ನವದೆಹಲಿ (ಪಿಟಿಐ): ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಕೇಂದ್ರ ಸರ್ಕಾರದ ಆದೇಶದ ಮೇರೆಗೆ `ಸದ್ಭಾವನಾ ಉಪವಾಸ~ ಕೈಗೊಂಡಿದ್ದರು ಎಂಬ ಗುಜರಾತ್ ಸರ್ಕಾರದ ಹೇಳಿಕೆಗೆ ಕಾಂಗ್ರೆಸ್ ಭಾನುವಾರ ತಿರುಗೇಟು ನೀಡಿದೆ.
`ಭಾರತದ ಜನತೆ ಹುಲ್ಲು ತಿನ್ನುತ್ತಿದ್ದಾರೆಂದು ಬಿಜೆಪಿ ಮತ್ತು ನರೇಂದ್ರ ಮೋದಿ ಅವರು ತಿಳಿದುಕೊಂಡಂತಿದೆ. ಇಲ್ಲದಿದ್ದಲ್ಲಿ ಇಂತಹ ನಗೆಪಾಟಲಿಗೀಡಾಗುವ ಹೇಳಿಕೆಗಳನ್ನು ಅವರು ನೀಡುತ್ತಿರಲಿಲ್ಲ~ ಎಂದು ಟೀಕಿಸಿದೆ.
 `ಒಂದು ವೇಳೆ ಕೇಂದ್ರದ ನಿರ್ದೇಶನಗಳನ್ನು ಚಾಚೂ ತಪ್ಪದೇ ಪಾಲಿಸುವಷ್ಟು ವಿಧೇಯತೆ ನರೇಂದ್ರ ಮೋದಿ ಅವರಿಗಿದ್ದಲ್ಲಿ `ರಾಜ ಧರ್ಮ~ವನ್ನು ಅನುಸರಿಸುವಂತೆ ಅವರದೇ ಪಕ್ಷ ನೀಡಿದ್ದ ಕರೆಯನ್ನು ಏಕೆ ಮನ್ನಿಸಲಿಲ್ಲ? ಅವರದೇ ಕಣ್ಣೆದುರು ನರಹತ್ಯೆ ನಡೆಯುತ್ತಿದ್ದಾಗ ಅಂಧರಾಗಿ ಕುಳಿತುಕೊಳ್ಳಲು ಕೇಂದ್ರ ಸರ್ಕಾರ ಆದೇಶ ನೀಡಿತ್ತೇ?~ ಎಂದು ಕಾಂಗ್ರೆಸ್ ವಕ್ತಾರ ಅಭಿಷೇಕ್ ಸಿಂಘ್ವಿ ಹರಿಹಾಯ್ದಿದ್ದಾರೆ.
ರಾಜ್ಯದಲ್ಲಿ ಕೋಮು ಸಾಮರಸ್ಯವನ್ನು ಉತ್ತೇಜಿಸುವ ಮೂಲಕ ರಾಷ್ಟ್ರೀಯ ಏಕತೆ ಬಲಪಡಿಸುವ ಸಲುವಾಗಿ `ಸದ್ಭಾವನಾ ಉಪವಾಸ~ ಕೈಗೊಳ್ಳುವಂತೆ ಕೇಂದ್ರದ ವಿವಿಧ ಸಚಿವಾಲಯಗಳು ಆದೇಶ ನೀಡಿದ್ದಾಗಿ ಗುಜರಾತ್ ಗೃಹ ಸಚಿವಾಲಯವು ರಾಜ್ಯಪಾಲರಿಗೆ ಬರೆದ ಪತ್ರದಲ್ಲಿ ತಿಳಿಸಿತ್ತು ಎಂಬ ಮಾಧ್ಯಮ ವರದಿಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಈ ಕಟು ಟೀಕೆ ವ್ಯಕ್ತಪಡಿಸಿದೆ.  ಕಳೆದ ಸೆಪ್ಟೆಂಬರ್ 17ರಂದು ತಮ್ಮ ಜನ್ಮದಿನದ ಸಂದರ್ಭದಲ್ಲಿ 3 ದಿನಗಳ ಉಪವಾಸ ನಡೆಸುವುದರೊಂದಿಗೆ ಮೋದಿ ತಮ್ಮ `ಸದ್ಭಾವನಾ ಉಪವಾಸ~ವನ್ನು ಆರಂಭಿಸಿದ್ದರು. ಇಂತಹ 33 ಉಪವಾಸಗಳನ್ನು ಫೆ.12ರವರೆಗೆ ಅವರು ಕೈಗೊಂಡಿದ್ದರು.
 
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.