ADVERTISEMENT

ಗಣಿ ಲೂಟಿಗೆ ವಿಶ್ವನಾಥನ್ ಕೃಪೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2013, 19:59 IST
Last Updated 18 ಸೆಪ್ಟೆಂಬರ್ 2013, 19:59 IST

ಬೆಂಗಳೂರು: ನಿವೃತ್ತ ಐಎಎಸ್‌ ಅಧಿಕಾರಿ ಎನ್‌.ವಿಶ್ವನಾಥನ್‌ ಅವರ ಕೃಪಾಕಟಾಕ್ಷದಿಂದಾ ಗಿಯೇ ಡೆಕ್ಕನ್‌ ಮೈನಿಂಗ್‌ ಸಿಂಡಿಕೇಟ್‌ (ಡಿಎಂಎಸ್‌) ಕಂಪೆನಿ ಸಂಡೂರು ತಾಲ್ಲೂಕಿನ ಕುಮಾರಸ್ವಾಮಿ ಮತ್ತು ಸುಬ್ಬರಾಯನಹಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿನ ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮದ (ಎನ್‌ಎಂಡಿಸಿ) ಗುತ್ತಿಗೆ ಪ್ರದೇಶದಲ್ಲಿ ರೂ.1,232 ಕೋಟಿ ಮೌಲ್ಯದ ಅದಿರು ಲೂಟಿ ಮಾಡಿತ್ತು ಎಂಬುದು ಸಿಬಿಐ ತನಿಖೆಯಲ್ಲಿ ಬಯಲಾಗಿದೆ.

ಡಿಎಂಎಸ್‌ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪಪಟ್ಟಿ ಇದನ್ನು ಸಾರಿ ಹೇಳುತ್ತದೆ. ಗುತ್ತಿಗೆ ಅವಧಿ ಅಂತ್ಯಗೊಂಡಿದ್ದ ಗಣಿ ಕಂಪೆನಿಯೊಂದು ಅಕ್ರಮದಲ್ಲಿ ಭಾಗಿಯಾಗಿರುವುದು ತಿಳಿದ ನಂತರವೂ ಈ ಅಧಿಕಾರಿ ಹೇಗೆ ಬೆನ್ನಿಗೆ ನಿಂತರು? ಡಿಎಂಎಸ್‌ ಅನುಕೂಲಕ್ಕಾಗಿ ಕೇಂದ್ರ ಸರ್ಕಾರವನ್ನೇ ಹೇಗೆ ವಂಚಿಸಿದ್ದರು? ಎಂಬ ಹಲವು ಸಂಗತಿಗಳು ಆರೋಪಪಟ್ಟಿಯಲ್ಲಿ ದಾಖಲಾಗಿವೆ.

1962ರಲ್ಲಿ ಸಂಡೂರು ತಾಲ್ಲೂಕಿನಲ್ಲಿ ಮೋತಿಲಾಲ್‌ ಜೆ.ಬೋಲ್‌ ಎಂಬುವರ ಹೆಸರಿಗೆ 50 ಎಕರೆ ವಿಸ್ತೀರ್ಣದ ಗಣಿ ಗುತ್ತಿಗೆ ಮಂಜೂರಾಗಿತ್ತು. 1966ರಿಂದ ಅನ್ವಯ ಆಗುವಂತೆ 20 ವರ್ಷಗಳ ಅವಧಿಗೆ ಈ ಗುತ್ತಿಗೆಯನ್ನು ನೀಡಲಾಯಿತು. 1972ರಲ್ಲಿ ಮೆ.ಮೋತಿಲಾಲ್‌ ಜೆ.ಬೋಲ್‌ ಎಂಬ ಹೆಸರಿಗೆ ಗುತ್ತಿಗೆ ವರ್ಗಾವಣೆ ಆಗಿತ್ತು. 1976ರವರೆಗೂ ಅಲ್ಲಿ ಹೆಚ್ಚೇನೂ ಗಣಿಗಾರಿಕೆ ನಡೆದಿರಲಿಲ್ಲ. ಈ ಗುತ್ತಿಗೆಗೆ ಹೊಂದಿಕೊಂಡಂತೆ 1972ರಲ್ಲಿ ಎನ್‌ಎಂಡಿಸಿಗೆ 1,600 ಎಕರೆ ವಿಸ್ತೀರ್ಣದ ಗಣಿ ಗುತ್ತಿಗೆ ನೀಡಲಾಗಿತ್ತು.

ಮೋತಿಲಾಲ್‌ ಜೆ.ಬೋಲ್‌ ಹೆಸರಿನಲ್ಲಿದ್ದ ಗುತ್ತಿಗೆ 1980ರಲ್ಲಿ ಡಿಎಂಎಸ್‌ ಹೆಸರಿಗೆ ವರ್ಗಾವಣೆ ಆಗಿತ್ತು. 1985ರಲ್ಲಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದ ಡಿಎಂಎಸ್‌, 20 ವರ್ಷಗಳ ಅವಧಿಗೆ ಗುತ್ತಿಗೆ ನವೀಕರಣಕ್ಕೆ ಮನವಿ ಮಾಡಿತ್ತು. ಆದರೆ, 1986ರಲ್ಲಿ ಆದೇಶ ಹೊರಡಿಸಿದ್ದ ಸರ್ಕಾರ, ಹತ್ತು ವರ್ಷಗಳ ಅವಧಿಗೆ ಮಾತ್ರ ಗುತ್ತಿಗೆ ನವೀಕರಿಸಿತ್ತು. ಎನ್‌ಎಂಡಿಸಿ ಮತ್ತು ಡಿಎಂಎಸ್‌ ಗುತ್ತಿಗೆ ಪ್ರದೇಶಗಳ ನಡುವೆ ಎರಡು ‘ಚೈನ್‌’ನಷ್ಟು (ಸರ್ವೇ ಸಾಧನ) ಅಂತರ ಇತ್ತು.

1991ರಲ್ಲಿ ಡೆಕ್ಕನ್‌ ಮೈನಿಂಗ್‌ ಸಿಂಡಿಕೇಟ್‌ ಪ್ರೈವೇಟ್‌ ಲಿಮಿಟೆಡ್‌ (ಡಿಎಂಎಸ್‌ಪಿಎಲ್‌) ಎಂಬ ಪಾಲುದಾರಿಕೆ ಕಂಪೆನಿಯೊಂದು ಹುಟ್ಟಿಕೊಂಡಿತು. ಎರಡು ಕಡೆಗಳಲ್ಲಿ ಎನ್‌ಎಂಡಿಸಿ ಗುತ್ತಿಗೆ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಸಿದ ಡಿಎಂಎಸ್‌ಪಿಎಲ್‌, 3.05 ಲಕ್ಷ ಟನ್‌ ಅದಿರು ಸಾಗಣೆ ಮಾಡಿತ್ತು. ಈ ಬಗ್ಗೆ ಎನ್‌ಎಂಡಿಸಿ ಅಧಿಕಾರಿಗಳು, ಸ್ಥಳೀಯ ಪೊಲೀಸರು, ಗಣಿ ಇಲಾಖೆ ಮತ್ತು ತಹಶೀಲ್ದಾರ್‌ಗೆ ದೂರು ಸಲ್ಲಿಸಿದ್ದರು. 1996ರಲ್ಲಿ ಪ್ರಕರಣ ಹೈಕೋರ್ಟ್‌ ಮೆಟ್ಟಿಲೇರಿತ್ತು. ಗುತ್ತಿಗೆ ಪ್ರದೇಶದ ಹೊರಗೆ ಗಣಿಗಾರಿಕೆ ನಡೆಸದಂತೆ ಹೈಕೋರ್ಟ್‌ ಡಿಎಂಎಸ್‌ಗೆ ನಿರ್ಬಂಧ ವಿಧಿಸಿತ್ತು.

