ADVERTISEMENT

ಗರ್ಭಿಣಿ ವಿದ್ಯಾರ್ಥಿನಿ ಪರೀಕ್ಷೆಗೆ ನಿರಾಕರಣೆ

ಪಿಟಿಐ
Published 23 ಮೇ 2018, 19:22 IST
Last Updated 23 ಮೇ 2018, 19:22 IST
ಗರ್ಭಿಣಿ ವಿದ್ಯಾರ್ಥಿನಿ ಪರೀಕ್ಷೆಗೆ ನಿರಾಕರಣೆ
ಗರ್ಭಿಣಿ ವಿದ್ಯಾರ್ಥಿನಿ ಪರೀಕ್ಷೆಗೆ ನಿರಾಕರಣೆ   

ನವದೆಹಲಿ : ಹಾಜರಾತಿ ಕಡಿಮೆ ಇದ್ದ ಕಾರಣ ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸಿದ್ದ ದೆಹಲಿ ವಿಶ್ವವಿದ್ಯಾನಿಲಯದ ಕ್ರಮವನ್ನು ಪ್ರಶ್ನಿಸಿ ಕೋರ್ಟ್‌ ಮೆಟ್ಟಿಲೇರಿದ್ದ ಗರ್ಭಿಣಿ ವಿದ್ಯಾರ್ಥಿನಿಯ ಅರ್ಜಿಯ‌ನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿದೆ.

ಹಾಜರಾತಿ ಶೇ 70ಕ್ಕಿಂತ ಕಡಿಮೆಯಿರುವ ಕಾರಣ ಕಾಲೇಜು ಆಡಳಿತ ಎಲ್‌ಎಲ್‌ಬಿ 4ನೇ ಸೆಮಿಸ್ಟರ್ ವಿದ್ಯಾರ್ಥಿನಿ ಅಂಕಿತಾ ಮೀನಾ ಅವರಿಗೆ ಪರೀಕ್ಷೆ ನೀಡಲು ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿದ್ದ ಅಂಕಿತಾ ತಾನು ಗರ್ಭಿಣಿಯಾದ ಕಾರಣ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು ಎಂದು ಕೋರಿದ್ದರು.

ಈ ಪ್ರಕರಣವನ್ನು ನ್ಯಾಯಾಲಯದ ಮುಂದೆ ತಂದಿರುವುದಕ್ಕೆ ಪ್ರಶಂಸೆ ವ್ಯಕ್ತಪಡಿಸಿರುವ ನ್ಯಾಯಮೂರ್ತಿ ಎ.ಎಂ. ಖಾನ್ವಿಲ್ಕರ್ ಮತ್ತು ನವೀನ್ ಸಿನ್ಹಾ ಅವರಿದ್ದ ದ್ವಿಸದಸ್ಯ ಪೀಠ, ವಿಶ್ವವಿದ್ಯಾಲಯದ ಅಭಿಪ್ರಾಯಪಡೆಯದೆ ಯಾವುದೇ ಆದೇಶ ನೀಡಲು ಸಾಧ್ಯವಿಲ್ಲ ಎಂದು ಹೇಳಿತು.

ADVERTISEMENT

‘ಪರೀಕ್ಷೆಗೆ ಕೇವಲ ಒಂದು ಗಂಟೆ ಇರುವಾಗ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಅಷ್ಟು ಬೇಗ ಈ ವ್ಯವಸ್ಥೆ ಮಾಡಿಕೊಡಲು ಸಾಧ್ಯವಿಲ್ಲ’ ಎಂದು ವಿಶ್ವವಿದ್ಯಾಲಯ ವಿವರಿಸಿತು.

ಕಾಲೇಜು ಆಡಳಿತ ಮಂಡಳಿ ಹೇಳಿಕೆ ಪಡೆದು ‘ಗರ್ಭಿಣಿ ವಿದ್ಯಾರ್ಥಿನಿ ಮೊದಲೇ ಮೆಟರ್ನಿಟಿ ರಜೆಯನ್ನು ಬಳಸಿಕೊಳ್ಳಬಹುದಿತ್ತು. ಹಾಜರಾತಿ ಕಡಿಮೆ ಮಾಡಿಕೊಂಡಿರುವುದು ಅಶಿಸ್ತು’ ಎಂದು ಕೋರ್ಟ್‌ ಅಭಿಪ್ರಾಯಪಟ್ಟಿತು.

‘ಇದೊಂದು ಕ್ಲಿಷ್ಟಕರ ಪ್ರಕರಣ, ನಿಮ್ಮ ಭಾವನೆ ನಮಗೆ ಅರ್ಥವಾಗುತ್ತಿದೆ. ಆದರೆ, ನೀವು ಮೆಟರ್ನಿಟಿ ರಜೆಗೆ ಅರ್ಜಿ ಹಾಕದ ಕಾರಣ ನಿಯಮಾವಳಿಗಳು ನಿಮ್ಮ ಸಹಾಯಕ್ಕೆ ಬರುತ್ತಿಲ್ಲ’ ಎಂದೂ ಪೀಠ ಹೇಳಿತು.

ವಿದ್ಯಾರ್ಥಿ ಶೇ 49ರಷ್ಟು ಹಾಜರಾತಿ ಪಡೆದಿದ್ದಾರೆ. ಇಷ್ಟು ಹಾಜರಾತಿ ಇದ್ದ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲು ಈ ಹಿಂದೆ ನ್ಯಾಯಾಲಯ ಮಧ್ಯಂತರ ಪರಿಹಾರ ನೀಡಿದೆ ಎಂದು ವಿದ್ಯಾರ್ಥಿನಿ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.

ಆದರೂ, ‘ಬಾರ್ ಕೌನ್ಸಿಲ್ ಆಫ್ ಇಂಡಿಯಾದ ಕಾನೂನನ್ನು ಕಡೆಗಣಿಸಲು ಸಾಧ್ಯವಿಲ್ಲ’ ಎಂದು ಪೀಠ ಅಭಿಪ್ರಾಯಪಟ್ಟಿತು. ಇದಕ್ಕೂ ಮುನ್ನ ಹೈಕೋರ್ಟ್‌ ಏಕಸದಸ್ಯ ಪೀಠ ಕೂಡ ಈ ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯುವ ಅವಕಾಶ ನಿರಾಕರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.