ADVERTISEMENT

ಗಮನ ಸೆಳೆದ ಗಮಕ ಸೌರಭ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2011, 18:05 IST
Last Updated 6 ಮಾರ್ಚ್ 2011, 18:05 IST
ಗಮನ ಸೆಳೆದ ಗಮಕ ಸೌರಭ
ಗಮನ ಸೆಳೆದ ಗಮಕ ಸೌರಭ   

ರಾಮನಾಥಪುರ: ರುದ್ರಪಟ್ಟಣ ಸಂಗೀತೋತ್ಸವ ಸಮಿತಿ ಟ್ರಸ್ಟ್‌ನ ದಶಮಾನೋತ್ಸವ ಸಮಾರಂಭದ ಅಂಗವಾಗಿ ಭಾನುವಾರ ನಡೆದ ‘ಗಮಕ ಸೌರಭ’ ಕಾರ್ಯಕ್ರಮದಲ್ಲಿ ಪದ್ಮಶ್ರೀ ಡಾ.ವಿದ್ವಾನ್ ಮತ್ತೂರು ಕೃಷ್ಣಮೂರ್ತಿ ಪವಿತ್ರ ಮಹಾಭಾರತ ಗ್ರಂಥದಲ್ಲಿ ಶಿವ ಅರ್ಜುನನಿಗೆ ಪಾಶುಪತಾಸ್ತ್ರ ನೀಡುವ ಕಥಾ ಭಾಗವನ್ನು ಅರ್ಥಪೂರ್ಣವಾಗಿ ವಾಚಿಸಿದರು.

ಮತ್ತೂರು ಕೃಷ್ಣಮೂರ್ತಿ ಅವರ ವ್ಯಾಖ್ಯಾನಕ್ಕೆ ತಕ್ಕಂತೆ ಕುಮಾರವ್ಯಾಸ ಪ್ರಶಸ್ತಿ ವಿಜೇತ ವಿದ್ವಾನ್  ಹೊಸಹಳ್ಳಿ ಕೇಶವಮೂರ್ತಿ ಅವರು ಪ್ರತಿಯೊಂದು ಸಾಲುಗಳನ್ನು ಲಯ ಬದ್ಧವಾಗಿ ವಾಚಿಸಿ ಭಕ್ತಿರಸವನ್ನು  ಅಭಿವ್ಯಕ್ತಗೊಳಿಸಿದರು.

‘ಶಿವನು ಬೇಡನ ವೇಷ ಧರಿಸಿ ಬಂದು ಅರ್ಜುನನ್ನು ಪರೀಕ್ಷಿಸುವ ಸನ್ನಿವೇಶ ಹಾಗೂ ಅರ್ಜುನ ಕೆಲ ದಿನ  ಹಣ್ಣು-ಹಂಪಲು, ಮತ್ತೆ ಕೆಲವು ದಿನ ತರಗೆಲೆ ಇನ್ನು ಕೆಲವು ದಿನಗಳ ಕಾಲ ಒಂಟಿ ಕಾಲಿನಲ್ಲಿ ನಿಂತು  ಗಾಳಿಯನ್ನು ಆಹಾರವಾಗಿ ಸ್ವೀಕರಿಸಿ ಕಠಿಣ ತಪ್ಪಸ್ಸುಗೈದು ಶಿವನಿಂದ ಅಸ್ತ್ರಗಳನ್ನು ಪಡೆದುಕೊಳ್ಳುವ ದೃಶ್ಯಗಳನ್ನು ಹಾವ-ಭಾವ ಪ್ರದರ್ಶಿಸುವ ಮೂಲಕ ಕಣ್ಣಿಗೆ ಕಟ್ಟುವಂತೆ ವರ್ಣಿಸಿದರು.

ಇದಲ್ಲದೆ ಗೌರಿಯೂ ಅರ್ಜುನನಿಗೆ ಅಂಜನಾಶಸ್ತ್ರವನ್ನೂ, ಶಿವನ ಪುತ್ರರಾದ ಗುಹ ಮತ್ತು ಗಣಪತಿಯೂ ಅಸ್ತ್ರಗಳನ್ನು ನೀಡುವ ಪ್ರಸಂಗವನ್ನು ಮನಮುಟ್ಟುವಂತೆ ಬಣ್ಣಿಸಿದರು.

ಸಂಗೀತ ಗಾನ ಕಲಾಭೂಷಣ ಆರ್.ಕೆ. ಪದ್ಮನಾಭ ಅವರು ಡಾ.ವಿದ್ವಾನ್ ಮತ್ತೂರು ಕೃಷ್ಣಮೂರ್ತಿ  ಹಾಗೂ ವಿದ್ವಾನ್ ಹೊಸಹಳ್ಳಿ ಕೇಶವಮೂರ್ತಿ ಅವರನ್ನು ಶಾಲು ಹೊದಿಸಿ ಗೌರವಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.