ADVERTISEMENT

ಜಂತರ್ ಮಂತರ್‌ನಲ್ಲಿ ನಿಲ್ಲದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2012, 19:59 IST
Last Updated 30 ಡಿಸೆಂಬರ್ 2012, 19:59 IST
ನವದೆಹಲಿಯಲ್ಲಿ ಸಾಮೂಹಿಕ ಅತ್ಯಾಚಾರದ ಘಟನೆ ಖಂಡಿಸಿ ಪ್ರತಿಭಟನೆ ತೀವ್ರಗೊಂಡಿದ್ದು, ಯುವತಿಯೊಬ್ಬರು ಭಾನುವಾರ ಬೆತ್ತ ಹಿಡಿದು ಆಕ್ರೋಶ ವ್ಯಕ್ತಪಡಿಸಿದ ಪರಿ ಇದು 	-ರಾಯಿಟರ್ಸ್‌ ಚಿತ್ರ
ನವದೆಹಲಿಯಲ್ಲಿ ಸಾಮೂಹಿಕ ಅತ್ಯಾಚಾರದ ಘಟನೆ ಖಂಡಿಸಿ ಪ್ರತಿಭಟನೆ ತೀವ್ರಗೊಂಡಿದ್ದು, ಯುವತಿಯೊಬ್ಬರು ಭಾನುವಾರ ಬೆತ್ತ ಹಿಡಿದು ಆಕ್ರೋಶ ವ್ಯಕ್ತಪಡಿಸಿದ ಪರಿ ಇದು -ರಾಯಿಟರ್ಸ್‌ ಚಿತ್ರ   

ನವದೆಹಲಿ (ಪಿಟಿಐ): ಸಾಮೂಹಿಕ ಅತ್ಯಾಚಾರವೆಸಗಿ ಯುವತಿಯ ಸಾವಿಗೆ ಕಾರಣರಾದವರಿಗೆ ಶೀಘ್ರ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಎಬಿವಿಪಿಯ ಸಹ ಸಂಘಟನೆಯ ಸದಸ್ಯರು ಭಾನುವಾರ ಪೊಲೀಸರ ಜತೆ ಘರ್ಷಣೆಗೆ ಇಳಿದಿದ್ದರಿಂದ ಉದ್ರಿಕ್ತ ವಾತಾವರಣ ನಿರ್ಮಾಣವಾಯಿತು.

ಪ್ರತಿಭಟನೆ ಶಾಂತಿಯುತವಾಗಿ ನಡೆಯುತ್ತಿತ್ತು. ಆದರೆ ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಕೆಲವು ಪ್ರತಿಭಟನಾಕಾರರು ಎಬಿವಿಪಿ ಧ್ವಜ ಮತ್ತು ಬ್ಯಾನರ್‌ಗಳನ್ನು ಹಿಡಿದು ಜಂತರ್ ಮಂತರ್‌ನಿಂದ ಕನಾಟ್ ಪ್ಲೇಸ್ ಕಡೆಗೆ ಮೆರವಣಿಗೆ ನಡೆಸಲು ಹೊರಟಾಗ ಪೊಲೀಸರು ಅವಕಾಶ ನೀಡಲಿಲ್ಲ. ಇದರಿಂದ ಕುಪಿತರಾದ ಜನ ಪೊಲೀಸರ ಜತೆ ಸಂಘರ್ಷಕ್ಕಿಳಿದರು.
ಒಂದು ತಂಡವು ಶಾಂತಿಯುತವಾಗಿ ಪ್ರತಿಭಟನೆ ಮುಂದುವರಿಸಿತ್ತು.

ಇನ್ನೊಂದು ಗುಂಪು ಪೊಲೀಸರು ಹಾಕಿದ್ದ ಅಡೆತಡೆಗಳನ್ನು ತೆಗೆದು ಮುನ್ನುಗ್ಗಲು ಯತ್ನಿಸಿದಾಗ ಹೆಚ್ಚಿನ ಬಲ ಬಳಸಿ ತಡೆಯಲಾಯಿತು. ಕಬ್ಬಿಣದ ತಡೆಬೇಲಿ ಉರುಳಿಸಿ ಮುನ್ನುಗ್ಗಲು ಯತ್ನಿಸಿದ ಕೆಲವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು.

ಯುವಕರು, ವೃದ್ಧರು ಮತ್ತು ಮಹಿಳೆಯರು ಬೆಳಿಗ್ಗೆಯಿಂದಲೇ ಜಂತರ್ ಮಂತರ್ ಎದುರು ಸೇರತೊಡಗಿದರು. ಎಲ್ಲರ ಮುಖದಲ್ಲಿ ದುಃಖ ಮಡುಗಟ್ಟಿತ್ತು. ಕೆಲವರು ಧರಣಿ ನಡೆಸಿದರೆ ಇನ್ನೂ ಕೆಲವರು ಭಿತ್ತಿಪತ್ರಗಳನ್ನು ಹಿಡಿದು ಘೋಷಣೆಗಳನ್ನು ಕೂಗಿದರು.

ಕಳೆದ ವಾರ ಭಾರಿ ಹಿಂಸಾಚಾರ ಕಂಡಿದ್ದ ಇಂಡಿಯಾ ಗೇಟ್ ಮತ್ತು ರೈಸಿನಾ ಹಿಲ್ ಪ್ರದೇಶದಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿ ಪ್ರತಿಭಟನಾಕಾರರು ಅತ್ತ ಸುಳಿಯದಂತೆ ನೋಡಿಕೊಳ್ಳಲಾಯಿತು. ರಾಜ್‌ಪಥ್, ವಿಜಯ್ ಚೌಕ್ ಸೇರಿದಂತೆ ಇಂಡಿಯಾ ಗೇಟ್ ತಲುಪುವ ಎಲ್ಲಾ ಮಾರ್ಗಗಳನ್ನು ಪೊಲೀಸರು ಮುಚ್ಚಿದ್ದರು.

ವಿಶ್ವಸಂಸ್ಥೆ ಸಂತಾಪ
ವಿಶ್ವಸಂಸ್ಥೆ (ಪಿಟಿಐ):
ದೆಹಲಿಯಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ ಯುವತಿ ಸಾವಿಗಿಡಾದ ಬಗ್ಗೆ ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿ ಬಾನ್ ಕಿ ಮೂನ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದರೆ.ಅತ್ಯಾಚಾರಿಗಳಿಗೆ ಶೀಘ್ರ ಶಿಕ್ಷೆಯಾಗುವಂತೆ ಮತ್ತು ಇನ್ನು  ಮುಂದೆ ಮಹಿಳೆಯ ವಿರುದ್ಧ ಇಂತಹ ಅಪರಾಧಗಳು ನಡೆಯದಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಭಾರತ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಗ್ರಾಮಸ್ಥರಿಗೆ ದುಃಖ
ಬಲಿಯಾ, ಉತ್ತರಪ್ರದೇಶ (ಪಿಟಿಐ):
ಅತ್ಯಾಚಾರಕ್ಕೆ ಒಳಗಾಗಿ ಸಾವಿಗೀಡಾದ ಯುವತಿಯ ಹುಟ್ಟೂರು ಮಂದ್ವಾರಾ ಕಲನ್ ಗ್ರಾಮದಲ್ಲಿ ದುಃಖ ಮಡುಗಟ್ಟಿದೆ.ಹುಟ್ಟೂರಿನಲ್ಲಿ ಶವಸಂಸ್ಕಾರ ನಡೆಯಬಹುದು ಎಂದು ಸಂಬಂಧಿಕರು ಮತ್ತು ಗ್ರಾಮಸ್ಥರು ಭಾವಿಸಿದ್ದರು. `ದೆಹಲಿಯಲ್ಲಿಯೇ ಶವ ಸಂಸ್ಕಾರ ಆಗಬೇಕು ಎಂದು ದೇವರ ಇಚ್ಛೆ ಇತ್ತೇನೊ' ಎಂದು ಗ್ರಾಮದ ಮುಖ್ಯಸ್ಥ ಕಲನ್ ಶಿವಮಂದಿರ್ ಸಿಂಗ್ ಅಭಿಪ್ರಾಯಪಟ್ಟರು.

