ADVERTISEMENT

ಗಣಿಗಾರಿಕೆಗೆ ಭೂಮಿ ಮೀಸಲಿಡಲು ಕೇಂದ್ರದ ಅನುಮತಿ ಅಗತ್ಯ: ‘ಸು‍ಪ್ರೀಂ’

​ಪ್ರಜಾವಾಣಿ ವಾರ್ತೆ
Published 12 ಮೇ 2018, 19:30 IST
Last Updated 12 ಮೇ 2018, 19:30 IST
ಸಾಂದರ್ಭಿಕ ಚಿತ್ರ.
ಸಾಂದರ್ಭಿಕ ಚಿತ್ರ.   

ನವದೆಹಲಿ: ಕೇಂದ್ರದ ಅನುಮತಿ ಇಲ್ಲದೆ, ರಾಜ್ಯ ಸರ್ಕಾರವು ಗಣಿಗಾರಿಕೆಗೆ ಭೂಮಿ ಮೀಸಲಿಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ತಿಳಿಸಿದೆ.

‘ರಾಜ್ಯ ಸರ್ಕಾರವು ಭೂಮಿ ಮತ್ತು ಗಣಿಗಳ ಮಾಲೀಕತ್ವ ಹೊಂದಿರುತ್ತದೆ. ಅದು ಗಣಿಗಾರಿಕೆ ಪರವಾನಗಿ ಅಥವಾ ಸರ್ಕಾರಿ ಕಂಪನಿಗಳ ಗಣಿಗಾರಿಕೆ ಗುತ್ತಿಗೆಯಡಿ ಇರದ ಭೂಮಿಯ ಕುರಿತು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಬಹುದು. ಆದರೆ ಇದಕ್ಕೆ ಕೇಂದ್ರದ ಒಪ್ಪಿಗೆ ಅಗತ್ಯ’ ಎಂದು ನ್ಯಾಯಮೂರ್ತಿಗಳಾದ ಮದನ್ ಬಿ. ಲೋಕೂರ್ ಮತ್ತು ದೀಪಕ್ ಗುಪ್ತಾ ಅವರಿದ್ದ ಪೀಠ ತಿಳಿಸಿದೆ.

‘ಕೇಂದ್ರ ಸರ್ಕಾರವು ಕೇವಲ ರಾಷ್ಟ್ರೀಯ ಭದ್ರತೆ ಅಥವಾ ಸಾರ್ವಜನಿಕ ಹಿತಾಸಕ್ತಿ ಮಾತ್ರ ಪರಿಗಣಿಸದೆ, ಆರ್ಥಿಕ ಅಂಶಗಳು, ಸರ್ಕಾರದ ನೀತಿ ಮತ್ತು ಇನ್ನಿತರ ಎಲ್ಲ ಅಂಶಗಳನ್ನು ಪರಿಗಣಿಸಿ, ಸಂಬಂಧಿಸಿದ ಭೂಮಿಯನ್ನು ರಾಜ್ಯ ಸರ್ಕಾರದ ಬಳಕೆಗೆ ಮಾತ್ರ ಮೀಸಲಿಡುವ ಕುರಿತು ಒಪ್ಪಿಗೆ ನೀಡುವ ಬಗ್ಗೆ ನಿರ್ಧರಿಸಬೇಕು’ ಎಂದು ಅದು ಸ್ಪಷ್ಟಪಡಿಸಿದೆ.

ADVERTISEMENT

1957ರ ಗಣಿಗಳು ಮತ್ತು ಖನಿಜಗಳು (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆಯಡಿ ಈ ಸ್ಪಷ್ಟನೆ ನೀಡಿದೆ. ಮೆಸರ್ಸ್‌ ಹಟ್ಟಿ ಗೋಲ್ಡ್‌ ಮೈನ್ಸ್‌ ಕಂಪನಿ ಲಿಮಿಟೆಡ್‌ ಸಲ್ಲಿಸಿದ್ದ ರಿಟ್‌ ಅರ್ಜಿ ವಿಚಾರಣೆಯನ್ನು 2012ರ ಏಪ್ರಿಲ್ 3ರಂದು ನಡೆಸಿದ್ದ ಕರ್ನಾಟಕ ಹೈಕೋರ್ಟ್, ಗಣಿಗಾರಿಕೆಗೆ ಅನುಮತಿ ನೀಡಿತ್ತು. ಆದರೆ, ಸುಪ್ರೀಂ ಕೋರ್ಟ್‌ ಇದನ್ನು ರದ್ದುಗೊಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.