ADVERTISEMENT

‘ಗುಜರಾತ್‌ ಸರ್ಕಾರದಿಂದ ಅಕ್ರಮ ಲಾಭ ಪಡೆದಿಲ್ಲ’

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2017, 19:30 IST
Last Updated 23 ಅಕ್ಟೋಬರ್ 2017, 19:30 IST
‘ಗುಜರಾತ್‌ ಸರ್ಕಾರದಿಂದ ಅಕ್ರಮ ಲಾಭ ಪಡೆದಿಲ್ಲ’
‘ಗುಜರಾತ್‌ ಸರ್ಕಾರದಿಂದ ಅಕ್ರಮ ಲಾಭ ಪಡೆದಿಲ್ಲ’   

ನವದೆಹಲಿ: ಗುಜರಾತ್‌ ಸರ್ಕಾರದಿಂದ ತಾವು ಕಾನೂನು ಬಾಹಿರವಾಗಿ ಯಾವುದೇ ಲಾಭ ಪಡೆದಿಲ್ಲ ಎಂದು ಮುಖ್ಯ ಚುನಾವಣಾ ಆಯುಕ್ತ ಎ.ಕೆ. ಜೋತಿ ಸ್ಪಷ್ಟಪಡಿಸಿದ್ದಾರೆ.

ಮೇ 2015ರಲ್ಲಿ ಚುನಾವಣಾ ಆಯೋಗದ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ನಂತರವೂ ಜೋತಿ ಅವರು ಅಹಮದಾಬಾದ್‌ನ ಸರ್ಕಾರಿ ಬಂಗಲೆಯಲ್ಲಿ ವಾಸ್ತವ್ಯ ಮುಂದುವರಿಸಿದ್ದರು ಎಂದು ಕೆಲವು ಮಾಧ್ಯಮಗಳಲ್ಲಿ ಪ್ರಕಟವಾದ ವರದಿಯನ್ನು ಅವರು ತಳ್ಳಿಹಾಕಿದ್ದಾರೆ.

ಗುಜರಾತ್‌ ಸರ್ಕಾರದಲ್ಲಿ ಅಧಿಕಾರಿಯಾಗಿ ನಿವೃತ್ತರಾದ ನಂತರ ಬಂಗಲೆಯಲ್ಲಿ ವಾಸ್ತವ್ಯ ಇದ್ದಷ್ಟು ಅವಧಿಯ ಬಾಡಿಗೆಯನ್ನು ಸರ್ಕಾರಕ್ಕೆ ಪಾವತಿಸಿರುವುದಾಗಿ ಅವರು ಸ್ಪಷ್ಟನೆ ನೀಡಿದ್ದಾರೆ.

ADVERTISEMENT

1975ರ ಬ್ಯಾಚ್‌ನ ಐಎಎಸ್‌ ಅಧಿಕಾರಿಯಾಗಿರುವ ಜೋತಿ ಅವರು 2013ರಲ್ಲಿ ಗುಜರಾತ್‌ನ ಮುಖ್ಯ ಕಾರ್ಯದರ್ಶಿಯಾಗಿ ನಿವೃತ್ತರಾಗಿದ್ದರು. ನಂತರ ಗುಜರಾತ್‌ನ ಜಾಗೃತ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು.

ಚುನಾವಣಾ ಆಯುಕ್ತರಾಗಿ ನೇಮಕಗೊಂಡ ನಂತರ ಹಲವು ತಿಂಗಳವರೆಗೆ ತಮ್ಮ ಕುಟುಂಬಕ್ಕೆ ದೆಹಲಿಯಲ್ಲಿ ಉಳಿದುಕೊಳ್ಳಲು ಮನೆಯನ್ನು ಹಂಚಿಕೆ ಮಾಡದೇ ಇದ್ದುದರಿಂದ ಅಹಮದಾಬಾದ್‌ನ ಬಂಗಲೆಯನ್ನು ತಮ್ಮಲ್ಲೇ ಉಳಿಸಿಕೊಳ್ಳಬೇಕಾಯಿತು ಎಂದು ಅವರು ಹೇಳಿದ್ದಾರೆ.

2016ರ ಅಕ್ಟೋಬರ್‌ನಲ್ಲಿ ಅವರು ಬಂಗಲೆಯನ್ನು ಖಾಲಿ ಮಾಡಿದ್ದರು. ಈ ವರ್ಷದ ಜುಲೈನಲ್ಲಿ ಅವರು ಮುಖ್ಯ ಚುನಾವಣಾ ಆಯುಕ್ತರಾಗಿ ಎಂ. ನಸೀಂ ಜೈದಿ ಅವರಿಂದ ಅಧಿಕಾರ ವಹಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.