1995ರಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಅರ್ಜಿ ಸಲ್ಲಿಸಿದ ಡಿಎಂಎಸ್‌ಪಿಎಲ್‌ ಕಂಪೆನಿ ಡಿಎಂಎಸ್‌ ಹೆಸರಿನಲ್ಲಿದ್ದ ಗುತ್ತಿಗೆ ನವೀಕರಣಕ್ಕೆ ಮನವಿ ಮಾಡಿತ್ತು. 1997ರ ಜೂನ್‌ 13ರಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಆಗಿನ ನಿರ್ದೇಶಕ ಪಿ.ರವಿಕುಮಾರ್‌, ‘ಡಿಎಂಎಸ್‌ಪಿಎಲ್‌ ಅರ್ಜಿಯನ್ನು ತಿರಸ್ಕರಿಸಬಹುದು ಅಥವಾ ದಂಡ ವಿಧಿಸಿ ಅರ್ಜಿ ಮಾನ್ಯ ಮಾಡಬಹುದು’ ಎಂದು ಶಿಫಾರಸು ಮಾಡಿದ್ದರು.

ಆಗ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿದ್ದ ವಿಶ್ವನಾಥನ್‌ ಅವರು ಇಲಾಖೆಯ ಕಾರ್ಯದರ್ಶಿಯ (ಶಮೀಂ ಬಾನು) ಗಮನಕ್ಕೆ ತಾರದೇ ನೇರವಾಗಿ ನಿರ್ದೇಶಕರಿಂದ ಕಡತ ತರಿಸಿಕೊಂಡಿದ್ದರು. ಡಿಎಂಎಸ್‌ಪಿಎಲ್‌ ಅಕ್ರಮ ಗಣಿಗಾರಿಕೆ ನಡೆಸಿದೆ ಎಂಬ ಆರೋಪದ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ ವರದಿ ಸಮೇತ ಮತ್ತೆ ಪ್ರಸ್ತಾವ ಮಂಡಿಸುವಂತೆ ಸೂಚಿಸಿದ್ದರು ಎಂದು ಸಿಬಿಐ ಆರೋಪಪಟ್ಟಿಯಲ್ಲಿ ತಿಳಿಸಿದೆ.

ಶಮೀಂ ಬಾನು ಮತ್ತು ಪಿ.ರವಿಕುಮಾರ್‌ ಅವರನ್ನು ಒಳಗೊಂಡ ತಂಡವನ್ನೇ ಸ್ಥಳ ಪರಿಶೀಲನೆಗೆ ವಿಶ್ವನಾಥನ್‌ ನಿಯೋಜಿಸಿದ್ದರು. 1997ರ ನವೆಂಬರ್‌ 15ರಂದು ಸ್ಥಳ ಪರಿಶೀಲನೆ ನಡೆಸಿದ ತಂಡ, ಎನ್‌ಎಂಡಿಸಿ ಗುತ್ತಿಗೆ ಪ್ರದೇಶದಲ್ಲಿ ಡಿಎಂಎಸ್‌ಪಿಎಲ್‌ ಅಕ್ರಮ ಗಣಿಗಾರಿಕೆ ನಡೆಸಿರುವುದನ್ನು ಖಚಿತಪಡಿಸಿತ್ತು. ಅಕ್ರಮವಾಗಿ ಅದಿರು ತೆಗೆದ ಪ್ರದೇಶವನ್ನೂ ಸೇರಿಸಿ ಗುತ್ತಿಗೆ ನಕ್ಷೆಯಲ್ಲಿ ಪರಿಷ್ಕರಣೆ ಮಾಡುವ ನಿರ್ಧಾರವನ್ನು ಕೈಗೊಂಡಿತ್ತು.

ನಂತರ ಇಲಾಖೆಯ ಎಂಜಿನಿಯರುಗಳು ಸ್ಥಳಕ್ಕೆ ತೆರಳಿ ಪರಿಷ್ಕೃತ ನಕ್ಷೆ ಸಿದ್ಧಪಡಿಸಿದ್ದರು. ಮೊದಲು ಮಂಜೂರಾಗಿದ್ದ 47 ಎಕರೆ ಸೇರಿದಂತೆ ಹೊಸ ನಕ್ಷೆ ಸಿದ್ಧಪಡಿಸಲಾಗಿತ್ತು. ಪರಿಷ್ಕೃತ ನಕ್ಷೆಯ ಪ್ರಕಾರ ಗುತ್ತಿಗೆ ಪ್ರದೇಶದಲ್ಲಿ 10.30 ಎಕರೆಯಷ್ಟು ಬದಲಾವಣೆ ಆಗಿತ್ತು.

ನಂತರ ವಿಶ್ವನಾಥನ್‌ ಅವರಿಗೆ ಪತ್ರ ಬರೆದ ರವಿಕುಮಾರ್‌ ಮೂರು ಸಲಹೆಗಳನ್ನು ಮುಂದಿಟ್ಟಿದ್ದರು. ಅಕ್ರಮ ಗಣಿಗಾರಿಕೆ ನಡೆಸಿರುವುದು ಖಚಿತವಾಗಿರುವ ಕಾರಣ ಆಧರಿಸಿ ಅರ್ಜಿಯನ್ನು ತಿರಸ್ಕರಿಸಬಹುದು ಅಥವಾ ದಂಡ ವಿಧಿಸಿ, ಮೂಲ ನಕ್ಷೆಯ ಪ್ರಕಾರವೇ ಗುತ್ತಿಗೆ ನವೀಕರಿಸಬಹುದು ಅಥವಾ ಪರಿಷ್ಕೃತ ನಕ್ಷೆ ಆಧಾರದಲ್ಲಿ ಗುತ್ತಿಗೆ ನವೀಕರಿಸಬಹುದು ಎಂದು ಸಲಹೆ ಮಾಡಿದ್ದರು.

ಹಿಂದೆ ಗಣಿಗಾರಿಕೆ ನಡೆಸಿದ್ದ 47 ಎಕರೆಗೆ ಸೀಮಿತವಾಗಿ ಗುತ್ತಿಗೆ ನವೀಕರಿಸುವಂತೆ ಗಣಿ ಇಲಾಖೆ ನಿರ್ದೇಶಕರು ಕೊನೆಯಲ್ಲಿ ಶಿಫಾರಸು ಮಾಡಿದ್ದರು. ಮೂಲ ಮತ್ತು ಪರಿಷ್ಕೃತ ನಕ್ಷೆಗಳಲ್ಲಿ ಯಾವುದನ್ನು ಪರಿಗಣಿಸಬೇಕು ಎಂದು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಸ್ಪಷ್ಟನೆ ಕೋರಿತ್ತು. ಪರಿಷ್ಕೃತ ನಕ್ಷೆಯನ್ನು ಪರಿಗಣಿಸುವಂತೆ ರವಿಕುಮಾರ್‌ ಉತ್ತರಿಸಿದ್ದರು.

‘ಈ ಕಡತ ಅನುಮೋದನೆಗಾಗಿ ವಿಶ್ವನಾಥನ್‌ ಮತ್ತು ಶಮೀಂ ಬಾನು ಅವರಿಗೆ ಸಲ್ಲಿಕೆಯಾಗಿತ್ತು. ಇಬ್ಬರೂ ಪ್ರಸ್ತಾವಕ್ಕೆ ಅನುಮೋದನೆ ನೀಡಿದ್ದರು. ಡಿಎಂಎಸ್‌ಪಿಎಲ್‌ ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿರುವ ಮತ್ತು ನಕ್ಷೆಯಲ್ಲಿ ಬದಲಾವಣೆ ಮಾಡಿರುವ ಕುರಿತು ಈ ವೇಳೆ ಮೌನ ವಹಿಸಿದ್ದರು. ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಬರೆದ ಪತ್ರದಲ್ಲೂ ಯಾವುದೇ ಮಾಹಿತಿ ನೀಡದೇ ವಂಚಿಸಿದ್ದರು’ ಎಂದು ಸಿಬಿಐ ಆರೋಪಪಟ್ಟಿಯಲ್ಲಿ ಹೇಳಿದೆ.

ಕೇಂದ್ರ ಸರ್ಕಾರಕ್ಕೆ ಕಳುಹಿಸಿದ ಶಿಫಾರಸು ಪತ್ರವನ್ನು ಮೃತ್ಯುಂಜಯಪ್ಪ ಎಂಬ ಅಧಿಕಾರಿ ಸಿದ್ಧಪಡಿಸಿದ್ದರು. ವಿಶ್ವನಾಥನ್‌ ಸೂಚನೆ ಮೇರೆಗೆ ಸತ್ಯ ಸಂಗತಿಗಳನ್ನು ಪತ್ರದಲ್ಲಿ ದಾಖಲು ಮಾಡಿರಲಿಲ್ಲ ಎಂಬುದನ್ನು ಅವರು ಒಪ್ಪಿಕೊಂಡಿದ್ದಾರೆ. ಪತ್ರ ಕಳುಹಿಸುವಾಗ ‘ನಾನು ನೋಡಿದ್ದೇನೆ’ ಎಂಬ ಒಕ್ಕಣೆಯೊಂದಿಗೆ ವಿಶ್ವನಾಥನ್‌ ಸಹಿ ಮಾಡಿದ್ದರು. ಎಲ್ಲವೂ ಅವರಿಗೆ ಗೊತ್ತಿತ್ತು. ಕೇಂದ್ರ ಸರ್ಕಾರವನ್ನು ವಂಚಿಸುವ ಸಂಚಿನಲ್ಲಿ ಅವರು ಭಾಗಿಯಾಗಿದ್ದರು ಎಂದು ಸಿಬಿಐ ಆಪಾದಿಸಿದೆ.

ನಕ್ಷೆ ಬದಲಿಸಿ ಗುತ್ತಿಗೆ ನವೀಕರಿಸುವ ಶಿಫಾರಸನ್ನು ಶಮೀಂ ಬಾನು ಅವರೇ ಆರಂಭದಲ್ಲಿ ಮಾಡಿದ್ದರು. ಅಂತಿಮವಾಗಿ ಈ ಕಡತ ಅವರ ಮೂಲಕ ರವಾನೆ ಆಗಿರಲಿಲ್ಲ. ವಿಶ್ವನಾಥನ್‌ ನೇರವಾಗಿ ಕಡತ ಕಳುಹಿಸಿದ್ದರು. ಕೆಲವೇ ದಿನಗಳಲ್ಲಿ ಪತ್ರವೊಂದನ್ನು ಬರೆದ ಶಮೀಂ ಬಾನು, ‘ಇದು ಗುತ್ತಿಗೆಯ ಎರಡನೇ ಅವಧಿಯ ನವೀಕರಣ. ಆದ್ದರಿಂದ ಕೇಂದ್ರದ ಅನುಮೋದನೆ ಅನಗತ್ಯ. ನೇರವಾಗಿ ರಾಜ್ಯ ಸರ್ಕಾರವೇ ಗುತ್ತಿಗೆ ನವೀಕರಣ ಮಾಡಬಹುದು’ ಎಂದು ಶಿಫಾರಸು ಮಾಡಿದ್ದರು. ಬಳಿಕ 1999ರ ಜನವರಿ 29ರಂದು ಪರಿಷ್ಕೃತ ನಕ್ಷೆ ಪ್ರಕಾರ ಗುತ್ತಿಗೆ ನವೀಕರಿಸಿ ಆದೇಶ ಹೊರಡಿಸಲಾಗಿತ್ತು ಎಂಬ ಉಲ್ಲೇಖವಿದೆ.

