ADVERTISEMENT

ಜನಾರ್ದನ ರೆಡ್ಡಿ 14 ದಿನ ನ್ಯಾಯಾಂಗ ಬಂಧನಕ್ಕೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2011, 12:20 IST
Last Updated 5 ಸೆಪ್ಟೆಂಬರ್ 2011, 12:20 IST

ಹೈದರಾಬಾದ್: ಅಕ್ರಮ ಗಣಿಗಾರಿಕೆ ಸಂಬಂಧಿಸಿದಂತೆ ಸೊಮವಾರ ಬೆಳಿಗ್ಗೆ  ಬಳ್ಳಾರಿಯಲ್ಲಿ ಸಿಬಿಐನಿಂದ ಬಂಧನಕ್ಕೆ ಒಳಗಾದ ಕರ್ನಾಟಕದ ಮಾಜಿ ಸಚಿವ, ಓಬಳಾಪುರಂ ಗಣಿ ಕಂಪೆನಿ (ಓಎಂಸಿ) ಯ ಮಾಲಿಕ  ಜಿ.ಜನಾರ್ದನ ರೆಡ್ಡಿ ಹಾಗೂ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಬಿ.ವಿ ಶ್ರೀನಿವಾಸ ರೆಡ್ಡಿ ಅವರನ್ನು ನಾಂಪಲ್ಲಿಯ ಸಿಬಿಐ ವಿಶೇಷ ಕೋರ್ಟ್ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಸಂಜೆ ನಾಲ್ಕು ಗಂಟೆ ಸುಮಾರಿಗೆ ಜನಾರ್ದನ ರೆಡ್ಡಿ ಹಾಗೂ ಶ್ರಿನಿವಾಸ ರೆಡ್ಡಿ ಅವರನ್ನು ಸಿಬಿಐ ಅಧಿಕಾರಿಗಳು ನ್ಯಾಯಾಲಯದ ಎದುರು ಹಾಜರುಪಡಿಸಿದರು. ಒಂದೂವರೆ ಗಂಟೆಗಳ ಕಾಲ ವಿಚಾರಣೆ ನಡೆಸಿದ ನ್ಯಾಯಾಧಿಶರು ಇಬ್ಬರಿಗೂ ಸೆಪ್ಟೆಂಬರ್ 19ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.

ಇದೇ ವೇಳೆ ಜನಾರ್ದನ ರೆಡ್ಡಿ ಪರ ವಕೀಲರು ನ್ಯಾಯಾಂಗ ಬಂಧನ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯವು ಸೆಪ್ಟೆಂಬರ್ 7 ಮುಂದೂಡಿತು. ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಇಬ್ಬರನ್ನು ಪೊಲೀಸರು ಚಂಚಲಗೂಡನಲ್ಲಿರುವ ಕಾರಾಗೃಹಕ್ಕೆ ಕರೆದೊಯ್ಯಲಿದ್ದಾರೆ.

ಸೋಮವಾರ ನಸುಕಿನಲ್ಲಿ ಇಲ್ಲಿಂದ ಕರ್ನಾಟಕದ ಬಳ್ಳಾರಿಗೆ ಧಾವಿಸಿದ್ದ ಡಿಐಜಿ ಪಿ.ವಿ.ಲಕ್ಷ್ಮಿನಾರಾಯಣ ನೇತೃತ್ವದ ಹದಿನೈದು ಅಧಿಕಾರಿಗಳ ಸಿಬಿಐ ತಂಡವು ಬೆಳಿಗ್ಗೆ ಜನಾರ್ದನ ರೆಡ್ಡಿ ಹಾಗೂ ಶ್ರೀನಿವಾಸ ರೆಡ್ಡಿ ಅವರ ನಿವಾಸಗಳ  ಮೇಲೆ  ದೀಢಿರ್ ದಾಳಿ ನಡೆಸಿ,  ಹಲವಾರು ಮಹತ್ವದ ದಾಖಲೆಗಳೊಂದಿಗೆ 30 ಕೆ.ಜಿ ಚಿನ್ನ, 4.5 ಕೋಟಿಗೂ ಅಧಿಕ ನಗದು ವಶಪಡಿಸಿಕೊಂಡಿತು. ಇಬ್ಬರನ್ನೂ ತನ್ನ ವಶಕ್ಕೆ ತೆಗೆದುಕೊಂಡು, ಹೆಚ್ಚಿನ ವಿಚಾರಣೆಗಾಗಿ ಹಾಗೂ ಸಿಬಿಐ ಕೋರ್ಟ್ ಎದುರು ಹಾಜರುಪಡಿಸಲು ಸಿಬಿಐ ತಂಡ  ಅವರನ್ನು ಇಲ್ಲಿಗೆ ಕರೆತಂದಿತ್ತು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.