ADVERTISEMENT

ಜನಲೋಕಪಾಲ ಬಂದರೆ ಅರ್ಧದಷ್ಟು ಸಚಿವರು ಜೈಲಿಗೆ: ಕೇಜ್ರಿವಾಲ್

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2011, 12:40 IST
Last Updated 8 ಅಕ್ಟೋಬರ್ 2011, 12:40 IST

ಹಿಸ್ಸಾರ್ (ಹರ್ಯಾಣ) (ಐಎಎನ್ಎಸ್): ಅಣ್ಣಾ ಹಜಾರೆ ಮತ್ತು ಅವರ ತಂಡ ಸಿದ್ಧ ಪಡಿಸಿರುವ ಜನಲೋಕಪಾಲ ಮಸೂದೆ ಕಾನೂನಾಗಿ ಜಾರಿಯಾದರೆ ತನ್ನ ಅರ್ಧದಷ್ಟು ಸಚಿವರು ಸೆರೆಮನೆ ಸೇರಬೇಕಾಗುತ್ತದೆ ಎಂದು ಕಾಂಗ್ರೆಸ್ ಸರ್ಕಾರ ಭೀತಿಗೊಳಗಾಗಿದೆ ಎಂದು ಶನಿವಾರ ಮಾಹಿತಿ ಹಕ್ಕು (ಆರ್ ಟಿ ಐ) ಕಾರ್ಯಕರ್ತ ಅರವಿಂದ ಕೇಜ್ರಿವಾಲ್ ಇಲ್ಲಿ ಹೇಳಿದರು.

ಹಿಸ್ಸಾರ್ ಲೋಕಸಭಾ ಕ್ಷೇತ್ರದ ನರ್ನೌಂದ್ ಪಟ್ಟಣದಲ್ಲಿ  ಅಣ್ಣಾ ತಂಡದ ಕಾಂಗ್ರೆಸ್ ವಿರೋಧಿ ಪ್ರಚಾರ ಅಭಿಯಾನ ಆರಂಭಿಸುತ್ತಾ ಮಾತನಾಡಿದ ಅವರು, ಭ್ರಷ್ಟಾಚಾರದಲ್ಲಿ ಶಾಮೀಲಾಗಿರುವ ಕಾಂಗ್ರೆಸ್ ಮತ್ತು ಇತರರ ವಿರುದ್ಧ ಮತ ಚಲಾಯಿಸುವ ಮೂಲಕ ಅಭಿಯಾನಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಿದರು.

ಕಾಂಗ್ರೆಸ್ ಪಕ್ಷಕ್ಕೆ ಭ್ರಷ್ಟ ಜನರನ್ನು ಸೆರೆಮನೆಗೆ ಅಟ್ಟಲು ಮನಸ್ಸಿಲ್ಲ. ಅಥವಾ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವ ಇಚ್ಛೆಯೂ ಅದಕ್ಕೆ ಇಲ್ಲ. ಈ ಕಾರಣಕ್ಕಾಗಿ ಅವರು ಜನಲೋಕಪಾಲ ಮಸೂದೆಯನ್ನು ವಿರೋಧಿಸುತ್ತಿದ್ದಾರೆ ಎಂದು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದ ಜನಸ್ತೋಮಕ್ಕೆ ಅವರು ವಿವರಿಸಿದರು.

ಭ್ರಷ್ಟಾಚಾರದ ವಿವಿಧ ವಿಷಯಗಳ ಪಟ್ಟಿಯನ್ನು ಕೇಜ್ರಿವಾಲ್ ತೆರೆದಿಡುತ್ತಿದ್ದಂತೆಯೇ ಜಮಾಯಿಸಿದ್ದ ಜನ ಕೇಜ್ರಿವಾಲ್ ಮತ್ತು ಅಣ್ಣಾ ತಂಡದ ಪರ ಘೋಷಣೆಗಳನ್ನು ಕೂಗಿದರು.

ತಂಡದ ಮನಿಶ್ ಸಿಸೋಡಿಯ ಅವರೂ ಕೇಜ್ರಿವಾಲ್ ಜೊತೆಗೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT