ಪಣಜಿ (ಪಿಟಿಐ): ಗೋವಾ ಸರ್ಕಾರವು ಅಕ್ರಮ ಗಣಿ ವ್ಯವಹಾರಕ್ಕೆ ತಡೆ ಹಾಕುವ ಸಲುವಾಗಿ ರಾಜ್ಯದ ಎಲ್ಲ 90 ಗಣಿ ಗುತ್ತಿಗೆ ಪ್ರದೇಶಗಳನ್ನು ಮೂರು ಗಂಪುಗಳಾಗಿ ವರ್ಗೀಕರಿಸಲು ತೀರ್ಮಾನಿಸಿದೆ.
ಇದಕ್ಕಾಗಿ ರಾಜ್ಯದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಗಣಿ ಗುತ್ತಿಗೆ ಪ್ರದೇಶಗಳಿಗೆ ಖುದ್ದು ಭೇಟಿ ನೀಡಿ, ದಾಖಲೆ ಹಾಗೂ ಪರವಾನಗಿಗಳನ್ನು ಪರಿಶೀಲಿಸಲಿದ್ದಾರೆ.
ಸಂಬಂಧಿಸಿದ ಎಲ್ಲ ಅನುಮತಿಗಳನ್ನು ಹೊಂದಿದ ಗಣಿಗಳನ್ನು `ಹಸಿರು~ ವಿಭಾಗದಡಿ ಪಟ್ಟಿ ಮಾಡಲಾಗುತ್ತದೆ. ಅನುಮತಿಗೆ ಅರ್ಜಿ ಸಲ್ಲಿಸಿ ಪರವಾನಗಿಗೆ ಕಾಯುತ್ತಿರುವ ಕಂಪೆನಿಗಳನ್ನು `ಕಂದು~ ವಿಭಾಗದಡಿ ಹಾಗೂ ಯಾವೊಂದೂ ಪರವಾನಗಿ ಹೊಂದಿಲ್ಲದ ಕಂಪೆನಿಗಳನ್ನು `ಕೆಂಪು~ ವಿಭಾಗದಡಿ ಗುರುತಿಸಲಾಗುತ್ತದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿರ್ದೇಶಕ ಪ್ರಸನ್ನ ಆಚಾರ್ಯ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಉಪ ನಿರ್ದೇಶಕರ ದರ್ಜೆಯ ಅಧಿಕಾರಿಗಳ ನೇತೃತ್ವದ ಎರಡು ಪ್ರತ್ಯೇಕ ತಂಡಗಳು ಭೇಟಿ ನೀಡಿ ದಾಖಲೆಗಳನ್ನು ಪರಿಶೀಲನೆ ನಡೆಸಲಿವೆ. ಕೆಂಪು ಮತ್ತು ಕಂದು ವಿಭಾಗದಡಿ ಗುರುತಾದ ಗಣಿಗಳನ್ನು ಅಕ್ರಮವೆಂದು ಪರಿಗಣಿಸಲಾಗುತ್ತದೆ. ಹಸಿರು ಪಟ್ಟಿಯಡಿ ಗುರುತಾದ ಗಣಿ ಉದ್ದಿಮೆಗಳಿಗೆ ಗುತ್ತಿಗೆ ನಡೆಸುವ ಜತೆಗೆ ಅದಿರು ರಫ್ತು ಮಾಡಲು ಅವಕಾಶ ಕಲ್ಪಿಸಲಾಗುತ್ತದೆ.
ಈಗ ಹಲವು ಗಣಿ ಉದ್ದಿಮೆಗಳು ಅದಿರು ತೆಗೆಯುವುದನ್ನು ಸ್ಥಗಿತಗೊಳಿಸಿವೆ. ಆದರೆ ಈ ಹಿಂದೆ ತೆಗೆದಿದ್ದ ರಾಶಿಯಲ್ಲಿ ಅಳಿದುಳಿದಿರುವ ಅದಿರನ್ನು ಅವು ಸಂಗ್ರಹಿಸುತ್ತಿವೆ ಎಂದು ಆಚಾರ್ಯ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.