ADVERTISEMENT

ಚೀನಾ ಗಡಿ ತಕರಾರು ಅಲ್ಲಗಳೆದ ಭಾರತ

ಅರುಣಾಚಲ ಪ್ರದೇಶದ ಅಸಫಿಲಾ ಪ್ರದೇಶದಲ್ಲಿ ಭಾರತೀಯ ಸೈನಿಕರು ಗಸ್ತು ನಡೆಸಿದ್ದಕ್ಕೆ ಆಕ್ಷೇಪ

ಪಿಟಿಐ
Published 8 ಏಪ್ರಿಲ್ 2018, 20:43 IST
Last Updated 8 ಏಪ್ರಿಲ್ 2018, 20:43 IST

ಕಿಬಿತು (ಅರುಣಾಚಲ ಪ್ರದೇಶ): ಅರುಣಾಚಲ ಪ್ರದೇಶ ಗಡಿಗೆ ಸಂಬಂಧಿಸಿದಂತೆ ಚೀನಾ ಮತ್ತೊಂದು ತಕರಾರು ದಾಖಲಿಸಿದ್ದು, ‘ಭಾರತವು ಗಡಿ ನಿಯಮಗಳನ್ನು ಉಲ್ಲಂಘಿಸಿದೆ’ ಎಂದು ಆರೋಪಿಸಿದೆ. ಆದರೆ ಈ ಆರೋಪವನ್ನು ಭಾರತ ನಿರಾಕರಿಸಿದೆ.

‘ಮಾರ್ಚ್‌ 15ರಂದು ಚೀನಾ ಮತ್ತು ಭಾರತದ ಭದ್ರತಾ ಸಿಬ್ಬಂದಿ ಮಧ್ಯೆ ನಡೆದಿದ್ದ ‘ಗಡಿ ಕಾವಲು ಸಿಬ್ಬಂದಿ ಸಭೆ– ಬಿಎಂಪಿ’ಯಲ್ಲಿ ಚೀನಾ ತನ್ನ ಪ್ರತಿಭಟನೆ ದಾಖಲಿಸಿದೆ.

‘ಅಸಫಿಲಾದಲ್ಲಿ ಭಾರತದ ಸೈನಿಕರು ಗಡಿ ದಾಟಿ ನಮ್ಮ ನೆಲದಲ್ಲಿ ಗಸ್ತು ತಿರುಗಿದ್ದಾರೆ’ ಎಂದು ಅದು ಆರೋಪಿಸಿದೆ. ಕಳೆದ ಡಿಸೆಂಬರ್ 21, 22 ಮತ್ತು 23ರಂದು ಭಾರಿ ಸಂಖ್ಯೆಯಲ್ಲಿದ್ದ ಭಾರತೀಯ ಸೈನಿಕರು ನಮ್ಮ ನೆಲದಲ್ಲಿ ಗಸ್ತು ನಡೆಸಿದ್ದಾರೆ. ಭಾರತದ ಸೇನೆ ಚೀನಾ ನೆಲದಲ್ಲಿ ಅತಿಕ್ರಮಣ ನಡೆಸಿದೆ. ಇದು ಎರಡೂ ದೇಶಗಳ ನಡುವೆ ಸಂಘರ್ಷಕ್ಕೆ ಕಾರಣವಾಗಬಹುದು ಎಂದು ಚೀನಾ ಹೇಳಿದೆ’ ಎಂದು ಸೇನಾ ಮೂಲಗಳು ಮಾಹಿತಿ ನೀಡಿವೆ.

ADVERTISEMENT

ಭಾರತ ಮತ್ತು ಚೀನಾ ನಡುವೆ ಗಡಿ ತಕರಾರುಗಳ ಬಗ್ಗೆ ಚರ್ಚೆ ಮಾಡಲೆಂದೇ ವಾಸ್ತವ ಗಡಿ ರೇಖೆ (ಎಲ್‌ಎಸಿ) ಉದ್ದಕ್ಕೂ ಐದು ಬಿಎಂಪಿ ಠಾಣೆಗಳನ್ನು ಸ್ಥಾಪಿಸಲಾಗಿದೆ. ಅರುಣಾಚಲ ಪ್ರದೇಶದ ಬುಮ್‌ಲಾ ಮತ್ತು ಕಿಬಿತುನಲ್ಲಿ ತಲಾ ಒಂದೊಂದು, ಲಡಾಕ್‌ನಲ್ಲಿ ಎರಡು ಮತ್ತು ಸಿಕ್ಕಿಂ ನಾತುಲಾದಲ್ಲಿ ಒಂದು ಬಿಎಂಪಿ ಠಾಣೆಗಳಿವೆ. ಮಾರ್ಚ್ 15ರಂದು ಕಿಬಿತು ಬಳಿ ಚೀನಾದ ನೆಲದಲ್ಲಿ ಬಿಎಂಪಿ ನಡೆದಿತ್ತು.

‘ಚೀನಾವು ಅತಿಕ್ರಮಣ ಪದ ಬಳಸಿದ್ದಕ್ಕೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಎಲ್‌ಎಸಿ ಎಲ್ಲಿದೆ ಎಂಬುದು ನಮ್ಮ ಸೈನಿಕರಿಗೆ ಚೆನ್ನಾಗಿ ಗೊತ್ತಿದೆ. ನಾವು ಇನ್ನು ಮುಂದೆಯೂ ಅಸಫಿಲಾ ಪ್ರದೇಶದಲ್ಲಿ ಗಸ್ತು ಮುಂದುವರೆಸುತ್ತೇವೆ ಎಂದು ಭಾರತವು ತಿರುಗೇಟು ನೀಡಿದೆ’ ಎಂದು ಮೂಲಗಳು ಹೇಳಿವೆ.

‘ಅಸಫಿಲಾದಲ್ಲಿ ನಮ್ಮ ಸೈನಿಕರು ಗಸ್ತು ತಿರುಗುತ್ತಿರುವುದಕ್ಕೆ ಚೀನಾ ತಕರಾರು ತೆಗೆಯುತ್ತಿರುವುದು ಆಶ್ಚರ್ಯವನ್ನುಂಟು ಮಾಡಿದೆ. ಚೀನಾ ಸೈನಿಕರು ಈ ಹಿಂದೆ ಸಾಕಷ್ಟು ಬಾರಿ ಗಡಿ ದಾಟಿ ನಮ್ಮ ನೆಲಕ್ಕೆ ಬಂದಿದ್ದಾರೆ. ಆಗ ಅವರನ್ನೆಲ್ಲಾ ನಮ್ಮ ಸೈನಿಕರು ಯಶಸ್ವಿಯಾಗಿ ಹಿಮ್ಮೆಟ್ಟಿಸಿದ್ದಾರೆ’ ಎಂದು ಭಾರತೀಯ ಸೇನೆಯ ವಕ್ತರರು ಹೇಳಿದ್ದಾರೆ.

‘ಟುಟಿಂಗ್‌ನಲ್ಲಿ ರಸ್ತೆ ನಿರ್ಮಾಣಕ್ಕೆ ನಾವು ಬಳಸುತ್ತಿದ್ದ ಯಂತ್ರೋಪಕರಣಗಳಿಗೆ ಭಾರತದ ಸೈನಿಕರು ಹಾನಿ ಮಾಡಿದ್ದಾರೆ ಎಂದೂ ಚೀನಾ ಆರೋಪಿಸಿದೆ. ಆದರೆ ಆರೋಪವನ್ನು ಭಾರತ ನಿರಾಕರಿಸಿದೆ. ಚೀನಾದವರು ಗಡಿ ದಾಟಿ ಬಂದು ನಮ್ಮ ನೆಲದಲ್ಲಿ ರಸ್ತೆ ನಿರ್ಮಿಸುತ್ತಿದ್ದರು. ಅದನ್ನು ತಡೆದಿದ್ದೇವೆ ಎಂದು ಸೇನೆ ಸ್ಪಷ್ಟಪಡಿಸಿದೆ’ ಎಂದು ಅವರು ವಿವರಿಸಿದ್ದಾರೆ.

‘ಟುಟಿಂಗ್‌ನಲ್ಲಿ ನಾವು ಕ್ರಮ ತೆಗೆದುಕೊಂಡ ನಂತರ ಚೀನಾದ ಸಿಬ್ಬಂದಿ ಅಲ್ಲಿಂದ ತೆರಳಿದ್ದರು. ಆದರೆ ಯಂತ್ರೋಪಕರಣಗಳನ್ನು ಅಲ್ಲಿಯೇ ಬಿಟ್ಟಿದ್ದರು. ಅವನ್ನು ನಾವೇ ಹಿಂತಿರುಗಿಸಿದ್ದೇವೆ ಎಂಬುದನ್ನು ಸಭೆಯಲ್ಲಿ ಚೀನಾಕ್ಕೆ ಮನವರಿಕೆ ಮಾಡಿಕೊಟ್ಟಿದ್ದೇವೆ’ ಎಂದು ಅವರು ಹೇಳಿದ್ದಾರೆ.

**

ಆದ್ಯತೆ ಬದಲಿಸಿದ ಭಾರತ

‘ಭಾರತವು ಈಚೆಗೆ ಗಡಿ ತಂಟೆ ವಿಚಾರದಲ್ಲಿ ತನ್ನ ಗಮನವನ್ನು ಬದಲಿಸಿದೆ. ಈವರೆಗೂ ಪಾಕಿಸ್ತಾನದ ಜತೆಗಿನ ಗಡಿ ಸಮಸ್ಯೆಗೆ ಆದ್ಯತೆ ನೀಡಲಾಗುತ್ತಿತ್ತು. ಈಗ ಸೇನೆಯು ಚೀನಾ ಜತೆಗಿನ ಗಡಿ ತಕರಾರಿಗೆ ಹೆಚ್ಚಿನ ಮಹತ್ವ ನೀಡುತ್ತಿದೆ’ ಎಂದು ಸೇನಾ ಮೂಲಗಳು ಹೇಳಿವೆ.

‘ದೋಕಲಾ ಸಂಘರ್ಷದ ನಂತರ ಚೀನಾ ಜತೆ ಗಡಿ ತಕರಾರು ಇರುವ ಪ್ರದೇಶದಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೈನಿಕರನ್ನು ನಿಯೋಜಿಸಲಾಗಿದೆ. ಗಸ್ತು ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಚೀನಾ ಗಡಿಯಲ್ಲಿರುವ ದುರ್ಗಮ ಪರ್ವತಗಳಲ್ಲಿ ಗಸ್ತು ತಿರುಗುವ ಸಂಬಂಧ ನಮ್ಮ ಸೈನಿಕರಿಗೆ ಕಠಿಣ ತರಬೇತಿ ನೀಡಲಾಗುತ್ತಿದೆ’ ಎಂದು ಮೂಲಗಳು ಹೇಳಿವೆ.

**

100 ಚದರ ಕಿ.ಮೀ.: ಅಸಫಿಲಾ ಪ್ರದೇಶದ ಅಂದಾಜು ವಿಸ್ತೀರ್ಣ

2,000 ಮೀಟರ್: ಸಮುದ್ರಮಟ್ಟದಿಂದ ಅಸಫಿಲಾ ಪ್ರದೇಶದ ಎತ್ತರ

**

ಗಡಿಯಲ್ಲಿ ಎಂಥದ್ದೇ ಪರಿಸ್ಥಿತಿ ಎದುರಾದರೂ ಅದನ್ನು ಸಮರ್ಥವಾಗಿ ಎದುರಿಸಲು ನಮ್ಮ ಸೈನಿಕರು, ಕಠಿಣ ಸಮರಾಭ್ಯಾಸ ನಡೆಸಿ ಸನ್ನದ್ಧರಾಗಿದ್ದಾರೆ

ಭಾರತೀಯ ಸೇನೆಯ ಮೂಲಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.