ನವದೆಹಲಿ (ಪಿಟಿಐ): ಭ್ರಷ್ಟಾಚಾರ ನಿಗ್ರಹದ ಬಗ್ಗೆ ಪರಿಣಾಮಕಾರಿ ಕಾನೂನನ್ನು ರಚಿಸಲು ಜಂಟಿ ಕರಡು ರಚನಾ ಸಮಿತಿಯ ಸದಸ್ಯರು ಎರಡನೇ ಬಾರಿಗೆ ಸೋಮವಾರ ಇಲ್ಲಿ ಸಭೆ ಸೇರಲಿದ್ದಾರೆ. ಗಾಂಧಿವಾದಿ ಅಣ್ಣಾ ಹಜಾರೆ ನೇತೃತ್ವದ ತಂಡವು ಸಿದ್ಧಪಡಿಸಿರುವ ಜನ ಲೋಕಪಾಲ ಮಸೂದೆಯ ಬಗ್ಗೆ ಸಭೆಯು ಚರ್ಚಿಸಲಿದೆ.
ಸಮಿತಿ ಅಧ್ಯಕ್ಷ, ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರು ಸಮಿತಿಯ ಸರ್ಕಾರದ ಐವರು ಪ್ರತಿನಿಧಿಗಳ ಜತೆ ಸಭೆಗೆ ಮೊದಲು ಮಾತುಕತೆ ನಡೆಲಿದ್ದಾರೆ.ಲೋಕಪಾಲ ಕಚೇರಿಗೆ ದೂರವಾಣಿ ಸಂವಾದಗಳನ್ನು ಪ್ರತಿಬಂಧಿಸುವ ಅಧಿಕಾರ ನೀಡುವ ಬಗ್ಗೆ ಮಸೂದೆಯಲ್ಲಿ ಮಾಡಲಾಗಿರುವ ಇತ್ತೀಚೆಗಿನ ಸೇರ್ಪಡೆ ಕುರಿತು ಸರ್ಕಾರದ ನಿಲುವನ್ನು ಖಚಿತಪಡಿಸಲು ಈ ಮಾತುಕತೆ ನಡೆಯಲಿದೆ.
ಜನಲೋಕಪಾಲ ಮಸೂದೆ ಕರಡು ಪ್ರತಿಯನ್ನು ಪರಿಶೀಲಿಸಿರುವ ಕಾನೂನು ಸಚಿವಾಲಯದ ಉನ್ನತ ಅಧಿಕಾರಿಗಳು ಕೇಂದ್ರ ಸಚಿವರಿಗೆ ಇದರ ಪ್ರಮುಖ ಅಂಶಗಳ ಬಗ್ಗೆ ವಿವರಿಸಲಿದ್ದಾರೆ.ಭ್ರಷ್ಟಾಚಾರ ನಿಗ್ರಹ ಕಾನೂನಿನಲ್ಲಿ ನ್ಯಾಯಾಂಗದ ಸೇರ್ಪಡೆ ಬಗೆಗಿನ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಎರಡನೇ ಸಭೆ ನಡೆಯುತ್ತಿದೆ.
ಉದ್ದೇಶಿತ ಕಾನೂನಿನಲ್ಲಿ ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಾಧೀಶರ ಸೇರ್ಪಡೆಯನ್ನು ಭಾರತದ ಇಬ್ಬರು ನಿವೃತ್ತ ಮುಖ್ಯ ನ್ಯಾಯಮೂರ್ತಿಗಳಾದ ಜೆ.ಎಸ್. ವರ್ಮಾ ಮತ್ತು ಎಂ.ಎನ್. ವೆಂಕಟಾಚಲಯ್ಯ ಅವರು ಇತ್ತೀಚೆಗೆ ಏರ್ಪಡಿಸಿದ್ದ ಸಭೆಯಲ್ಲಿ ವಿರೋಧಿಸಿದ್ದರು.
ದೂರವಾಣಿ, ಅಂತರ್ಜಾಲ ಅಥವಾ ಭಾರತ ಟೆಲಿಗ್ರಾಫ್ ಕಾಯಿದೆಯಡಿ ಬರುವ ಇತರ ಯಾವುದೇ ಮಾಧ್ಯಮದ ಮೂಲಕ ಪಸರಿಸುವ ಧ್ವನಿ ಅಥವಾ ದತ್ತಾಂಶ ಅಥವಾ ಸಂದೇಶಗಳನ್ನು ಪ್ರತಿಬಂಧಿಸುವ ಮತ್ತು ಮೇಲ್ವಿಚಾರಣೆ ನಡೆಸುವ ವ್ಯಾಪಕ ಅಧಿಕಾರವನ್ನು ಮಸೂದೆ ಕರಡು ಪ್ರತಿಯ ಹೊಸಅಧಿನಿಯಮವು- ಅಧಿನಿಯಮ 13-ಸಿ ಅಡಿ ‘ಲೋಕಪಾಲದ ಸೂಕ್ತ ಪೀಠಕ್ಕೆ’ ನೀಡುತ್ತದೆ. ಈಗ, ದೂರವಾಣಿ ಸಂಪರ್ಕಗಳನ್ನು ತಡೆಹಿಡಿಯುವ ಅಧಿಕಾರವು ಗೃಹ ಸಚಿವಾಲಯದ ವ್ಯಾಪ್ತಿಗೆ ಬರುತ್ತದೆ.
ಈ ಕರಡು ಪ್ರತಿಯಲ್ಲಿರುವ ಮತ್ತೊಂದು ಹೊಸ ಸಂಗತಿ ಎಂದರೆ, ಲೋಕಪಾಲ ಕಚೇರಿಗೆ ಪ್ರತ್ಯೇಕವಾಗಿ ಹೊಸ ‘ಪ್ರಾಸಿಕ್ಯೂಷನ್ ವಿಭಾಗ’ ನಿರ್ಮಿಸುವುದು. ಸಮಿತಿಯ ಮೊದಲ ಸಭೆ ಏ. 16ರಂದು ನಡೆದಾಗ ಈ ಕರಡು ಪ್ರತಿಯನ್ನು ಸಮಿತಿಯ ಸರ್ಕಾರಿ ಪ್ರತಿನಿಧಿಗಳಿಗೆ ವಿತರಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.