ADVERTISEMENT

ಗುಡ್ಡಾಪುರದಲ್ಲಿ ಗಡಿ ಕನ್ನಡಿಗರ ಸಭೆ: ಸೌಲಭ್ಯ ಕಲ್ಪಿಸಲು ಮಹಾರಾಷ್ಟ್ರಕ್ಕೆ 6 ತಿಂಗಳ ಗಡುವು

ಗಣೇಶ ಚಂದನಶಿವ
Published 10 ಮೇ 2012, 19:30 IST
Last Updated 10 ಮೇ 2012, 19:30 IST
ಗುಡ್ಡಾಪುರದಲ್ಲಿ ಗಡಿ ಕನ್ನಡಿಗರ ಸಭೆ: ಸೌಲಭ್ಯ ಕಲ್ಪಿಸಲು ಮಹಾರಾಷ್ಟ್ರಕ್ಕೆ 6 ತಿಂಗಳ ಗಡುವು
ಗುಡ್ಡಾಪುರದಲ್ಲಿ ಗಡಿ ಕನ್ನಡಿಗರ ಸಭೆ: ಸೌಲಭ್ಯ ಕಲ್ಪಿಸಲು ಮಹಾರಾಷ್ಟ್ರಕ್ಕೆ 6 ತಿಂಗಳ ಗಡುವು   

ಗುಡ್ಡಾಪುರ (ಮಹಾರಾಷ್ಟ್ರ): ಮಹಾರಾಷ್ಟ್ರ ರಾಜ್ಯ ಸರ್ಕಾರದ ಮಲತಾಯಿ ಧೋರಣೆಯ ವಿರುದ್ಧ ಸಿಡಿದೆದ್ದಿರುವ ಗಡಿಭಾಗದ ಜತ್ತ ತಾಲ್ಲೂಕಿನ 44 ಗ್ರಾಮಗಳ ಕನ್ನಡಿಗರು,  ಅಗತ್ಯ ಸೌಲಭ್ಯ ಕಲ್ಪಿಸಲು ತಮ್ಮ ರಾಜ್ಯ ಸರ್ಕಾರಕ್ಕೆ ಆರು ತಿಂಗಳ ಗಡುವು ನೀಡಿದ್ದಾರೆ.

ಸುಕ್ಷೇತ್ರ ಗುಡ್ಡಾಪುರದಲ್ಲಿ ಗುರುವಾರ ನಡೆದ ಈ ಭಾಗದ 44 ಗ್ರಾಮಗಳ ಜನಪ್ರತಿನಿಧಿಗಳು, ಮುಖಂಡರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.

ಮುಂದಿನ ಹೋರಾಟ ರೂಪಿಸಲು ಹಾಗೂ ಉಭಯ ಸರ್ಕಾರಗಳ ಜೊತೆಗೆ ಸಮಾಲೋಚನೆ ನಡೆಸಲು ಸಾಂಗಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಉಪಾಧ್ಯಕ್ಷ ಮಹಾದೇವ ಅಂಕಲಗಿ ನೇತೃತ್ವದಲ್ಲಿ 21 ಜನ ಸದಸ್ಯರನ್ನೊಳಗೊಂಡ `ಜತ್ತ ತಾಲ್ಲೂಕು ಗಡಿನಾಡು ಸಂಘರ್ಷ ಸಮಿತಿ~ ರಚಿಸಲಾಯಿತು.

`ಒಂದು ವಾರದಲ್ಲಿ ಸಮಿತಿಯ ಮುಖಂಡರು ಮಹಾರಾಷ್ಟ್ರದ ಮುಖ್ಯಮಂತ್ರಿ, ರಾಜ್ಯಪಾಲರನ್ನು ಭೇಟಿಯಾಗಿ ನಮ್ಮ ಸಮಸ್ಯೆ ಹಾಗೂ ಬೇಡಿಕೆಯನ್ನು ಮಂಡಿಸುತ್ತೇವೆ. ಆ ನಂತರ ಕರ್ನಾಟಕ ದ ಮುಖ್ಯಮಂತ್ರಿಗಳನ್ನೂ ಭೇಟಿಯಾಗಿ ಗಡಿ ಕನ್ನಡಿಗರಿಗೆ ಸೌಲಭ್ಯ ಕಲ್ಪಿಸಿಕೊಡಲು ಮಹಾರಾಷ್ಟ್ರ ಸರ್ಕಾರದ ಮೇಲೆ ಒತ್ತಡ ತರುವಂತೆ ಮನವಿ ಮಾಡುತ್ತೇವೆ. ವಿಶೇಷ ಪ್ಯಾಕೇಜ್ ಕಲ್ಪಿಸಿ ಆರು ತಿಂಗಳಲ್ಲಿ ನಮ್ಮ ಸಮಸ್ಯೆ ಪರಿಹರಿಸದ್ದರೆ 2013 ಜನವರಿ 1ರಿಂದಲೇ ಕರ್ನಾಟಕ ಸೇರ್ಪಡೆಯಾಗಲು ಹೋರಾಟ ಆರಂಭಿಸುತ್ತೇವೆ~ ಎಂದು ಸಮಿತಿಯ ಅಧ್ಯಕ್ಷ ಮಹಾದೇವ ಅಂಕಲಗಿ, ಗುಡ್ಡಾಪುರ ದಾನಮ್ಮದೇವಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ ಗೊಬ್ಬಿ, ಸಾಂಗಲಿ ಜಿಲ್ಲಾ ಪರಿಷತ್ ಮಾಜಿ ಅಧ್ಯಕ್ಷ ಅಣ್ಣಾಸಾಹೇಬ ಗಡವೆ ತಿಳಿಸಿದರು.

`ಭಾಷಾವಾರು ಪ್ರಾಂತಗಳು ರಚನೆಯಾಗಿ ಅರ್ಧ ಶತಮಾನ ಕಳೆದರೂ ಮಹಾರಾಷ್ಟ್ರ ಸರ್ಕಾರ ನಮ್ಮ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಭಾಷಾ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಯಾವುದೇ ಕ್ರಮ ಕೈಗೊಂಡಿಲ್ಲ~ ಎಂದು ವಕೀಲ ಚನ್ನಪ್ಪ ಹೊರ್ತಿಕರ ದೂರಿದರು.

`ನೀರು-ನೀರಾವರಿ, ಶಿಕ್ಷಣ, ರಸ್ತೆ ಹಾಗೂ ವಿದ್ಯುತ್ ವಿಷಯದಲ್ಲಿ ನಾವು ಎದುರಿಸುತ್ತಿರುವ ಸಮಸ್ಯೆಯನ್ನು ನಮ್ಮ ಸರ್ಕಾರದ ಗಮನಕ್ಕೆ ತರುತ್ತೇವೆ. ಅದಕ್ಕಾಗಿ ಆರು ತಿಂಗಳು ಕಾಲಾವಕಾಶವನ್ನೂ ನೀಡುತ್ತೇವೆ. ಅವರು ಇದೇ ಧೋರಣೆ ಮುಂದುವರೆಸಿದರೆ ನಮಗೆ ವಿಚ್ಛೇದನ (ಮಹಾರಾಷ್ಟ್ರದಿಂದ ಬಿಡುಗಡೆಯಾಗಿ ಕರ್ನಾಟಕಕ್ಕೆ ಸೇರುವುದು) ಕೊಡಿ ಎಂದು ಕೇಳುತ್ತೇವೆ~ ಎಂದರು.

`ಈ ಭಾಗದ 44 ಗ್ರಾಮಗಳಲ್ಲಿ ಶೇ.75ರಷ್ಟು ಕನ್ನಡ ಭಾಷಿಕರು ಇದ್ದಾರೆ. ಮಹಾಜನ ವರದಿಯಂತೆ ಈ ಎಲ್ಲ 44 ಗ್ರಾಮಗಳೂ ಕರ್ನಾಟಕಕ್ಕೆ ಸೇರಬೇಕು. ಪ್ರತಿಯೊಂದು ಗ್ರಾಮದಲ್ಲಿ ಕನ್ನಡ ಪ್ರಾಥಮಿಕ ಶಾಲೆಗಳಿವೆ. ಕನ್ನಡ ಮಾಧ್ಯಮದ ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜು, ಜತ್ತನಲ್ಲಿ ಎರಡು ಕನ್ನಡ ಮಾಧ್ಯಮದ ಡಿ.ಇಡಿ ಕಾಲೇಜುಗಳೂ ಇವೆ. ಆದರೆ, ಈ ಎಲ್ಲ ಗ್ರಾಮಗಳಲ್ಲಿ ಮರಾಠಿ ಶಾಲೆಗಳನ್ನು ಹಾಗೂ 21 ಮರಾಠಿ ಪ್ರೌಢ ಶಾಲೆಗಳನ್ನು ಆರಂಭಿಸಲು ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ. ಹಿಂಬಾಗಿಲಿನ ಮೂಲಕ ಕನ್ನಡ ಶಾಲೆಗಳನ್ನು ಮುಚ್ಚಿಸಿ ಕನ್ನಡ ಭಾಷೆಯನ್ನು ನಿರ್ಣಾಮ ಮಾಡುವ ಹುನ್ನಾರ ನಡೆಸಿದೆ~ ಎಂದು ದಾನಪ್ಪ ಪೂಜಾರಿ ಮತ್ತಿತರರು ದೂರಿದರು.

`ಕರ್ನಾಟಕ ಸರ್ಕಾರ ಹುಟ್ಟಿದ ಮಗುವಿನಿಂದ ಹಿಡಿದು ವಯೋವೃದ್ಧರಿಗೂ ನೆರವಿನ ಹಸ್ತ ಚಾಚುತ್ತಿದೆ. ರೈತರಿಗೆ ಸಾಲ-ಬಡ್ಡಿ ಮನ್ನಾ, ಉಚಿತ ವಿದ್ಯುತ್ ಕೊಡುತ್ತಿದೆ. ಅಂಗವಿಕಲರು, ವೃದ್ಧರು, ವಿಧವೆಯರಿಗೆ ಮಾಶಾಸನ ನೀಡುತ್ತಿದೆ. ಭಾಗ್ಯ ಲಕ್ಷ್ಮಿ ಯೋಜನೆಯ ಮೂಲಕ ಬಡ ಕುಟುಂಬದ ಬಾಲಕಿಯರ ಬದುಕಿನ ಜ್ಯೋತಿ ಬೆಳೆಗಿಸುತ್ತಿದೆ. ಆದರೆ, ನಮ್ಮ ಸರ್ಕಾರ ಹಣ ಪಡೆದರೂ ನಮಗೆ ಸರಿಯಾದ ವಿದ್ಯುತ್ ಕೊಡುತ್ತಿಲ್ಲ. ತೀವ್ರ ಬರಗಾಲವಿದ್ದರೂ ಜಾನುವಾರುಗಳಿಗೆ ಸರಿಯಾದ ಮೇವು ಪೂರೈಸುತ್ತಿಲ್ಲ. ಪೂರೈಸುವ ಕಳಪೆ ಗುಣಮಟ್ಟದ ಮೇವಿಗೂ ನಮ್ಮಿಂದ ಶೇ.25ರಷ್ಟು ಹಣ ಪಡೆಯುತ್ತಿದೆ. ಇಷ್ಟೆಲ್ಲ ಅನ್ಯಾಯ ಸಹಿಸಿಕೊಂಡು ನಾವು ಮಹಾರಾಷ್ಟ್ರದಲ್ಲಿಯೇ ಏಕೆ ಮುಂದುವರೆಯಬೇಕು?~ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ 44 ಗ್ರಾಮಗಳ ಪಂಚಾಯಿತಿಗಳ ಸದಸ್ಯರು, ಸಹಕಾರ ಸಂಘಗಳ ಪದಾಧಿಕಾರಿಗಳು ಪ್ರಶ್ನಿಸಿದರು.

`ನಮ್ಮ ಬೇಡಿಕೆ ಈಡೇರಿಸಿ ಎಂದು ನಮ್ಮ ಸರ್ಕಾರವನ್ನೇ ಕೇಳೋಣ~ ಎಂದು ಜಿಲ್ಲಾ ಪರಿಷತ್ ಸದಸ್ಯೆ ಸುಶೀಲಾ ಹೊನಮೋರೆ, ಸಾಂಗಲಿ ಎಪಿಎಂಸಿ ಮಾಜಿ ಅಧ್ಯಕ್ಷ ಪ್ರಕಾಶ ಜಮದಾಡೆ ಮತ್ತಿತರರು ಪ್ರತಿಪಾದಿಸಿದರು.

ಸಭೆಯಲ್ಲಿ ಕನ್ನಡ-ಮರಾಠಿ ಭಾಷೆಯಲ್ಲಿ ಮಾತನಾಡಿದ ಎಲ್ಲರೂ ಭಾಷಣದ ಕೊನೆಗೆ `ಜೈ ಮಹಾರಾಷ್ಟ್ರ~ ಎಂದರು. ಆದರೆ, ಯಾರೂ ಸಹ ಅಪ್ಪಿತಪ್ಪಿಯೂ `ಜೈ ಕರ್ನಾಟಕ~ ಅನ್ನಲಿಲ್ಲ! ತಕ್ಷಣವೇ ತಮ್ಮ ಸರ್ಕಾರದೊಂದಗೆ ಸಂಘರ್ಷಕ್ಕಿಳಿಯುವ ಮುನ್ಸೂಚನೆಯನ್ನೂ ನೀಡಲಿಲ್ಲ.

ಗಡಿ ಕನ್ನಡಿಗರ ಹೋರಾಟಕ್ಕೆ ಬೆಂಬಲಿಸಿ ಸಭೆಯಲ್ಲಿ ಪಾಲ್ಗೊಂಡಿದ್ದ ಕರ್ನಾಟಕ ನವ ನಿರ್ಮಾಣ ಸೇನೆಯ ಅಧ್ಯಕ್ಷ ಭೀಮಾಶಂಕರ ಪಾಟೀಲ, `ನಾವು ಭಾಷೆ-ರಾಜ್ಯಗಳ ದ್ವೇಷಿಗಳಲ್ಲ. ಕನ್ನಡಿಗರಿಗೆ ಅನ್ಯಾಯವಾದರೆ ಸಹಿಸುವುದಿಲ್ಲ. ನೀವು ಕರ್ನಾಟಕಕ್ಕೆ ಬರುವುದಾದರೆ ರತ್ನಗಂಬಳಿಯ ಸ್ವಾಗತ ಕೋರುತ್ತೇವೆ. ಆ ಬಗ್ಗೆ ನಮ್ಮ ಮುಖ್ಯಮಂತ್ರಿಗಳು, ಎಲ್ಲ ಪಕ್ಷಗಳ ನಾಯಕರನ್ನು ಭೇಟಿಯಾಗಿ ನಿಮ್ಮ ಪರವಾಗಿ ವಕಾಲತ್ತು ವಹಿಸುತ್ತೇವೆ~ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.