ADVERTISEMENT

ಚಲಿಸುವ ರೈಲಿನಲ್ಲಿ ಮಹಿಳೆ ಅತ್ಯಾಚಾರ; ಶಂಕಿತನ ಬಂಧನ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2011, 17:35 IST
Last Updated 3 ಫೆಬ್ರುವರಿ 2011, 17:35 IST


ತ್ರಿಶೂರು (ಪಿಟಿಐ): ಚಲಿಸುವ ರೈಲಿನಲ್ಲಿ ಅತ್ಯಾಚಾರ ಮಾಡಿ ಮಹಿಳೆಯನ್ನು ಹೊರಕ್ಕೆ ತಳ್ಳಿದ ಅಮಾನುಷ ಪ್ರಕರಣ ಬುಧವಾರ ಸಂಭವಿಸಿದ್ದು, ಒಬ್ಬನನ್ನು ಬಂಧಿಸಲಾಗಿದೆ.

23 ವಯಸ್ಸಿನ ಈಕೆ ತ್ರಿಶೂರು ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚೇತರಿಕೊಳ್ಳುತ್ತಿದ್ದಾಳೆ. ತಮಿಳುನಾಡಿನ ಕೊಯಮತ್ತೂರು ಮೂಲದ ಬಂಧಿತ ಆರೋಪಿಯ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಚ್ಚಿಯ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸದಲ್ಲಿದ್ದ ಈ ಮಹಿಳೆ ವಿವಾಹ ನಿಶ್ಚಿತಾರ್ಥಕ್ಕಾಗಿ ಮನೆಗೆ ಮರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ಅತ್ಯಾಚಾರದ ಬಳಿಕ ಆರೋಪಿಯು ಮಹಿಳೆಯನ್ನು ಹೊರಕ್ಕೆ ದಬ್ಬಿದ ಎಂದು ಕೆಲವರು ಹೇಳಿದರೆ, ಆತನಿಂದ ಪಾರಾಗುವ ಧಾವಂತದಲ್ಲಿ ಮಹಿಳೆ ಕೆಳಕ್ಕೆ ಜಿಗಿದಿರಬಹುದು ಎಂದೂ ಹೇಳಲಾಗಿದೆ.

ತೀವ್ರವಾಗಿ ಗಾಯಗೊಂಡಿದ್ದ ಈ ಮಹಿಳೆ ವಲ್ಲತ್ತೋಳ್‌ನಗರ ಮತ್ತು ಶೋರ್ನೂರ್ ನಡುವಿನ ರೈಲ್ವೆ ಹಳಿಯ ಮೇಲೆ ಬಿದ್ದಿದ್ದಳು. ರೈಲು ವಲ್ಲತ್ತೋಳ್‌ನಗರ ಬಿಟ್ಟ ನಂತರ ಈ ಮಹಿಳೆ ಇದ್ದ ಕಂಪಾರ್ಟ್‌ಮೆಂಟ್‌ಗೆ ನುಗ್ಗಿದ ವ್ಯಕ್ತಿ ಈ ಕೃತ್ಯ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ರೈಲ್ವೆಯ ತಿರುವನಂತಪುರ ವಿಭಾಗೀಯ ಭದ್ರತಾ ಆಯುಕ್ತ ಕೆ.ಜೆ.ಜಾಯ್, ಇನ್ನು ಮುಂದೆ ಮಹಿಳಾ ಬೋಗಿಗಳಿಗೆ ಒಬ್ಬ ಮಹಿಳೆ, ಇಬ್ಬರು ಪುರುಷ  ಕಾನ್‌ಸ್ಟೆಬಲ್‌ಗಳ ತಂಡವನ್ನು ಭದ್ರತೆಗೆ ನಿಯೋಜಿಸಲಾಗುವುದು ಎಂದಿದ್ದಾರೆ.

ಘಟನೆಯನ್ನು ಖಂಡಿಸಿ ಗುರುವಾರ ಗುರುವಾಯೂರು- ಎರ್ನಾಕುಳಂ ಪ್ಯಾಸೆಂಜರ್ ರೈಲನ್ನು ತಡೆದು ಪ್ರಯಾಣಿಕರು ಪ್ರತಿಭಟಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.