ADVERTISEMENT

ಗೋವಾ ಪ್ರವೇಶಿಸಲು ಇನ್ನು ನೀಡಬೇಕು ಸುಂಕ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2013, 19:59 IST
Last Updated 15 ಏಪ್ರಿಲ್ 2013, 19:59 IST

ಪಣಜಿ (ಐಎಎನ್‌ಎಸ್): ಇನ್ನು ಮುಂದೆ ಗೋವಾಕ್ಕೆ ಪ್ರಯಾಣಿಸುವವರು  ಹೆದ್ದಾರಿ ಸುಂಕ (ಟೋಲ್) ನೀಡಬೇಕು. ದ್ವಿಚಕ್ರವಾಹನ ಸವಾರರು ಹೊರತು ಪಡಿಸಿ ಉಳಿದೆಲ್ಲಾ ವಾಹನಗಳ ಸವಾರರು ರೂ 100ಕ್ಕೂ ಅಧಿಕ  ಶುಲ್ಕ ತೆರಬೇಕು.

ಸೋಮವಾರ ಪಣಜಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಗೋವಾ ಮುಖ್ಯಮಂತ್ರಿ ಮನೋಹರ್  ಪರಿಕ್ಕರ್, `ರಾಜ್ಯವನ್ನು ಪ್ರವೇಶಿಸುವ ಐದು ಕಡೆಗಳಲ್ಲಿ ಸುಂಕ ವಸೂಲಾತಿ ಕೇಂದ್ರಗಳನ್ನು ಈಗಾಗಲೇ ಸ್ಥಾಪಿಸಲಾಗಿದೆ. ಶೀಘ್ರದಲ್ಲಿ ಇನ್ನೊಂದು ಕೇಂದ್ರ ನಿರ್ಮಿಸಲಾಗುವುದು' ಎಂದು ಹೇಳಿದರು.

ಕಳೆದ ಅಕ್ಟೋಬರ್‌ನಲ್ಲಿ ಗಣಿಗಾರಿಕೆಯನ್ನು ಸ್ಥಗಿತಗೊಳಿಸಿದ ನಂತರ ರಾಜ್ಯದ ವರಮಾನ ಕುಗ್ಗಿರುವ ಹಿನ್ನೆಲೆಯಲ್ಲಿ ರಾಜ್ಯ ಬೊಕ್ಕಸವನ್ನು ತುಂಬಿಸುವ ನಿಟ್ಟಿನಲ್ಲಿ ಹಲವು ಹೊಸ ಮಾರ್ಗಗಳನ್ನು ಹುಡುಕುವ ಒತ್ತಡದಲ್ಲಿ ರಾಜ್ಯ ಸರ್ಕಾರ ಇದೆ.

ರಾಜ್ಯಕ್ಕೆ ಪ್ರತಿ ವರ್ಷ ಭೇಟಿ ನೀಡುತ್ತಿರುವ ಲಕ್ಷಾಂತರ ಪ್ರವಾಸಿಗರಿಂದ ಹೆದ್ದಾರಿ ಸುಂಕ ಪಡೆಯುವ ಮೂಲಕ ಆದಾಯ ಗಳಿಸುವ ನಿರೀಕ್ಷೆಯಲ್ಲಿ ಗೋವಾ ಸರ್ಕಾರವಿದೆ.
ಪ್ಲೇಬಾಯ್ ಕ್ಲಬ್ ಪ್ರಸ್ತಾವಕ್ಕೆ ನಕಾರ (ಪಿಟಿಐ ವರದಿ): ಗೋವಾದ ಕಾಂಡೊಲಿಮ್ ಬೀಚ್‌ನಲ್ಲಿ ಆರಂಭಿಸಲು ಉದ್ದೇಶಿಸಲಾಗಿದ್ದ ದೇಶದ ಮೊದಲ ಪ್ಲೇಬಾಯ್ ಕ್ಲಬ್‌ಗೆ ಅನುಮತಿ ನೀಡಲು ರಾಜ್ಯ ಸರ್ಕಾರ ನಿರಾಕರಿಸಿದೆ.

ಕ್ಲಬ್ ಆರಂಭದ ಪ್ರಸ್ತಾವ ವಿವಾದ ಹುಟ್ಟುಹಾಕಿತ್ತು.  ಇದು  ಅಶ್ಲೀಲತೆಗೆ ಉತ್ತೇಜನ ನೀಡಲಿದೆ ಎಂಬ ಕೂಗು ಕೇಳಿ ಬಂದಿತ್ತು.ಪ್ರವಾಸಿಗರ ರಾಜ್ಯವಾದ ಗೋವಾದಲ್ಲಿ ತನ್ನ ಶಾಖೆಯನ್ನು ತೆರೆಯಲು ಅಮೆರಿಕ ಮೂಲದ ಪ್ಲೇಬಾಯ್ ಕ್ಲಬ್ ಮುಂದೆ ಬಂದಿತ್ತು. ಈ ಪ್ರಸ್ತಾವಕ್ಕೆ ಆಡಳಿತಾರೂಢ ಬಿಜೆಪಿಯಲ್ಲೇ ತೀವ್ರ ವಿರೋಧ ವ್ಯಕ್ತವಾಗಿತ್ತು.
`ತಾಂತ್ರಿಕ ಕಾರಣಗಳಿಗಾಗಿ ಅಮೆರಿಕ ಸಂಸ್ಥೆಯ ಮನವಿಯನ್ನು ಪರಿಗಣಿಸಲಾಗಿಲ್ಲ' ಎಂದು ಗೋವಾ ಮುಖ್ಯಮಂತ್ರಿ  ಮನೋಹರ್ ಪರಿಕ್ಕರ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT