್ ಎ.ಸಿ. ದರ್ಜೆ ಬೋಗಿ’ ಬಗ್ಗೆ ಉತ್ತರಿಸಿದ ಮಮತಾ ಇದು ಪೂರ್ಣವಾಗಿ ವಾಣಿಜ್ಯಿಕ ಹಾಗೂ ಇಲಾಖೆಯ ಆದಾಯ ಹೆಚ್ಚಿಸುವ ಉದ್ದೇಶವನ್ನು ಹೊಂದಿದೆ ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.