ಇತರ ಧಾರ್ಮಿಕ ಕಾರ್ಯಕ್ರಮಗಳನ್ನು ಹುಟ್ಟೂರಿನಲ್ಲಿಯೇ ನಡೆಸಲಾಗುತ್ತದೆ. ಯುವತಿಯ ಕುಟುಂಬದ ಸದಸ್ಯರು ಇನ್ನೆರಡು ದಿನಗಳಲ್ಲಿ ದೆಹಲಿಯಿಂದ ಬರಲಿದ್ದಾರೆ ಎಂದು ಯುವತಿ ಚಿಕ್ಕಪ್ಪ ತಿಳಿಸಿದ್ದಾರೆ.

ಅಮಿತಾಭ್ ಸಂತಾಪ
ಮುಂಬೈ (ಪಿಟಿಐ):
ದೆಹಲಿಯಲ್ಲಿ ಕಾಮುಕರ ಕ್ರೌರ್ಯಕ್ಕೆ ಗುರಿಯಾಗಿ ಸಾವನ್ನಪ್ಪಿರುವ ಅರೆ ವೈದ್ಯಕೀಯ ಕೋರ್ಸ್ ವಿದ್ಯಾರ್ಥಿನಿಗೆ ಇಡೀ ದೇಶ ಶೋಕ ಸೂಚಿಸಿದೆ. ಇದರೊಟ್ಟಿಗೆ ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಕವನವೊಂದನ್ನು ರಚಿಸಿ ಸಂತಾಪ ಸೂಚಿಸಿದ್ದಾರೆ.ಯುವತಿಯನ್ನು `ಧಾಮಿನಿ' ಮತ್ತು `ಅಮಾನತ್'ಗಳಿಗೆ ಹೋಲಿಸಿರುವ ಬಚ್ಚನ್, ಹಿಂದಿ  ಮತ್ತು ಇಂಗ್ಲಿಷ್‌ನಲ್ಲಿ ಪದ್ಯ ರಚಿಸಿ ಶೋಕ ವ್ಯಕ್ತಪಡಿಸಿದ್ದಾರೆ.

ವಿವಿಧೆಡೆ ಅತ್ಯಾಚಾರ
ಪಂಜಾಬ್‌ನಲ್ಲಿ ನಾಲ್ಕು ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬಂದಿವೆ. ಒಂದು ಪ್ರಕರಣದಲ್ಲಿ ಪೊಲೀಸ್ ಮುಖ್ಯ ಪೇದೆ ವಿರುದ್ಧವೇ ದೂರು ದಾಖಲಾಗಿದೆ.ಉತ್ತರ ಪ್ರದೇಶದಲ್ಲಿ ಅತ್ಯಾಚಾರ ಮತ್ತು ಲೈಂಗಿಕ ದೌಜನ್ಯ ನಡೆದ ಮೂರು ಘಟನೆಗಳು ವರದಿಯಾಗಿವೆ.

ಆಂಧ್ರಪ್ರದೇಶದಲ್ಲಿ ಮೂರು ಅತ್ಯಾಚಾರ ಪ್ರಕರಣಗಳು ದಾಖಲಾದ ಬಗ್ಗೆ ವರದಿಯಾಗಿದ್ದು, ಪೊಲೀಸ್ ಕಾನ್‌ಸ್ಟೇಬಲ್‌ಗಳ ವಿರುದ್ಧ ದೂರು ದಾಖಲಾಗಿದೆ. ಇದರಲ್ಲಿ ಇಬ್ಬರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT