ADVERTISEMENT

ಗೋವಾ ಚುನಾವಣೆ: ಕಾಂಗ್ರೆಸ್ ಪಟ್ಟಿಗೆ ಅಸಮಾಧಾನ, ಭುಗಿಲೆದ್ದ ಭಿನ್ನಮತ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2012, 19:30 IST
Last Updated 7 ಫೆಬ್ರುವರಿ 2012, 19:30 IST

ಪಣಜಿ (ಪಿಟಿಐ): ಗೋವಾ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಎರಡು ದಿನಗಳ ಹಿಂದೆ ಕಾಂಗ್ರೆಸ್ ಬಿಡುಗಡೆ ಮಾಡಿರುವ ಅಭ್ಯರ್ಥಿಗಳ ಪಟ್ಟಿಯಿಂದ ಆ ಪಕ್ಷದಲ್ಲಿ ಭಿನ್ನಮತ ಭುಗಿಲೆದ್ದಿದೆ.

ಕಾಂಗ್ರೆಸ್ ವರಿಷ್ಠರು ಹಲವಾರು ವರ್ಷಗಳ ಕಾಲ ಪಕ್ಷಕ್ಕಾಗಿ ದುಡಿದ ನಿಷ್ಠಾವಂತ ಕಾರ್ಯಕರ್ತರು, ಶಾಸಕರಿಗಿಂತ ಇತರ ಪಕ್ಷಗಳಿಂದ ವಲಸೆ ಬಂದ ಅಭ್ಯರ್ಥಿಗಳಿಗೆ ಮಣೆ ಹಾಕಿದ್ದಾರೆಂದು ಮೂಲ ಕಾಂಗ್ರೆಸ್ಸಿಗರು ದೂರಿದ್ದಾರೆ. ಟಿಕೆಟ್ ಆಕಾಂಕ್ಷಿಗಳಾಗಿದ್ದ ಹಲವು ಶಾಸಕರು, ಮಾಜಿ ಶಾಸಕರು ಹಾಗೂ ಶಾಸಕರ ಪುತ್ರರು ಪಕ್ಷ ತೊರೆದು ಸ್ವತಂತ್ರ ಸ್ಪರ್ಧಿಸಲು ಮುಂದಾಗಿದ್ದಾರೆ.

  ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯ ನಂತರ ಪಕ್ಷಕ್ಕೆ ರಾಜೀನಾಮೆ ನೀಡಿದವರಲ್ಲಿ ಕಾಂಗ್ರೆಸ್ ನಾಯಕ ಸಮೀರ್ ಸಲಗಾಂವ್ಕರ್ ಮೊದಲಿಗರು. ಮಾಂಡ್ರೇಮ್ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಅವರು ಅಲ್ಲಿ ಈಚೆಗಷ್ಟೇ ಪಕ್ಷ ಸೇರಿದ್ದ ಬಿಜೆಪಿಯ ಮಾಜಿ ಶಾಸಕ ದಯಾನಂದ ಸೊಪ್ಟೆಗೆ ಟಿಕೆಟ್ ನೀಡಿದ ಕಾರಣ ನಿರಾಸೆಗೊಂಡು ಪಕ್ಷ ತೊರೆದಿದ್ದಾರೆ.

ಪಣಜಿಯ ಕಾಂಗ್ರೆಸ್ ಹೌಸ್‌ನಲ್ಲಿ ರಾಜೀನಾಮೆ ಪತ್ರ ಸಲ್ಲಿಸಿದ ನಂತರ ವರದಿಗಾರರ ಬಳಿ ಮಾತನಾಡಿದ ಅವರು, ಇದು ಹೈಕಮಾಂಡ್ ನಿರ್ಧಾರವಲ್ಲ. ಸ್ಥಳೀಯ ಕಾಂಗ್ರೆಸ್ ನಾಯಕರು ದೆಹಲಿ ನಾಯಕರಿಗೆ ತಪ್ಪು ಮಾಹಿತಿ ನೀಡಿದ್ದಾರೆಂದು ಅಸಮಾಧಾನ ಸೂಚಿಸಿದರು. ಮಾಂಡ್ರೇಮ್ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಈ ಸಂದರ್ಭ ಪ್ರಕಟಿಸಿದರು.

 ಟಿಕೆಟ್ ವಂಚಿತರಾದ ಗೋವಾ ಕಾಂಗ್ರೆಸ್‌ಹಿರಿಯ ನಾಯಕಿ ವಿಕ್ಟೋರಿಯಾ ಫರ್ನಾಂಡಿಸ್, ಮಾಜಿ ಸಚಿವ  ಸಂಜಯ್ ಬಾಂದೇಕರ್, ಬೈಕೊಲಿಮ್ ಕ್ಷೇತ್ರದ ನಾಯಕ ನರೇಶ್ ಸವಾಲ್ ಎಲ್ಲರೂ ಪಕ್ಷ ತೊರೆಯಲು ನಿರ್ಧರಿಸಿದ್ದಾರೆ. ಮೂಲ ಕಾಂಗ್ರೆಸಿಗರ ಬದಲು ಬಿಜೆಪಿಯ ಮಾಜಿ ಶಾಸಕ ರಾಜೇಶ್ ಪಟ್ನೇಕರ್‌ಗೆ ಟಿಕೆಟ್ ನೀಡಿದ ಕಾರಣ ಬೈಕೊಲಿಮ್ ಬ್ಲಾಕ್‌ನ ಬಹುತೇಕ ಕಾರ್ಯಕರ್ತರು, ನಾಯಕರು ಪ್ರತಿಭಟಿಸಿ ಪಕ್ಷ ಬಿಡಲು ತೀರ್ಮಾನಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.