ADVERTISEMENT

ಚಿತ್ರದುರ್ಗ, ತುಮಕೂರು ಜಿಲ್ಲೆಗಳಲ್ಲಿ ಗಣಿಗಾರಿಕೆ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2011, 19:00 IST
Last Updated 26 ಆಗಸ್ಟ್ 2011, 19:00 IST
ಚಿತ್ರದುರ್ಗ, ತುಮಕೂರು ಜಿಲ್ಲೆಗಳಲ್ಲಿ ಗಣಿಗಾರಿಕೆ ಸ್ಥಗಿತ
ಚಿತ್ರದುರ್ಗ, ತುಮಕೂರು ಜಿಲ್ಲೆಗಳಲ್ಲಿ ಗಣಿಗಾರಿಕೆ ಸ್ಥಗಿತ   

ನವದೆಹಲಿ (ಪಿಟಿಐ): ಬಳ್ಳಾರಿ ನಂತರ ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲೂ ಗಣಿಗಾರಿಕೆ ಅಮಾನತುಗೊಳಿಸಿ ತೀರ್ಪು ನೀಡಿರುವ ಸುಪ್ರೀಂಕೋರ್ಟ್, `ಆರ್ಥಿಕ ಅಭಿವೃದ್ಧಿ ಮತ್ತು ಪರಿಸರ ನಡುವೆ ಸಮತೋಲನ ಕಾಯ್ದುಕೊಳ್ಳಲು~ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ಮುಖ್ಯ ನ್ಯಾಯಮೂರ್ತಿ ಎಸ್. ಎಚ್. ಕಪಾಡಿಯ, ನ್ಯಾಯಮೂರ್ತಿಗಳಾದ ಅಫ್ತಾಬ್ ಆಲಂ ಮತ್ತು ಸ್ವತಂತ್ರಕುಮಾರ್ ಅವರನ್ನೊಳಗೊಂಡ ಮೂವರು ನ್ಯಾಯಾಧೀಶರ ಹಸಿರು (ಅರಣ್ಯ) ಪೀಠ ಶುಕ್ರವಾರ ಈ ತೀರ್ಪು ನೀಡಿದೆ. ಜೊತೆಗೆ ವಿಚಾರಣೆಯನ್ನು ಸೆಪ್ಟೆಂಬರ್ 2ರವರೆಗೆ ಮುಂದೂಡಿತು.

ಮನವಿ ತಿರಸ್ಕಾರ: ಗಣಿಗಾರಿಕೆ ಮುಂದುವರಿಸಲು ಅವಕಾಶ ನೀಡುವಂತೆ ಬಳ್ಳಾರಿಯ ಕೆಲವು ಗಣಿ ಕಂಪೆನಿಗಳು ಸಲ್ಲಿಸಿದ ಮನವಿ ತಿರಸ್ಕರಿಸಿದ ನ್ಯಾಯಪೀಠ, ತನಗೆ ಗಣಿಗಾರಿಕೆ ಪ್ರದೇಶದಲ್ಲಿ ಕೈಗೊಳ್ಳುವ ಪುನರ್ವಸತಿ ಯೋಜನೆಯನ್ನು ಸಲ್ಲಿಸುವ ತನಕವೂ ಅಮಾನತು ಆದೇಶ ಮುಂದುವರಿಯುವುದು ಎಂದು ಸ್ಪಷ್ಟಪಡಿಸಿತು.

ಚರ್ಚೆಗೆ ಸೂಚನೆ: ಎಲ್ಲ ಗಣಿ ಕಂಪೆನಿಗಳು ಸಂಘವೊಂದನ್ನು ರಚಿಸಿಕೊಂಡು, ಅಟಾರ್ನಿ ಜನರಲ್ ಜಿ.ಇ. ವಾಹನ್ವತಿ ಮತ್ತು ಪರಿಸರ ಹಾನಿ ತಡೆಯಲು ವೈಜ್ಞಾನಿಕ ವಿಧಾನದಲ್ಲಿ ಹೇಗೆ ಗಣಿಗಾರಿಕೆ ನಡೆಸಬಹುದೆಂಬ ಯೋಜನೆ ಬಗ್ಗೆ ಮಾಹಿತಿ ನೀಡಲು ಕೋರ್ಟ್‌ನಿಂದ ನೇಮಕವಾಗಿರುವ ವಕೀಲ ಶ್ಯಾಮ್ ದಿವಾನ್ ಅವರೊಂದಿಗೆ ಚರ್ಚಿಸುವಂತೆಯೂ ನ್ಯಾಯಪೀಠ ಆದೇಶಿಸಿದೆ.
 
ಮೇಲಿನ ಜಿಲ್ಲೆಗಳಲ್ಲಿ ಗಣಿಗಾರಿಕೆ ಸ್ಥಗಿತಗೊಳಿಸಲು ಶಿಫಾರಸು ಮಾಡಿ ಸುಪ್ರೀಂಕೋರ್ಟ್ ನಿಯೋಜಿಸಿದ ಅಧ್ಯಯನ ತಂಡ (ಸಿಇಸಿ) ಸಲ್ಲಿಸಿರುವ ವರದಿಯನ್ನು ಪರಿಶೀಲಿಸಿದ ನಂತರ ನ್ಯಾಯಪೀಠ ಈ ಆದೇಶ ಹೊರಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.