ADVERTISEMENT

ಗಡ್‌ಚಿರೋಲಿ: ಮತ್ತೆ 15 ನಕ್ಸಲರ ಮೃತದೇಹ ಪತ್ತೆ

ಭಾನುವಾರ ನಡೆದಿದ್ದ ಕಾರ್ಯಾಚರಣೆ

ಪಿಟಿಐ
Published 24 ಏಪ್ರಿಲ್ 2018, 19:30 IST
Last Updated 24 ಏಪ್ರಿಲ್ 2018, 19:30 IST
ಮೃತದೇಹಗಳು ಮತ್ತು ನಕ್ಸಲರಿಂದ ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳು–ಪಿಟಿಐ ಚಿತ್ರ
ಮೃತದೇಹಗಳು ಮತ್ತು ನಕ್ಸಲರಿಂದ ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳು–ಪಿಟಿಐ ಚಿತ್ರ   

ಗಡ್‌ಚಿರೋಲಿ : ಮಹಾರಾಷ್ಟ್ರದ ಗಡ್‌ಚಿರೋಲಿ ಜಿಲ್ಲೆಯಲ್ಲಿ ಪೊಲೀಸರು ಭಾನುವಾರ ನಡೆಸಿದ ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿದ್ದ 15 ನಕ್ಸಲರ ಮೃತದೇಹ ಪತ್ತೆಯಾಗಿದೆ. ಇದರಿಂದ ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿದವರ ಸಂಖ್ಯೆ 31ಕ್ಕೆ ಏರಿಕೆಯಾಗಿದೆ.

‘ಗಡ್‌ಚಿರೋಲಿ ಪೊಲೀಸರ ಸಿ–60 ಕಮಾಂಡೊ ತಂಡ ಛತ್ತೀಸಗಡದ ಬಿಜಾಪುರ ಜಿಲ್ಲೆಯ ಗಡಿಪ್ರದೇಶದಲ್ಲಿರುವ ಕಾಸನಸುರ್‌ ಅರಣ್ಯ ಪ್ರದೇಶದಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾಗ, ನಕ್ಸಲರೊಂದಿಗೆ ಗುಂಡಿನ ಚಕಮಕಿ ನಡೆದಿತ್ತು.

‘ಈ ವೇಳೆ 9 ಪುರುಷರು ಹಾಗೂ 7 ಮಹಿಳೆಯರ ಮೃತದೇಹವು ಪತ್ತೆಯಾಗಿತ್ತು’ ಎಂದು ಪೊಲೀಸರು ತಿಳಿಸಿದ್ದರು. ಇವರೆಲ್ಲರ ತಲೆಗೆ ₹1.06 ಕೋಟಿ ಬಹುಮಾನ ಘೋಷಿಸಲಾಗಿತ್ತು.

ADVERTISEMENT

‘ಅತಿಯಾದ ಮಳೆ ಹಾಗೂ ಸಿಬ್ಬಂದಿ ಕೊರತೆಯಿಂದ ಶೋಧ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು. ಸೋಮವಾರ ನಡೆಸಿದ ಶೋಧದ ವೇಳೆ ಇಂದ್ರಾವತಿ ನದಿಯಲ್ಲಿ ಮತ್ತೆ 15 ನಕ್ಸಲರ ದೇಹಗಳು ಪತ್ತೆಯಾಗಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಇನ್ನಷ್ಟು ನಕ್ಸಲರ ಮೃತದೇಹ, ಶಸ್ತ್ರಾಸ್ತ್ರಗಳು ಸಿಗುವ ಸಾಧ್ಯತೆಯಿದೆ’ ಎಂದಿದ್ದಾರೆ.

6 ನಕ್ಸಲರು ಬಲಿ: ‘ರಾಜಾರಾಮ್‌ ಖಾಂಡ್ಲಾದಲ್ಲಿ ಕಪೆವಾಂಚಾ ಪ್ರದೇಶದಲ್ಲಿ ಸೋಮವಾರ ನಡೆದ ಮತ್ತೊಂದು ಎನ್‌ಕೌಂಟರ್‌ನಲ್ಲಿ ಆರು ನಕ್ಸಲರು ಸಾವನ್ನಪ್ಪಿದ್ದಾರೆ. ಇದರಲ್ಲಿ ಇಬ್ಬರು ಪುರುಷರು ಹಾಗೂ ನಾಲ್ವರು ಮಹಿಳೆಯರು ಸೇರಿದ್ದಾರೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಗುಪ್ತಚರ ಇಲಾಖೆ ನೀಡಿದ ನಿಖರ ಹಾಗೂ ನಿರ್ದಿಷ್ಟ ಮಾಹಿತಿಯಿಂದ ಅತ್ಯಂತ ದೊಡ್ಡ ಮಟ್ಟದ ಕಾರ್ಯಾಚರಣೆ ಯಶಸ್ವಿಯಾಗಿದೆ’ ಎಂದು ಮಹಾರಾಷ್ಟ್ರ ಪೊಲೀಸ್‌ ಮಹಾನಿರ್ದೇಶಕ ಸತೀಶ್‌ ಮಾಥುರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.