ADVERTISEMENT

ಗಾಲಿ- ವೈಎಸ್‌ಆರ್ ನಂಟಿನ ನೋಟ...

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2011, 19:30 IST
Last Updated 5 ಸೆಪ್ಟೆಂಬರ್ 2011, 19:30 IST

ಹೈದರಾಬಾದ್: 
* ಅನಂತಪುರ ಗಣಿಯಲ್ಲಿ ವೈರಿಗಳಿಂದ ಗಾಲಿ ಸೋದರರಿಗೆ ತೊಂದರೆಯಾದಾಗ ಹಲವು ಬಾರಿ ಬೆಂಬಲಕ್ಕೆ ವೈ.ಎಸ್. ಜಗನ್ ತಮ್ಮ ಜನರನ್ನು ಕಳುಹಿಸಿದ್ದರು.

* ಕಡಪ ಜಿಲ್ಲೆಯಲ್ಲಿ ಬ್ರಹ್ಮಣಿ ಉಕ್ಕು ಕಂಪೆನಿ ಸ್ಥಾಪನೆಗಾಗಿ ಗಾಲಿ ಜನಾರ್ದನರೆಡ್ಡಿಗೆ ವೈಎಸ್‌ಆರ್ 10,760 ಎಕರೆ ಭೂಮಿ ಮಂಜೂರು ಮಾಡಿದ್ದರು. ಈ ಭೂಮಿಯನ್ನು ಹಣಕಾಸು ಸಂಸ್ಥೆಗಳಲ್ಲಿ ಒತ್ತೆಯಿಟ್ಟು ರೂ 350 ಕೋಟಿ ಪಡೆಯಲಾಗಿದೆ ಎಂಬ ಆರೋಪವಿದೆ.

* ಕಡಪ ಜಿಲ್ಲೆಯಲ್ಲಿ ಉಕ್ಕು ಕಂಪೆನಿ ಸ್ಥಾಪಿಸಲು ವೈಎಸ್‌ಆರ್ ಭೂಮಿಯನ್ನು ಅತಿ ಕಡಿಮೆ ಬೆಲೆ ಅಂದರೆ ಎಕರೆಗೆ ಕೇವಲ ರೂ 18,500ರಂತೆ ಹಣ ಪಾವತಿಸಿದ್ದರು.

* ಗಾಲಿ ಜನಾರ್ದನ ರೆಡ್ಡಿ `ಸಾಲದ ಪತ್ರ ಪಡೆಯಲು~ ಈ ಭೂಮಿಯನ್ನು ಎಕರೆಗೆ ರೂ 3.23 ಲಕ್ಷದಂತೆ ಬ್ಯಾಂಕುಗಳಲ್ಲಿ ಭೋಗ್ಯಕ್ಕೆ ಹಾಕಿದ್ದರು.

* ಜನಾರ್ದನ ರೆಡ್ಡಿ ಇಡೀ ಭೂಮಿಗೆ ಸರ್ಕಾರಕ್ಕೆ ಕೇವಲ ರೂ 20 ಕೋಟಿ ಪಾವತಿಸಿದ್ದು. ಆದರೆ ಸರ್ಕಾರದ ಗುತ್ತಿಗೆ ಭೂಮಿ ಮೇಲೆ ರೂ 350 ಕೋಟಿ ಸಾಲ ಪಡೆದುಕೊಂಡಿದ್ದರು.

*  ಜಿಜೆಆರ್ ಇಂಟರ್‌ನ್ಯಾಷನಲ್ ಹೋಲ್ಡಿಂಗ್ಸ್ ಲಿಮಿಟೆಡ್ ಮತ್ತು ಜಿಜೆಆರ್ ಹೋಲ್ಡಿಂಗ್ಸ್ (ಮಾರಿಷಸ್) ಬ್ರಹ್ಮಣಿ ಉಕ್ಕಿನ  ತಲಾ 4.89ಕೋಟಿ ಷೇರುಗಳನ್ನು ತಲಾ ರೂ 49 ಕೋಟಿಗೆ ಖರೀದಿಸಿದ್ದರು.

* ಗಾಲಿ ಸೋದರರು ಬ್ರಹ್ಮಣಿ ಉಕ್ಕಿನ ಹೂಡಿಕೆ ಹಣವನ್ನು ಜಿಂದಾಲ್‌ಗೆ ಮಾರಾಟ ಮಾಡಿದರು. ಜಗನ್ ಅವರೂ ತಮ್ಮ ಷೇರನ್ನು ಮಾರಿದ್ದರು.

* ಓಎಂಸಿ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ್ ರೆಡ್ಡಿ ಅವರು ವೈಎಸ್‌ಆರ್ ಅವರ ದೂರದ ಸಂಬಂಧಿ ಎಂಬುದು ಸಾಮಾನ್ಯ ತಿಳಿವಳಿಕೆ. ಅದೇ ರೀತಿ ಜನಾರ್ದನ ರೆಡ್ಡಿಯ ಬ್ರಹ್ಮಣಿ ಇಂಡಸ್ಟ್ರೀಸ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರ ರೆಡ್ಡಿ ಅನಂತರಪುರದ ರಾಯದುರ್ಗದ ಕಾಂಗ್ರೆಸ್ ಶಾಸಕರಾಗಿದ್ದು ವೈಎಸ್‌ಆರ್‌ನ ಅನುಯಾಯಿಯೂ ಆಗಿದ್ದಾರೆ.

