ADVERTISEMENT

ಚೆನ್ನೈ, ಕೋಲ್ಕತ್ತಗಳಲ್ಲಿ ಆತಂಕದ ಅಲೆ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2012, 19:30 IST
Last Updated 11 ಏಪ್ರಿಲ್ 2012, 19:30 IST

ನವದೆಹಲಿ (ಪಿಟಿಐ/ಐಎಎನ್‌ಎಸ್):  ಸುಮಾತ್ರದಲ್ಲಿ ಭೂಕಂಪನ ಸಂಭವಿಸಿದ ಸಮಯದಲ್ಲಿ ಪೂರ್ವ ಕರಾವಳಿಯ ರಾಜ್ಯಗಳು ಹಾಗೂ ಬೆಂಗಳೂರು, ಚೆನ್ನೈ, ಕೋಲ್ಕತ್ತ, ಭುವನೇಶ್ವರ ಸೇರಿದಂತೆ ಪೂರ್ವ ಭಾರತದ ಪ್ರಮುಖ ನಗರಗಳಲ್ಲಿ ಕಂಪನದ ಅನುಭವವಾಯಿತು. ಆದರೆ, ಎಲ್ಲಿಯೂ ಆಸ್ತಿಪಾಸ್ತಿ, ಜೀವಹಾನಿಯಾದ ಬಗ್ಗೆ ವರದಿಯಾಗಿಲ್ಲ.

ಕಂಪನದ ಅನುಭವವಾದ ಕೂಡಲೇ ಚೆನ್ನೈನ ಬಹುಮಹಡಿ ಕಟ್ಟಡಗಳ ನಿವಾಸಿಗಳು ಮತ್ತು ಬಹುಮಹಡಿ ಕಟ್ಟಡಗಳಲ್ಲಿ ಕೆಲಸ ಮಾಡುವವರು ಭಯದಿಂದ ತೆರೆದ ಪ್ರದೇಶಗಳಿಗೆ ಧಾವಿಸಿದರು. ಸಂಜೆ 4.45ರ ಹೊತ್ತಿಗೆ ಮರುಕಂಪನದ ಅನುಭವವಾಗಿದ್ದರಿಂದ ಸರ್ಕಾರಿ, ಖಾಸಗಿ ಕಚೇರಿಗಳನ್ನು ಮುಚ್ಚಲಾಯಿತು. ರಸ್ತೆಗಳಲ್ಲಿ ಭಾರಿ ವಾಹನ ದಟ್ಟಣೆಯಿತ್ತು.

ಕೋಲ್ಕತ್ತ ಮತ್ತು ಸುತ್ತಲಿನ ಪ್ರದೇಶಗಳಲ್ಲೂ ಭೂಮಿ ಕಂಪಿಸಿತು. ಅಲ್ಲಿನ ಪಾರ್ಕ್ ಸ್ಟ್ರೀಟ್ ಪ್ರದೇಶ, ಸಾಲ್ಟ್‌ಲೇಕ್ ಹಾಗೂ ಲೇಕ್‌ಟೌನ್‌ಗಳಲ್ಲಿ  ಕಿಟಕಿ ಹಾಗೂ ಬಾಗಿಲುಗಳು ಸದ್ದುಮಾಡಿದವು. ಪಾರ್ಕ್ ಸ್ಟ್ರೀಟ್ ಪ್ರದೇಶದ ಕೆಲ ಕಟ್ಟಡಗಳಲ್ಲಿ ಬಿರುಕು ಸಹ ಮೂಡಿದೆ. ಭೀತರಾದ ಜನ ಮನೆಗಳಿಂದ ಹೊರಬಂದರು. ಕಂಪನದ ಕಾರಣ ಕೋಲ್ಕತ್ತ ಮೆಟ್ರೊ ರೈಲು ಸಂಚಾರವನ್ನು ಮಧ್ಯಾಹ್ನದ ನಂತರ ಸ್ಥಗಿತಗೊಳಿಸಲಾಯಿತು. ಪ್ರಯಾಣಿಕರಿಗೆ ನಿಲ್ದಾಣದಿಂದ ಹೊರಹೋಗುವಂತೆ ಸೂಚಿಸಲಾಯಿತು.

ಒಡಿಶಾದ ಭುವನೇಶ್ವರ, ಕಟಕ್, ಖುದ್ರಾ, ನಯಾಗರ್, ಜಗತ್‌ಸಿಂಗ್ ಹಾಗೈ ಜಾಜ್‌ಪುರ್‌ಗಳಲ್ಲಿ ಕಂಪನದ ಅನುಭವವಾಯಿತು. ಅಸ್ಸಾಂ ರಾಜಧಾನಿ ಗುವಾಹಟಿ ಮತ್ತು  ದಿಬ್ರೂಗಡ, ಸಿಬ್‌ಸಾಗರ, ತೀನ್‌ಸುಕಿಯಾ ಜಿಲ್ಲೆಗಳಲ್ಲಿ ಭೂಮಿ ಸಣ್ಣಗೆ ನಡುಗಿತು.

ಪಶ್ಚಿಮ ಕರಾವಳಿಯ ತಿರುವನಂತಪುರ ಹಾಗೂ ಕೊಚ್ಚಿಗಳಲ್ಲಿಯೂ ಭೂಮಿ ಲಘುವಾಗಿ ಕಂಪಿಸಿತು. ಉತ್ತರ ಮುಂಬೈನ ಕೆಲವು ಪ್ರದೇಶಗಳಲ್ಲೂ ಭೂಕಂಪದ ಅನುಭವವಾಗಿದೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.