ADVERTISEMENT

ಗಾಯಾಳು ಚಿಕಿತ್ಸೆ ನಿರ್ಲಕ್ಷ್ಯ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2011, 19:30 IST
Last Updated 8 ಸೆಪ್ಟೆಂಬರ್ 2011, 19:30 IST
ಗಾಯಾಳು ಚಿಕಿತ್ಸೆ ನಿರ್ಲಕ್ಷ್ಯ: ಪ್ರತಿಭಟನೆ
ಗಾಯಾಳು ಚಿಕಿತ್ಸೆ ನಿರ್ಲಕ್ಷ್ಯ: ಪ್ರತಿಭಟನೆ   

ನವದೆಹಲಿ (ಪಿಟಿಐ, ಐಎಎನ್‌ಎಸ್): ದೆಹಲಿ ಸ್ಫೋಟದ ಗಾಯಾಳುಗಳಿಗೆ ರಾಮಮನೋಹರ ಲೋಹಿಯಾ ಆಸ್ಪತ್ರೆಯ ವೈದ್ಯರು ಸೂಕ್ತ ಚಿಕಿತ್ಸೆ ನೀಡುತ್ತಿಲ್ಲ ಎಂದು ಆಪಾದಿಸಿ ಗಾಯಾಳುಗಳ ಕುಟುಂಬದವರು ಗುರುವಾರ ಪ್ರತಿಭಟನೆ ನಡೆಸಿದರು.

ಗಾಯಾಳುಗಳ ಸ್ಥಿತಿ ಬಗ್ಗೆ ಆಸ್ಪತ್ರೆಯವರು ಯಾವುದೇ ಮಾಹಿತಿ ನೀಡುತ್ತಿಲ್ಲ. ಗಣ್ಯ ವ್ಯಕ್ತಿಗಳು (ವಿಐಪಿ) ಭೇಟಿ ನೀಡಿದಾಗ ಮಾತ್ರ ಚಿಕಿತ್ಸೆ ನೀಡುವಂತೆ ನಟಿಸುತ್ತಾರೆ ಎಂದು ತೀವ್ರ ನಿಗಾ ಘಟಕದಲ್ಲಿರುವ ಗಾಯಾಳುವೊಬ್ಬರ ಬಂಧು ಸುರೇಶ್ ಆನಂದ್ ದೂರಿದರು.

ಮರಣೋತ್ತರ ಪರೀಕ್ಷೆ ವರದಿಗಳ ಬಗ್ಗೆ ಪೊಲೀಸರು ಮಾಹಿತಿ ನೀಡುತ್ತಿಲ್ಲ ಎಂದು ಘಾಜಿಯಾಬಾದ್‌ನ 40 ವರ್ಷದ ನಿವಾಸಿ ಪ್ರಮೋದ್ ಚೌರಾಸಿಯಾ ಆರೋಪಿಸಿದರು. ಸ್ಫೋಟ ಘಟನೆಯಲ್ಲಿ ಸ್ವತಃ ಚೌರಾಸಿಯಾ ಕೂಡ ಗಾಯಗೊಂಡಿದ್ದಾರೆ.

ಇದಕ್ಕೆ ಮುನ್ನ ಪ್ರಧಾನಿ ಬುಧವಾರ ಆಸ್ಪತ್ರೆಗೆ ಭೇಟಿ ನೀಡಿದ್ದಾಗ ಗಾಯಾಳು ಮೃದುಲ್ ಭಕ್ಷಿ ಸೋದರ ವಿನೋದ್ ಭಕ್ಷಿ ಚಿಕಿತ್ಸಾ ವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಸ್ಫೋಟದ ನಂತರ ಸೋದರನನ್ನು ಹುಡುಕುವುದೇ ಬಲು ಕಷ್ಟವಾಯಿತು. ಆಸ್ಪತ್ರೆಗೆ ಮೂರು ಸಲ ಹೋದರೂ ಸುಳಿವು ಸಿಗಲಿಲ್ಲ.

ಬಹಳ ಹೊತ್ತು ಕಾಯ್ದು ಪ್ರಯಾಸದಿಂದ ತೀವ್ರ ನಿಗಾ ಘಟಕದೊಳಗೆ ಹೋಗಲು ಅನುಮತಿ ಪಡೆದ ಮೇಲೆ, ಆತ ಅಲ್ಲಿರುವುದು ದೃಢಪಟ್ಟಿತು ಎಂಬುದನ್ನು ಪ್ರಧಾನಿ ಗಮನಕ್ಕೆ ಭಕ್ಷಿ ತಂದಿದ್ದರು.