ಹೀಗೆ ವಿಶ್ವನಾಥನ್‌ ಅವರ ‘ಉಪಕಾರ’ದಿಂದ ದೊರೆತ ಗುತ್ತಿಗೆ ನವೀಕರಣ ಆದೇಶ ಬಳಸಿಕೊಂಡ ಡಿಎಂಎಸ್‌ಪಿಎಲ್‌ ಗಣಿ ಕಂಪೆನಿ, ಎನ್‌ಎಂಡಿಸಿ ಗಣಿ ಪ್ರದೇಶದಲ್ಲಿ 62.73 ಲಕ್ಷ ಟನ್‌ ಅದಿರು ಲೂಟಿ ಮಾಡಿದೆ. ಇದರಿಂದ ಎನ್‌ಎಂಡಿಸಿಗೆ ರೂ.1,232 ಕೋಟಿಯಷ್ಟು ನಷ್ಟವಾಗಿದೆ. ಹೆಜ್ಜೆ ಹೆಜ್ಜೆಗೂ ಅಕ್ರಮಕ್ಕೆ ನೆರವಾಗುವ ರೀತಿಯಲ್ಲಿ ವಿಶ್ವನಾಥನ್‌ ನಿರ್ಧಾರಗಳನ್ನು ಕೈಗೊಂಡಿದ್ದರು.
ಕೆಲವು ಸಂದರ್ಭಗಳಲ್ಲಿ ಶಮೀಂ ಬಾನು ಕೂಡ ಅದರಲ್ಲಿ ಭಾಗಿಯಾಗಿದ್ದರು ಎಂದು ಸಿಬಿಐ ಆರೋಪಪಟ್ಟಿಯಲ್ಲಿ ದೂರಿದೆ.

ಡಿಎಂಎಸ್‌ ಮಾಲೀಕ ರಾಜೇಂದ್ರ ಜೈನ್‌ ಮತ್ತು ಡಿಎಂಎಸ್‌ಪಿಎಲ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿತೇಶ್‌ ಜೈನ್‌ ನಡೆಸಿದ ಅಕ್ರಮಕ್ಕೆ, ಸಂಡೂರಿನ ಪೊಲೀಸ್‌ ಇನ್‌ಸ್ಪೆಕ್ಟರ್‌ ರಮಾಕಾಂತ್‌ ವೈ.ಹಲ್ಲೂರ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕರಾಗಿದ್ದ ಎಸ್‌.ಪಿ.ರಾಜು ಸಹಕಾರ ನೀಡಿದ್ದರು ಎಂಬ ಆರೋಪವೂ ಇದೆ.

ರೆಡ್ಡಿ ವಿರುದ್ಧ ತನಿಖೆ ಬಾಕಿ
ಈ ಪ್ರಕರಣದಲ್ಲಿ ಡಿಎಂಎಸ್‌ಪಿಎಲ್‌ ಪರ ನಿಂತಿದ್ದ ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ಮತ್ತು ಅವರ ಆಪ್ತ ಕೆ.ಮೆಹಫೂಜ್‌ ಅಲಿಖಾನ್‌ ಸರ್ಕಾರಿ ಅಧಿಕಾರಿಗಳನ್ನು ಬೆದರಿಸಿದ್ದರು ಎಂಬ ಆರೋಪವಿದೆ. ಈ ಕುರಿತು ತನಿಖೆ ಪ್ರಗತಿಯಲ್ಲಿದೆ ಎಂದು ಸಿಬಿಐ ಆರೋಪಪಟ್ಟಿಯಲ್ಲಿ ತಿಳಿಸಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT