ADVERTISEMENT

ಗೋವಾ ಪೊಲೀಸ್ ಅಧಿಕಾರಿಗಳ ಹೇಳಿಕೆ:ಸಮಾವೇಶದ ಹೆಸರಲ್ಲಿ ವೇಶ್ಯಾವಾಟಿಕೆ ದಂಧೆ

​ಪ್ರಜಾವಾಣಿ ವಾರ್ತೆ
Published 26 ಜೂನ್ 2012, 19:30 IST
Last Updated 26 ಜೂನ್ 2012, 19:30 IST

ಪಣಜಿ (ಪಿಟಿಐ): ಗೋವಾದಲ್ಲಿ ವಾಣಿಜ್ಯ ಸಮಾವೇಶಗಳು ಹಾಗೂ ವ್ಯಾಪಾರ ಉತ್ತೇಜನ ಕಾರ್ಯಕ್ರಮಗಳನ್ನು ಆಯೋಜಿಸುವ ಕಾರ್ಯಕ್ರಮ ನಿರ್ವಹಣಾ ಕಂಪೆನಿಗಳು, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳ ಬಾಲಕಿಯರನ್ನು ಬಳಸಿಕೊಂಡು ವೇಶ್ಯಾವಾಟಿಕೆ ದಂಧೆ ನಡೆಸುತ್ತಿವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಕೆಲವು ಕಾರ್ಯಕ್ರಮಗಳ ವೇಳೆ ದಾಳಿ ನಡೆಸಿದಾಗ ಕಾರ್ಯಕ್ರಮ/ ಸಮಾವೇಶ ಸಂಘಟಿಸುವ ಕಂಪೆನಿಗಳು ಈ ದುಷ್ಕೃತ್ಯ ಎಸಗುತ್ತಿರುವುದು ಪತ್ತೆಯಾಗಿದೆ ಎಂದು ಅವರು ಹೇಳಿದ್ದಾರೆ.ವೇಶ್ಯಾವಾಟಿಕೆಗಾಗಿ ಬಾಲಕಿಯರ/ ಯುವತಿಯರ ಅಕ್ರಮ ಸಾಗಣೆ ನಿಗ್ರಹಿಸುವ ಉದ್ದೇಶದಿಂದ ಇಲ್ಲಿ ಮಂಗಳವಾರ ಆರಂಭವಾದ ಎರಡು ದಿನಗಳ ಸಮಾಲೋಚನಾ ಸಭೆಯಲ್ಲಿ ಪೊಲೀಸ್ ಅಧಿಕಾರಿಗಳು ಈ ಕುರಿತು ವಿವರಿಸಿದ್ದಾರೆ.

ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಅಸ್ಸಾಂ, ನಾಗಾಲ್ಯಾಂಡ್, ಮಣಿಪುರ ಮತ್ತು ಮಿಜೋರಾಂಗಳಿಂದ ಬಾಲಕಿಯರು/ಯುವತಿಯರನ್ನು ಹೆಚ್ಚಾಗಿ ಕರೆತರಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಈ ರಾಜ್ಯಗಳ ಸರ್ಕಾರಿ ಪ್ರತಿನಿಧಿಗಳು ಹಾಗೂ ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದಾರೆ.

ಗೋವಾದಲ್ಲಿ ಕಾರ್ಯಕ್ರಮ ಆಯೋಜಿಸುವ ಕಂಪೆನಿಗಳು ಮೂಲ ರಾಜ್ಯಗಳಲ್ಲಿ ನೋಂದಣಿಗೊಂಡಿವೆಯೇ, ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ವಿವಿಧ ರಾಜ್ಯಗಳೊಂದಿಗೆ ಮಾಹಿತಿ ವಿನಿಮಯ ವ್ಯವಸ್ಥೆ ಸ್ಥಾಪಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿರ್ದೇಶಕ ಸಂಜೀವ್ ಗಡ್ಕರ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.