ADVERTISEMENT

‘ಗೃಹಲಕ್ಷ್ಮಿ’, ರೂಪದರ್ಶಿ ವಿರುದ್ಧ ದೂರು

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2018, 19:30 IST
Last Updated 2 ಮಾರ್ಚ್ 2018, 19:30 IST
‘ಗೃಹಲಕ್ಷ್ಮಿ’, ರೂಪದರ್ಶಿ ವಿರುದ್ಧ ದೂರು
‘ಗೃಹಲಕ್ಷ್ಮಿ’, ರೂಪದರ್ಶಿ ವಿರುದ್ಧ ದೂರು   

ತಿರುವನಂತಪುರ : ಮಗುವಿಗೆ ಸ್ತನ್ಯಪಾನ ಮಾಡಿಸುತ್ತಿರುವ ಚಿತ್ರವನ್ನು ಮುಖಪುಟದಲ್ಲಿ ಪ್ರಕಟಿಸಿದ ಮಲಯಾಳ ಪಾಕ್ಷಿಕ ‘ಗೃಹಲಕ್ಷ್ಮಿ’ ಹಾಗೂ ಆ ಚಿತ್ರದಲ್ಲಿ ಕಾಣಿಸಿಕೊಂಡ ರೂಪದರ್ಶಿ ಜೀಲು ಜೋಸೆಫ್ ವಿರುದ್ಧ ದೂರು ದಾಖಲಾಗಿದೆ.

‘ಕೊಲ್ಲಂನ ಸಿಜೆಎಂ ನ್ಯಾಯಾಲಯ ಮತ್ತು ರಾಜ್ಯ ಮಕ್ಕಳ ಹಕ್ಕು ಆಯೋಗದಲ್ಲಿ ಪ್ರಕರಣ ದಾಖಲಿಸಿದ್ದೇನೆ’ ಎಂದು ವಕೀಲ ನೊಬೆಲ್ ಮ್ಯಾಥ್ಯೂ ಹೇಳಿದ್ದಾರೆ. ಗುರುವಾರ ಪ್ರಕರಣ ದಾಖಲಿಸಲಾಗಿದ್ದು, ಇದೇ 16ಕ್ಕೆ ವಿಚಾರಣೆಯನ್ನು ಮುಂದೂಡಲಾಗಿದೆ.

‘ಸ್ತನ್ಯಪಾನ ಚಿತ್ರ ಪ್ರಕಟಿಸಿದ್ದು ವ್ಯಾಪಾರದ ಕುತಂತ್ರ. ಮನುಷ್ಯನ ದೇಹವನ್ನು ವ್ಯಾಪಾರಕ್ಕಾಗಿ ಬಳಸಿಕೊಳ್ಳಲಾಗಿದೆ’ ಎಂದು ಲೇಖಕ ರಾಹುಲ್ ಈಶ್ವರ್ ಟೀಕಿಸಿದ್ದಾರೆ.

ADVERTISEMENT

‘ಗೃಹಲಕ್ಷ್ಮಿ’ ಪಾಕ್ಷಿಕವು ‘ಮಾತೃಭೂಮಿ’ ಮಾಧ್ಯಮ ಸಂಸ್ಥೆಯ ಪ್ರಕಟಣೆಯಾಗಿದೆ. ದೂರಿನ ಕುರಿತು ಪ್ರತಿಕ್ರಿಯಿಸಿರುವ ಸಂಸ್ಥೆಯ ಜಂಟಿ ವ್ಯವಸ್ಥಾಪಕ ನಿರ್ದೇಶಕ ಎಂ.ವಿ. ಶ್ರೇಯಮ್ಸ್ ಕುಮಾರ್, ‘ಇದು ಅಗ್ಗದ ಪ‍್ರಚಾರ ಪಡೆಯುವ ಗಿಮಿಕ್’ ಎಂದಿದ್ದಾರೆ. ‘ದೂರಿನ ಸಂಬಂಧ ಯಾವುದೇ ಸೂಚನೆ ಬಂದಿಲ್ಲ’ ಎಂದು ಅವರು ಹೇಳಿದ್ದಾರೆ.

‘ಮಕ್ಕಳ ಹಕ್ಕು ನಿರಾಕರಣೆ ಮತ್ತು ಉಲ್ಲಂಘನೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ’ ಎಂದು ಮಕ್ಕಳ ಹಕ್ಕು ಆಯೋಗದ ಅಧ್ಯಕ್ಷೆ ಶೋಭಾ ಕೋಶಿ ಹೇಳಿದ್ದಾರೆ. ‘ನಕಲಿ ಸ್ತನ್ಯಪಾನ’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಸ್ತನ್ಯಪಾನದ ಬಗೆಗಿನ ಮುಜುಗರ ಭಾವನೆಯನ್ನು ಬದಲಾಯಿಸುವ ಉದ್ದೇಶದಿಂದ ಈ ಚಿತ್ರವನ್ನು ಪಾಕ್ಷಿಕ ಪ್ರಕಟಿಸಿತ್ತು. ಅಲ್ಲದೆ, ಎದೆಯನ್ನು ಮುಚ್ಚಿಕೊಳ್ಳದೇ ಮಗುವಿಗೆ ಹಾಲುಣಿಸುವ ಚಿತ್ರಗಳನ್ನು ಕಳಿಸುವಂತೆಯೂ ಅದು ತಾಯಂದಿರಿಗೆ ಕರೆ ನೀಡಿದೆ.

23 ವರ್ಷದ ಅಮೃತಾ ಎಂಬುವವರು ತನ್ನ ಒಂದೂವರೆ ವರ್ಷದ ಮಗುವಿಗೆ ಮೊಲೆಯೂಡಿಸುತ್ತಿರುವ ಚಿತ್ರವನ್ನೂ ಇದೇ ಸಂಚಿಕೆಯಲ್ಲಿ ಪಾಕ್ಷಿಕ ಪ್ರಕಟಿಸಿತ್ತು. ಈ ಚಿತ್ರವನ್ನು ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ್ದ ಅಮೃತಾ ಅವರ ಪತಿ, ‘ಮುಕ್ತವಾಗಿ ಎದೆಹಾಲುಣಿಸಲು ಇರುವ ಅಪವಾದಕ್ಕೆ ಮುಕ್ತಾಯ ಹಾಡಬೇಕು’ ಎಂದು ಬರೆದುಕೊಂಡಿದ್ದರು. ಇದರಿಂದ ಪ್ರೇರಿತವಾಗಿ ‘ಗೃಹಲಕ್ಷ್ಮಿ’ ಸ್ತನ್ಯಪಾನದ ಕುರಿತಾದ ಪ್ರಚಾರಾಂದೋಲನ ಆರಂಭಿಸಿದೆ.

‘ಚಿತ್ರದ ಕುರಿತಾಗಿ ಬರುವ ಎಲ್ಲ ಟೀಕೆಗಳನ್ನು ನಾನು ಸಂತೋಷದಿಂದ ಸ್ವಾಗತಿಸುತ್ತೇನೆ ಮತ್ತು ಸಂಭ್ರಮಿಸುತ್ತೇನೆ’ ಎಂದು ರೂಪದರ್ಶಿ ಮತ್ತು ಗಗನಸಖಿಯೂ ಆಗಿರುವ ಜೀಲು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.