ಬಳ್ಳಾರಿಯ ಗಾಲಿ ಸೋದರರು ಆಂಧ್ರಪ್ರದೇಶದಲ್ಲಿ ಒತ್ತುವರಿ ಮಾಡಿಕೊಂಡ ಅರಣ್ಯಭೂಮಿಯಲ್ಲಿ  ಮತ್ತು ಗುತ್ತಿಗೆ ಪಡೆಯದ ಪ್ರದೇಶಗಳಲ್ಲಿ ಗಣಿಗಾರಿಕೆ ನಡೆಸಿ ರೂ 5308 ಕೋಟಿ ಮೌಲ್ಯದ 1.97 ಕೋಟಿ ಟನ್‌ಗಳ ಕಬ್ಬಿಣದ ಅದಿರನ್ನು ಅಕ್ರಮವಾಗಿ ರಫ್ತು ಮಾಡಿದ್ದರು. ಇದಕ್ಕೆ ವೈಎಸ್‌ಆರ್ ಸರ್ಕಾರ ರಹಸ್ಯವಾಗಿ ಬೆಂಬಲ ನೀಡಿತ್ತು. ಈ ವಿಷಯವನ್ನು  ಸುಪ್ರೀಂಕೋರ್ಟ್‌ನ ಉನ್ನತಾಧಿಕಾರ ಸಮಿತಿಯು 2010ರ ನವೆಂಬರ್‌ನಲ್ಲಿ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಹಿರಂಗ ಪಡಿಸಿತ್ತು.

ಗಾಲಿ ಸೋದರರ ಮಾಲೀಕತ್ವದ ಓಎಂಸಿ-1, ಓಎಂಸಿ-2, ಓಎಂಸಿ-3 ಮತ್ತು ಅನಂತಪುರದ ಮೈನಿಂಗ್ ಕಂಪೆನಿಗಳ ಗುತ್ತಿಗೆ ಅವಧಿ 2004ಕ್ಕೆ ಮುಕ್ತಾಯಗೊಂಡಿದ್ದರೂ ವೈಎಸ್‌ಆರ್ ಸರ್ಕಾರ ಅವಧಿಯನ್ನು 2017ರವರೆಗೆ ವಿಸ್ತರಿಸಿತ್ತು.

ಓಎಂಸಿ-1ರಲ್ಲಿ ಗುತ್ತಿಗೆ ಪ್ರದೇಶ ಕೇವಲ 25.98 ಹೆಕ್ಟೇರ್‌ಗಳಿದ್ದರೂ ಒಎಂಸಿಯು ಅರಣ್ಯ ಪ್ರದೇಶಗಳಲ್ಲಿ ಕೂಡ ಗಣಿಗಾರಿಕೆ ನಡೆಸಿ  ಕರ್ನಾಟಕ ಮತ್ತು ಆಂಧ್ರ ಮಧ್ಯದ ಗಡಿ ಪ್ರದೇಶವನ್ನೂ ಅತಿಕ್ರಮಿಸಿಕೊಂಡಿತ್ತು.

ಓಎಂಸಿ ಅಧಿಕೃತವಾಗಿ ಕೇವಲ 132.98 ಹೆಕ್ಟೇರ್ ಪ್ರದೇಶವನ್ನು ಗುತ್ತಿಗೆ ಪಡೆದಿದೆ. ಆದರೆ ರೆಡ್ಡಿ ಸೋದರರು ಗಣಿಗಾರಿಕೆಯನ್ನು ಸುಮಾರು 326.5 ಹೆಕ್ಟೇರ್‌ನಷ್ಟು ಪ್ರದೇಶಕ್ಕೆ ಅಕ್ರಮವಾಗಿ ವಿಸ್ತರಿಸಿದ್ದಾರೆ ಈ ಪೈಕಿ 150 ಹೆಕ್ಟೇರ್ ಅರಣ್ಯ ಪ್ರದೇಶ ಮತ್ತು ಗಡಿಯಲ್ಲಿ ಯಾರಿಗೂ ಸೇರದ 25 ಎಕರೆ ಭೂಮಿ ಅಲ್ಲದೆ ತಮ್ಮ ನೆರೆಯಲ್ಲಿ ಗಣಿಗಾರಿಕೆ ನಡೆಸುವ ಇತರರ ಭೂಮಿಯನ್ನೂ ಅತಿಕ್ರಮಿಸಿದ್ದರು ಎಂಬುದನ್ನು ತನಿಖಾದಾರರು ಪತ್ತೆ ಹಚ್ಚಿದ್ದರು.

ಗುತ್ತಿಗೆ ಪ್ರದೇಶದಲ್ಲಿ ಓಎಂಸಿ ಅಕ್ರಮವಾಗಿ ರಸ್ತೆಗಳನ್ನು ನಿರ್ಮಿಸಿತ್ತು. ಅರಣ್ಯ ಪ್ರದೇಶವೊಂದರಿಂದಲೇ ಅದು ಸುಮಾರು 11ಲಕ್ಷ ಟನ್ ಕಬ್ಬಿಣದ ಅದಿರನ್ನು ಅಕ್ರಮವಾಗಿ ಗಣಿಗಾರಿಕೆ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.