ADVERTISEMENT

ಜನವರಿ 25 ಇನ್ನು ಮುಂದೆ ರಾಷ್ಟ್ರೀಯ ಮತದಾರರ ದಿನ

​ಪ್ರಜಾವಾಣಿ ವಾರ್ತೆ
Published 20 ಜನವರಿ 2011, 19:30 IST
Last Updated 20 ಜನವರಿ 2011, 19:30 IST

ನವದೆಹಲಿ (ಪಿಟಿಐ): ರಾಜಕೀಯ ಪ್ರಕ್ರಿಯೆಯಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಪ್ರೇರೇಪಿಸುವ ಉದ್ದೇಶದಿಂದ ಪ್ರತಿ ಗಣರಾಜ್ಯೋತ್ಸವದ ಮುನ್ನಾದಿನ, ಅಂದರೆ ಜ.25ರಂದು ‘ರಾಷ್ಟ್ರೀಯ ಮತದಾರರ ದಿನ’ ಆಚರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಕಾನೂನು ಇಲಾಖೆ ಸಲ್ಲಿಸಿದ್ದ ಈ ಪ್ರಸ್ತಾವಕ್ಕೆ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಸಂಪುಟ ಸಭೆ ಗುರುವಾರ ಅನುಮೋದನೆ ನೀಡಿದೆ ಎಂದು ವಾರ್ತಾ ಮತ್ತು ಪ್ರಸಾರ ಸಚಿವೆ ಅಂಬಿಕಾ ಸೋನಿ ತಿಳಿಸಿದರು.
 
ಪ್ರಸ್ತುತ ಯುವಕರಲ್ಲಿ ರಾಜಕೀಯ ಆಸಕ್ತಿ ಕ್ಷೀಣಿಸುತ್ತಿದೆ. ಕೆಲವೆಡೆ ಕೇವಲ ಶೇ 20ರಿಂದ 25ರಷ್ಟು ಯುವಕರು ಮಾತ್ರ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ನೋಂದಣಿ ಮಾಡಿಸುತ್ತಿದ್ದಾರೆ. ಈ ಸಮಸ್ಯೆಗೆ ಪರಿಹಾರ ಕಂಡುಹಿಡಿಯುವ ನಿಟ್ಟಿನಲ್ಲಿ ಚುನಾವಣಾ ಆಯೋಗವು ಪ್ರತಿವರ್ಷ ಜ.1ಕ್ಕೆ 18 ವರ್ಷ ಪೂರೈಸುವ ಎಲ್ಲ ಅರ್ಹರನ್ನೂ ಮತದಾರರ ಪಟ್ಟಿಗೆ ಸೇರಿಸುವ ಕಾರ್ಯಕ್ರಮ ಹಾಕಿಕೊಳ್ಳಲು ತೀರ್ಮಾನಿಸಿದೆ. ರಾಷ್ಟ್ರದ ಎಲ್ಲ 8.5 ಲಕ್ಷ ಮತಗಟ್ಟೆಗಳ ವ್ಯಾಪ್ತಿಗೆ ಈ ಕಾರ್ಯಕ್ರಮ ಹಾಕುವ ಉದ್ದೇಶ ಆಯೋಗ ಹೊಂದಿದೆ ಎಂದರು.
 
ಈ ಕಾರ್ಯಕ್ರಮದಡಿ ನೋಂದಣಿಗೊಂಡ ಎಲ್ಲರಿಗೂ ಅದೇ ವರ್ಷದ ಜ.25ರಂದು ಭಾವಚಿತ್ರವಿರುವ ಮತದಾರರ ಗುರುತಿನ ಚೀಟಿ ವಿತರಿಸಲಾಗುವುದು. ಅಲ್ಲದೇ ಹೊಸ ಮತದಾರರಿಗೆ ‘ಮತದಾರನಾಗಿರುವುದು ಹೆಮ್ಮೆಯ ಸತಿ-ಮತದಾನಕ್ಕೆ ಸಿದ್ಧ’ ಎಂಬ ಸ್ಫೂರ್ತಿವಾಕ್ಯವಿರುವ ಬ್ಯಾಡ್ಜ್ ನೀಡಲಾಗುವುದು ಎಂದು ಅಂಬಿಕಾ ಸೋನಿ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT