ನವದೆಹಲಿ (ಪಿಟಿಐ): ಚೀನಾ ವಿರುದ್ಧದ ಯುದ್ಧದಲ್ಲಿ ಭಾರತಕ್ಕೆ ಹೀನಾಯ ಸೋಲುಂಟಾಗಲು ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರ ಲಾಲ್ ನೆಹರೂ ಅವರು ಅನುಸರಿಸಿದ ನೀತಿಯೇ ಕಾರಣ ಎಂಬ 1962ರ ಯುದ್ಧದ ಅತ್ಯಂತ ಗೋಪ್ಯ ಮಾಹಿತಿ ಎಂದೇ ವರ್ಗೀಕರಿಸಲಾಗಿರುವ ಹಂಡರ್‌ಸನ್ ಬ್ರೂಕ್ಸ್ ಅವರ ವರದಿಯ ಕೆಲವು ಭಾಗಗಳನ್ನು ಆಸ್ಟ್ರೇಲಿಯಾ ಪತ್ರಕರ್ತರೊಬ್ಬರು ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದಾರೆ.
ಪ್ರತಿಕ್ರಿಯೆಗೆ ಸರ್ಕಾರ ನಕಾರ: ಈ ಮಧ್ಯೆ, ವಿವಾದಾತ್ಮಕವಾದ ಈ ವಿಷಯದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಸರ್ಕಾರ ಮಂಗಳವಾರ ತಿಳಿಸಿದೆ.
‘ನೆಹರೂ ಅವರ ಸರ್ಕಾರ ಚೀನಾ ಯುದ್ಧ ಸಂದರ್ಭದಲ್ಲಿ ಮುನ್ನುಗ್ಗುವ ಧೋರಣೆಯನ್ನು ಅನುಸರಿಸಿತು. ಅತ್ಯಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸದೆ ಸೇನೆಯನ್ನು ಯುದ್ಧಕ್ಕೆ ನೂಕಿದು ಘೋರ ಪ್ರಮಾದ’ ಎಂಬ ಅಂಶಗಳನ್ನು ಆಸ್ಟ್ರೇಲಿಯಾದ ಪತ್ರಕರ್ತ ನೆವಿಲ್ಲೆ ಮಾಕ್ಸ್‌ವೆಲ್ ಅವರು ಇದೇ ಮೊದಲ ಬಾರಿಗೆ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದಾರೆ.
ಲೆಫ್ಟಿನಂಟ್ ಜನರಲ್ ಹಂಡರ್‌ಸನ್ ಬ್ರೂಕ್ಸ್ ಮತ್ತು ಬ್ರಿಗೇಡಿಯರ್ ಪಿ.ಎಸ್. ಭಗತ್ ಅವರು 1962ರ ಯುದ್ಧದ ಬಗ್ಗೆ ನೀಡಿದ ವರದಿಯು (ಹಂಡರ್‌ಸನ್ ಬ್ರೂಕ್ಸ್ ವರದಿ ಎಂದೇ ಹೆಸರುವಾಸಿ) ಸೂಕ್ಷ್ಮವಾದ ಮಾಹಿತಿಗಳನ್ನು ಒಳಗೊಂಡಿದ್ದು ಅತ್ಯಂತ ಗೋಪ್ಯ ಎಂದು ಸರ್ಕಾರ ಹೇಳಿತ್ತು.
ಕಾಂಗ್ರೆಸ್ ದೂಷಿಸಿದ ಬಿಜೆಪಿ: ‘ಕಾಂಗ್ರೆಸ್ ಆಗಲೂ ದೇಶದ ಭದ್ರತೆಯನ್ನು ಕಡೆಗಣಿಸಿತ್ತು ಈಗಲೂ ಕಡೆಗಣಿಸಿದೆ’ ಎಂದು ಬಿಜೆಪಿ ದೂಷಿಸಿದೆ. ಕೂಡಲೇ ಆ ಗೋಪ್ಯ ಮಾಹಿತಿಯನ್ನು ಬಹಿರಂಗ ಪಡಿಸಬೇಕು ಎಂದು ಆಗ್ರಹಿಸಿದೆ.
ಬಿಜೆಪಿ ಕೀಳು ರಾಜಕೀಯ: ಕಾಂಗ್ರೆಸ್ ಖಂಡನೆ
ಲೋಕಸಭೆ ಚುನಾವಣೆಯಲ್ಲಿ ಮತ ಬಾಚುವ ಉದ್ದೇಶದಿಂದ 1962ರ ಭಾರತ– ಚೀನಾ ಯುದ್ಧಕ್ಕೆ ಸಂಬಂಧಿಸಿದಂತೆ ಬಿಜೆಪಿ ಕೀಳುಮಟ್ಟದ ರಾಜಕೀಯ ಮಾಡುತ್ತಿದೆ ಎಂದು ಎಐಸಿಸಿ ವಕ್ತಾರ ಅಭಿಷೇಕ್ ಸಿಂಘ್ವಿ ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಟೀಕಿಸಿದರು.
1962ರಲ್ಲಿ ನಡೆದ ಘಟನೆಗಳು ಎಲ್ಲರಿಗೂ ತಿಳಿದ ವಿಷಯ. ಆದರೆ, ಸುಮಾರು 50 ವರ್ಷಗಳ ನಂತರ ಈ ವಿಷಯದ ಬಗ್ಗೆ ಕೀಳುಮಟ್ಟದ ರಾಜಕೀಯ ಮಾಡುತ್ತಿರುವುದು ಬಿಜೆಪಿಯ ಮನಸ್ಥಿತಿಯನ್ನು ಬಿಂಬಿಸುತ್ತದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.