ADVERTISEMENT

ಗಣಿಗಾರಿಕೆಗೆ ಅನುಮತಿ : ಮೇಲ್ಮನವಿ ವಿಚಾರಣೆಗೆ ಅಂಗೀಕಾರ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2012, 19:30 IST
Last Updated 5 ಅಕ್ಟೋಬರ್ 2012, 19:30 IST

ನವದೆಹಲಿ: ಬಳ್ಳಾರಿ ಜಿಲ್ಲೆಯ ಕುಮಾರಸ್ವಾಮಿ ವಲಯದಲ್ಲಿ ಗಣಿಗಾರಿಕೆ ಅನುಮತಿಗಾಗಿ ಕಾದಿರುವ ಕಂಪೆನಿಗಳ ಅರ್ಜಿಗಳನ್ನು ನಾಲ್ಕು ವಾರಗಳಲ್ಲಿ ಪರಿಗಣಿಸುವಂತೆ ಕರ್ನಾಟಕ ಸರ್ಕಾರಕ್ಕೆ ಆದೇಶ ಕೊಡುವಾಗ ತನ್ನ ಅಭಿಪ್ರಾಯ ಕೇಳಲಿಲ್ಲ ಎಂದು ಪ್ರತಿಪಾದಿಸಿ ಕೇಂದ್ರ ಸರ್ಕಾರ ಸಲ್ಲಿಸಿರುವ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ಅಂಗೀಕರಿಸಿದೆ.

ನ್ಯಾ. ಪಿ. ಸದಾಶಿವಂ ಹಾಗೂ ಎಚ್.ಎಲ್ ದತ್ತು ಅವರನ್ನೊಳಗೊಂಡ ನ್ಯಾಯಪೀಠದ ಮುಂದೆ ಅಟಾರ್ನಿ ಜನರಲ್ ಜಿ.ಇ ವಹನ್ವತಿ ಕೇಂದ್ರ ಸರ್ಕಾರದ ನಿಲುವನ್ನು ಕೇಳದೆ ಆದೇಶ ಹೊರಡಿಸಲಾಗಿದೆ ಎಂದು ವಾದಿಸಿದರು. ಈ ಹಿನ್ನೆಲೆಯಲ್ಲಿ ನ್ಯಾಯಪೀಠ ಕೇಂದ್ರ ಸರ್ಕಾರದ ನಿಲುವೇನೆಂದು ತಿಳಿಯಬಯಸಿತು.

ಕೇಂದ್ರ ಸರ್ಕಾರದ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಳ್ಳಬೇಕೇ ಎಂದು ನಿರ್ಧರಿಸುವ ಸಂದರ್ಭದಲ್ಲಿ, ನ್ಯಾಯಪೀಠ ಕೇಂದ್ರಕ್ಕೆ ತನ್ನ ನಿಲುವು ಮಂಡಿಸಲು ಅವಕಾಶ ನೀಡಿಲ್ಲ. ಈ ಬಗ್ಗೆ ನ್ಯಾಯಾಲಯದ ರಿಜಿಸ್ಟ್ರಿ ಲೋಪವೆಸಗಿದೆ. ಯಾವುದೇ ಪ್ರಕರಣದಲ್ಲಿ ಸಂಬಂಧಪಟ್ಟವರು ತಮ್ಮ ನಿಲುವು ಮಂಡಿಸಲು ಅವಕಾಶ ಇರಬೇಕು. ಇದು ಸಹಜ ನ್ಯಾಯದ ನಿಯಮ ಎಂದು ಅಭಿಪ್ರಾಯಪಟ್ಟಿತು.

ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಲಾಗಿತ್ತು ಎಂಬ ಗಣಿ ಕಂಪೆನಿಗಳ ವಕೀಲರ ವಾದವನ್ನು ನ್ಯಾಯಾಲಯ ತಳ್ಳಿಹಾಕಿತು. ಈ ಸಂಬಂಧ ನ್ಯಾಯಾಲಯ ವರದಿ ಕೇಳಿತ್ತು. ಸೆ. 26ರಂದು ರಿಜಿಸ್ಟ್ರಾರ್ (ಜುಡಿಷಿಯಲ್-1) ಅವರಿಂದ ಬಂದಿರುವ ವರದಿ ಈ ಪ್ರಕರಣದಲ್ಲಿ  ಪ್ರತಿವಾದಿಯಾಗಿರುವ ಗಣಿ ಸಚಿವಾಲಯಕ್ಕೆ ನೋಟಿಸ್ ಜಾರಿ ಮಾಡುವ ಬದಲು ಕಲ್ಲಿದ್ದಲು ಮತ್ತು ಗಣಿ ಸಚಿವಾಲಯಕ್ಕೆ ನೋಟಿಸ್ ಜಾರಿ ಮಾಡಿದೆ. ಇದು ಅಸ್ತಿತ್ವದಲ್ಲೇ ಇಲ್ಲ. ರಿಜಿಸ್ಟ್ರಾರ್ ವರದಿ ಹಾಗೂ ಅಟಾರ್ನಿ ಜನರಲ್ ವಾದದಿಂದ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಆಗಿಲ್ಲ ಎಂದು ಮನವರಿಕೆ ಆಗಿದೆ ಎಂದು ನ್ಯಾಯಪೀಠ ಹೇಳಿತು.ಜೆಎಸ್‌ಡಬ್ಲ್ಯು ಸ್ಟೀಲ್ಸ್ ಲಿ., ಕಲ್ಯಾಣಿ ಸ್ಟೀಲ್ಸ್ ಲಿ., ಕಲ್ಯಾಣಿ ಸ್ಟೀಲ್ ಮಿಲ್ಸ್ ಲಿ.,  ಕರ್ನಾಟಕ ಸಲ್ಲಿಸಿರುವ ಮೇಲ್ಮನವಿಗಳನ್ನು ಕೇಂದ್ರದ ವಾದ ಆಲಿಸಿದ ಬಳಿಕ ಕೈಗೆತ್ತಿಕೊಳ್ಳಲಾಗುವುದು ಎಂದು ನ್ಯಾಯಪೀಠ ತಿಳಿಸಿತು. ಸಂಡೂರ್ ಮ್ಯಾಂಗನೀಸ್ ಹಾಗೂ ಎಂಎಸ್‌ಪಿಎಲ್ ಮೇಲ್ಮನವಿಯ ಯುಕ್ತತೆಯನ್ನು ಪ್ರಶ್ನೆ ಮಾಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.