ನವದೆಹಲಿ (ಪಿಟಿಐ): 2002ರ ಗುಜರಾತ್ ಗಲಭೆಗೆ ಸಂಬಂಧಿಸಿದಂತೆ ನರೇಂದ್ರ ಮೋದಿ ನಿರ್ದೋಷಿ ಎಂಬ ತೀರ್ಮಾನಕ್ಕೆ ಈಗಲೇ ಬರಲು ಸಾಧ್ಯವಿಲ್ಲ ಮತ್ತು ಮೋದಿ ಅವರು ಕಾನೂನು ಹೊಣೆಗಾರಿಕೆಯಿಂದ ನುಣಚಿಕೊಳ್ಳುವಂತೆಯೂ ಇಲ್ಲ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದರು.
ಮುಖ್ಯಮಂತ್ರಿ ಆಗಿದ್ದುಕೊಂಡು ಕೋಮು ಗಲಭೆ ನಿಯಂತ್ರಿಸಲು ವಿಫಲವಾಗಿದ್ದಕ್ಕೆ ಮೋದಿ ನೈತಿಕ ಹೊಣೆ ಹೊರಲೇಬೇಕು ಎಂದು ರಾಹುಲ್ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.
ಸುಪ್ರೀಂಕೋರ್ಟ್ ನೇಮಕ ಮಾಡಿದ್ದ ವಿಶೇಷ ತನಿಖಾ ದಳವು ಕೋಮು ಗಲಭೆಯಲ್ಲಿ ಮೋದಿ ಪಾತ್ರ ಏನೂ ಇರಲಿಲ್ಲ ಎಂದು ತಿಳಿಸಿರುವುದರಿಂದ ಅವರು ಕ್ಷಮೆ ಕೋರುವ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿ ವಾದಿಸುತ್ತಿರುವುದು ತಪ್ಪು ಎಂದು ರಾಹುಲ್ ಹೇಳಿದರು. ತಜ್ಞರು ಹೇಳುವಂತೆ ಇನ್ನೂ ಅನೇಕ ವಿಚಾರಗಳ ಬಗ್ಗೆ ಸೂಕ್ತ ತನಿಖೆ ನಡೆಯಬೇಕಿದೆ. ನಂತರದಲ್ಲಿ ಮೋದಿ ತಪ್ಪಿತಸ್ಥರೇ ಅಥವಾ ನಿರ್ದೋಷಿಯೇ ಎಂಬುದು ಗೊತ್ತಾಗಲಿದೆ ಎಂದಿದ್ದಾರೆ. ಮೋದಿ ಮತ್ತು ತಮ್ಮ ನಡುವಣ ಸ್ಪರ್ಧೆಯು ಅಧ್ಯಕ್ಷೀಯ ಮಾದರಿ ಚುನಾವಣೆಯ ಹಣಾಹಣಿ ಅಲ್ಲ. ಬದಲಿಗೆ ವಿಭಿನ್ನ ಸಿದ್ಧಾಂತಗಳ ನಡುವಣ ಹೋರಾಟ ಎಂದು ರಾಹುಲ್ ಹೇಳಿದರು.
ಸ್ವಾತಂತ್ರ್ಯ, ಪ್ರತಿಯೊಬ್ಬರ ಘನತೆ–ಗೌರವ ಮತ್ತು ಮಾನವೀಯತೆ ಕಾಂಗ್ರೆಸ್ ಸಿದ್ಧಾಂತ. ಆದರೆ ಬಿಜೆಪಿಯದು ಬಡತನ ವಿರೋಧಿ ಮತ್ತು ಧರ್ಮಗಳ ಮಧ್ಯೆ ಭೇದ ಎಣಿಸುವ ಸಿದ್ಧಾಂತ ಎಂದು ಟೀಕಿಸಿದರು.ಮೋದಿ ಬಳಸುತ್ತಿರುವ ಭಾಷೆಯ ಬಗ್ಗೆ ದೇಶದ ಜನತೆಯೇ ತೀರ್ಮಾನಿಸಬೇಕಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.