ಉತ್ತಮ ಚಿಕಿತ್ಸೆ- ಪ್ರಧಾನಿ ಭರವಸೆ
ಚಿಕಿತ್ಸಾ ಗುಣಮಟ್ಟದ ಬಗ್ಗೆ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ, ತಮ್ಮ ಪ್ರಧಾನ ಕಾರ್ಯದರ್ಶಿ ಟಿ.ಕೆ.ಎ.ನಾಯರ್ ಅವರನ್ನು ಆಸ್ಪತ್ರೆಗೆ ತೆರಳಿ ಪರಿಶೀಲಿಸಲು ಮನಮೋಹನ್ ಸೂಚಿಸಿದ್ದರು.

ಗುರುವಾರ ರಾಮಮನೋಹರ ಲೋಹಿಯಾ ಆಸ್ಪತ್ರೆಗೆ ತೆರಳಿದ ನಾಯರ್ ಗಾಯಾಳುಗಳಿಗೆ ಸಿಗುತ್ತಿರುವ ವೈದ್ಯಕೀಯ ನಿಗಾ ಪರಿಶೀಲಿಸಿದರು. ಚಿಕಿತ್ಸೆ ನೀಡುತ್ತಿರುವ ವೈದ್ಯರೊಂದಿಗೆ ಮತ್ತು ಗಾಯಾಳುಗಳ ಬಂಧುಗಳೊಂದಿಗೆ ಮಾತುಕತೆ ನಡೆಸಿದರು.

ನಾಯರ್ ಆಸ್ಪತ್ರೆ ಭೇಟಿ ಕೊಟ್ಟು ವಾಪಸಾದ ನಂತರ ಪ್ರಧಾನಿ ಹೇಳಿಕೆ ನೀಡಿ, ಸ್ಫೋಟದಲ್ಲಿ ಗಾಯಗೊಂಡವರ ಚಿಕಿತ್ಸಾ ವೆಚ್ಚ ಭರಿಸುವ ಜತೆಗೆ ತಜ್ಞ ವೈದ್ಯರ ಸೇವೆ ಒದಗಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.
 

ದೆಹಲಿ ಹೈಕೋರ್ಟ್: 49 ಸಿ.ಸಿ ಕ್ಯಾಮೆರಾ ಅಳವಡಿಕೆ
ನವದೆಹಲಿ (ಪಿಟಿಐ):
ದೆಹಲಿ ಹೈಕೋರ್ಟ್‌ನ ಒಳಗೆ ಮತ್ತು ಸುತ್ತಲೂ ವಿವಿಧ ಸ್ಥಳಗಳಲ್ಲಿ 49ಕ್ಕೂ ಹೆಚ್ಚು ಸಿಸಿಟಿವಿಗಳು ಮೂರು ವಾರಗಳಲ್ಲಿ ಅಳವಡಿಕೆ ಆಗಲಿವೆ.

ಹೈಕೋರ್ಟ್‌ನಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ದೆಹಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ವಿಶೇಷ ಪೊಲೀಸ್ ಕಮಿಷನರ್ ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಕೋರ್ಟ್ ಸಂಕೀರ್ಣದ ಪ್ರವೇಶ ದ್ವಾರಗಳಲ್ಲಿ ವಾಹನಗಳನ್ನು ತಪಾಸಣೆಗೊಳಪಡಿಸುವ ನಾಲ್ಕು ಸ್ಕ್ಯಾನರ್‌ಗಳನ್ನು ಅಳವಡಿಸಲು ಕೂಡ ಸಭೆ ನಿರ್ಧರಿಸಿತು. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅಧ್ಯಕ್ಷತೆ ವಹಿಸಿದ್ದರು.

ಕೋರ್ಟ್ ಆವರಣ ಬಳಿಯ ಅಕ್ಕಪಕ್ಕದ ಪ್ರದೇಶ ಮತ್ತು ರಸ್ತೆಗಳು ಯಾವಾಗಲೂ ಜನನಿಬಿಡವಾಗಿದ್ದು ಇದನ್ನು ತಪ್ಪಿಸಲೂ ಸಭೆ ನಿರ್ಣಯ ಕೈಗೊಂಡಿತು ಎಂದು ದೆಹಲಿ ಹೈಕೋರ್ಟ್ ವಕೀಲರ ಸಂಘದ ಕಾರ್ಯದರ್ಶಿ ಡಿ.ಕೆ. ಶರ್ಮಾ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಸಭೆಯಲ್ಲಿ ಭಾಗವಹಿಸಿದ್ದ ಭಾರತೀಯ ಕ್ರೀಡಾ ಪ್ರಾಧಿಕಾರದ ಹಿರಿಯ ಅಧಿಕಾರಿಯೊಬ್ಬರು, 2010ರಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಬಳಸಿದ್ದ ಸಿಸಿಟಿವಿಗಳನ್ನು ಬಳಸದೆ ಇಡಲಾಗಿದ್ದು ಇವನ್ನು ಇಲ್ಲಿಗೆ ಅಳವಡಿಸಬಹುದು ಎಂದು ಸಭೆಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT